29.3 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 268

ಭರತೇಶ ಶೆಟ್ಟಿ, ಎಕ್ಕಾರ್

ಉತ್ತರ ಕುಮಾರ ಉತ್ತಮ ವಸ್ತ್ರ ಭೂಷಣ ಆಯ್ದುಕೊಳ್ಳುವಲ್ಲಿ ನಿರತನಾಗಿ, ಮರಳಿ ಬಂದರೂ ಪಾರ್ಥನ ಕಂಗಳು ಭೀಷ್ಮಾಚಾರ್ಯರನ್ನು ಏಕಾಗ್ರ ಚಿತ್ತದಿಂದ ಗಮನಿಸುತ್ತಿದ್ದವು. ಕರಗಳು ಗಾಂಡೀವಕ್ಕೆ ಶರ ಸಂಧಾನ ಮಾಡಿ ಸಿದ್ಧವಾಗಿಯೆ ಇದ್ದವು. ಅಜ್ಜ ಭೀಷ್ಮರು ಒರಗಿದ್ದಲ್ಲಿಂದಲೆ ಮೆಲ್ಲ ಪ್ರಯೋಗಿಸಿದ ಬಾಣ ಉತ್ತರನ ಮೈ ಸೋಕುವ ಮುನ್ನವೇ ಪಾರ್ಥ ಪ್ರಯೋಗಿಸಿದ ಶರ ಅದನ್ನು ತಡೆದು ಕತ್ತರಿಸಿ ಬಿಟ್ಟಿತು. ಉತ್ತರಕುಮಾರನಿಗೆ ಅಂಬುಗಳ ಘರ್ಷಣೆ ಕೇಳಿ ಹೌಹಾರಿ ಆಯತಪ್ಪಿ ಒಂದು ಸುತ್ತು ತಿರುಗಿ ನೋಡಿದನು. ಅಜ್ಜನ ಪ್ರಯೋಗಕ್ಕೆ ಮೊಮ್ಮಗನ ಉತ್ತರ ಈ ಉತ್ತರಕುಮಾರನಿಗೆ ಅರಿವಾಗದೆ ಉಳಿಯಿತು. ಕುಳಿತಲ್ಲಿಯೆ ಪಿತಾಮಹ ಅರ್ಜುನನ ಚಾಣಾಕ್ಷತೆಯನ್ನು ಮನದಲ್ಲಿಯೆ ಮೆಚ್ಚಿದರು.

ರಥ ಸಾರಥ್ಯ ಪೀಠದಲ್ಲಿ ಭೂಮಿಂಜಯ ರಥಿಕನಾಗಿ ಧನಂಜಯ – ಉತ್ತರ ಗೋಗ್ರಹಣ ಯುದ್ದ ಮುಗಿದಿದೆ. ಅಂಬರ ಪಥದಲ್ಲಿದ್ದ ದೇವಾನು ದೇವತೆಗಳು ಕಿರೀಟಿಯ ವಿಕ್ರಮಕ್ಕೆ ಮನಸೋತಿದ್ದಾರೆ.

ಅರ್ಜುನನೊಮ್ಮೆ ರಣರಂಗವನ್ನು ಒಂದು ಸುತ್ತು ನೋಡ ತೊಡಗಿದನು. ನೀಲವರ್ಣದ ಕೃಪರ ಧ್ವಜ, ಸುವರ್ಣ ವರ್ಣದ ಶುಭಕರ ಕಮಂಡಲ ಚಿಹ್ನೆಯ ದ್ರೋಣಾಚಾರ್ಯರ ಧ್ವಜ, ಧನುಸ್ಸಿನ ಚಿಹ್ನೆಯ ಅಶ್ವತ್ಥಾಮನ ಧ್ವಜ, ಮದಗಜವನ್ನು ಕಟ್ಟಬಲ್ಲ ಸರಪಳಿ (ಅಥವಾ ಹಗ್ಗ) ಚಿಹ್ನೆಯ ಕರ್ಣನ ಧ್ವಜ, ಘಟಸರ್ಪದ (ಉರಗಫನಿಕೇತನ) ಚಿಹ್ನೆಯ ದುರ್ಯೋಧನನ ಧ್ವಜ, ನೀಲವರ್ಣದ ಸೂರ್ಯ ನಕ್ಷತ್ರಗಳ ಚಿಹ್ನೆಯ ಭೀಷ್ಮಾಚಾರ್ಯರ ಧ್ವಜ – ಈ ಎಲ್ಲಾ ಧ್ವಜಗಳುಳ್ಳ ರಥಗಳು ಸ್ತಭ್ದವಾಗಿವೆ, ಛಿದ್ರವೂ ಆಗಿವೆ. ಇಲ್ಯಾರೂ ಎದ್ದೇಳುವ ಲಕ್ಷಣವಿಲ್ಲ. ನಮ್ಮ ರಥ ಸಾಗಲಿ ಎಂದು ಉತ್ತರನಿಗೆ ಆದೇಶ ನೀಡಿದನು ಅರ್ಜುನ. ಅಂತೆಯೆ ವಿಜಯಮಾಲೆ ಧರಿಸಿ, ರಣಭೂಮಿಯಿಂದ ರಥ ಮರಳಿ ನಿಧಾನವಾಗಿ ಹೋಗತೊಡಗಿತು. ಗೋಪಾಲಕರನ್ನು ಕರೆದು ಹೆದರಿ ಚದುರಿ ಓಡಿರುವ ಗೋವುಗಳನ್ನು ಜೊತೆಸೇರಿಸಿ ವಿರಾಟ ನಗರಿಗೆ ಅಟ್ಟಿಕೊಂಡು ಬರುವಂತೆ ಉತ್ತರಕುಮಾರನ ಮೂಲಕ ಆಜ್ಞೆ ಮಾಡಿಸಿದ.

ಎಚ್ಚೆತ್ತ ಛಲದಂಕ ಮಲ್ಲ ಸುಯೋಧನ, ಬಿದ್ದಲ್ಲಿಯೆ ತಲೆಯಿತ್ತಿ ನೋಡುತ್ತಾನೆ, ಎಲ್ಲರೂ ಜಾವದ ನಿದ್ದೆಯ ಜೋಂಪು ಹತ್ತಿರುವವರ ಹಾಗೆ ಮೈಮುರಿದುಕೊಳ್ಳುತ್ತಿದ್ದಾರೆ. ಕುಳಿತು ಅತ್ತಿತ್ತ ನೋಡುತ್ತಿದ್ದಾನೆ, ಉತ್ತರನ ಸಾರಥ್ಯದಲ್ಲಿ ಅರ್ಜುನ ನಿರ್ಭೀತನಾಗಿ ಸಾಗುತ್ತಿದ್ದಾನೆ. ಬೊಬ್ಬಿರಿದು ಆರ್ಭಟಿಸತೊಡಗಿದ “ಈ ಪಾರ್ಥ ಹೇಗೆ ಸುಲಲಿತವಾಗಿ ಹೋಗುವುದು ಸಾಧ್ಯವಾಯಿತು. ಮಹಾರಥಿಕರಿದ್ದೂ ಯಾಕೆ ತಡೆಯಲಾಗದೆ ಹೋದಿರಿ? ಎಲ್ಲಿ ಹೋಗಿತ್ತು ನಿಮ್ಮೆಲ್ಲರ ಶೌರ್ಯ, ಧೈರ್ಯ, ಸ್ಥೈರ್ಯ? ಇಷ್ಟಾದರೂ ಆತ ಹೋಗುವುದನ್ನು ನೋಡುತ್ತಾ ಮೈಮರೆತ್ತಿದ್ದೀರಲ್ಲಾ? ಇಲ್ಲಿಯ ತನಕ ಬಂದು, ಏನನ್ನೂ ಸಾಧಿಸಲಾಗದ ನೀವೆಲ್ಲಾ ಯಾಕೆ ಈ ರೀತಿ ಸುಮ್ಮನಾಗಿದ್ದೀರಿ ಹೇಳಿ!” ಎಂದು ಆಕ್ರೋಶ ಭರಿತನಾಗಿ ಪ್ರಶ್ನಿಸತೊಡಗಿದನು.

ಪಿತಾಮಹ ಭೀಷ್ಮರಿಗೆ ದುರ್ಯೋಧನನ ಅಸಹಾಯಕ ಸ್ಥಿತಿಯನ್ನೂ, ರೋದನೆಯನ್ನೂ ಕಂಡು ಕಿರುನಗೆ ನುಸುಳಿ ಬಂತು. “ಅಯ್ಯಾ ದುರ್ಯೋಧನಾ! ನಿನ್ನ ಕೈಯಲ್ಲೂ ಆಯುಧವಿದೆ ತಾನೆ? ಬುದ್ದಿಯೂ ಇದೆಯಲ್ಲವೆ? ಮತ್ಯಾಕೆ ಪ್ರಯೋಗಿಸಿ ಅರ್ಜುನನ್ನು ತಡೆಯಲಾರದೆ ಉಳಿದೆ? ಈವರೆಗೆ ನೀನೇಕೆ ವಿವಶನಾಗಿ ಸುಮ್ಮನೆ ಬಿದ್ದುಕೊಂಡಿದ್ದೆ? ಉಳಿದವರ ಮೇಲೇಕೆ ಈಗ ಕ್ರೋಧಾವೇಶ ತೋರಿಸುವೆ? ನಿನ್ನಂತೆಯೆ ರಥಿಕರೂ ಸೇನೆಯೂ ಅರ್ಜುನನ ಆರ್ಜಿತ ದಿವ್ಯ ವಿದ್ಯಾ ಪ್ರಯೋಗದಿಂದ ನಿಸ್ತೇಜರೂ, ನಿಶ್ಚೇಷ್ಟಿತರೂ ಆಗಿ ಒರಗಿಸಲ್ಪಟ್ಟಿದ್ದರು. ಇದು ನಮ್ಮವರ್ಯಾರ ಅಸಡ್ಡೆಯೂ ಅಲ್ಲ, ಅರ್ಜುನನ ಬಗ್ಗೆ ಒಲವಿನ ಉದಾರತೆಯೂ ಅಲ್ಲ. ಆತನ ಸಾಧನೆಯ ಪ್ರಭಾವದ ಪರಿಣಾಮ ನಮ್ಮ ಮೇಲಾಗಿರುವುದು. ನೋಡು ದುರ್ಯೋಧನಾ! ಅರ್ಜುನ ಕ್ರೂರಕರ್ಮಿಯಲ್ಲ. ಆತನಲ್ಲಿ ವಿಕೃತಿಯಾಗಲಿ, ದುರುದ್ದೇಶವಾಗಲಿ, ಅತಿರೇಕದ ಪ್ರತಿಕಾರ ಬುದ್ಧಿಯಾಗಲಿ ಇಲ್ಲ. ಸ್ವಧರ್ಮವನ್ನು ಮೀರದೆ ಬದುಕುತ್ತಿರುವಾತ ಪಾರ್ಥ. ಪಾಂಡವರಿಗೆ ಎಷ್ಟು ಸಂಕಷ್ಟ ಬಂದರೂ, ನೀನು ಕಷ್ಟ ನೀಡಿದರೂ ಧರ್ಮಬುದ್ಧಿಯಿಂದಲೆ ಅದನ್ನು ಸ್ವೀಕರಿಸಿ ಬದುಕಿ ಆದರ್ಶಪ್ರಾಯರಾಗಿದ್ದಾರೆ. ಇಂದು ಪಾರ್ಥನಲ್ಲಿ ನಿನ್ನಲ್ಲಿರುವ ಕ್ರೌರ್ಯ, ಪ್ರತಿಕಾರ, ಅಧಿಕಾರ ದಾಹ, ಹಠ, ಛಲ, ಸ್ವಾರ್ಥ ಇತ್ಯಾದಿ ಗುಣಗಳಿದ್ದರೆ, ಈಗ ನಮ್ಮೆಲ್ಲರ ಈ ಶರೀರಗಳಲ್ಲಿ ಪ್ರಾಣವಾಯುವಾಗಲಿ, ಜೀವವಾಗಲಿ ಉಳಿಯುತ್ತಿರಲಿಲ್ಲ. ಈಗ ಎದ್ದೇಳುವ ಪ್ರಮೇಯ ಇರದೆ, ಸಾಮೂಹಿಕ ಅಂತ್ಯಸಂಸ್ಕಾರಕ್ಕೆ ಯಾರಾದರು ನಮ್ಮ ಮೃತ ಕಾಯವನ್ನು ಎತ್ತುತ್ತಲಿರುತ್ತಿದ್ದರೊ ಏನೋ! ಈಗಲಾದರೂ ಅರ್ಥೈಸಿಕೊಂಡು ಪಾಂಡವರು ಅದರಲ್ಲೂ, ಮಧ್ಯಮ ಪಾಂಡವ ನಿನಗಿತ್ತ ಎರಡನೆ ಬಾರಿ ( ಮೊದಲು ಘೋಷ ಯಾತ್ರೆಯಲ್ಲಿ ಗಂಧರ್ವನಿಂದ ರಕ್ಷಿಸಿ) ಇತ್ತ ಪ್ರಾಣ ಭಿಕ್ಷೆಗೆ ಕೃತಜ್ಞತಾ ಭಾವದಿಂದ ಧನ್ಯನಾಗಿ ಬದುಕಲು ಹಸ್ತಿನೆ ಸೇರಿಕಳ್ಳುವುದು ಉತ್ತಮ. ಗೋವುಗಳನ್ನು ಅರ್ಜುನ ಬಿಡಿಸಿಕೊಂಡು ಹೋಗಲಿ. ಆತನನ್ನು ತಡೆಯಬಲ್ಲವರು ಯಾರಿದ್ದಾರೆ? ನೀನು ಯೋಚಿಸಿ ತೀರ್ಮಾನಿಸು.” ಎಂದು ವಿಸ್ತರಿಸಿ ವಿಚಾರ ತಿಳಿಸಿ ಬುದ್ಧಿ ಹೇಳಿದರು.

ದುರ್ಯೋಧನನಿಗೂ ಈ ಪಾರ್ಥನನ್ನು‌ ಮತ್ತೆ ಕೆಣಕಿದರೆ ನಮಗೆ ಕಷ್ಟವೂ ನಷ್ಟವೂ ಆದಿತೆಂದು ಭಾಸವಾಯಿತು. ಅಜ್ಜನ ಅಭಿಪ್ರಾಯ ಸರಿಯೆಂದೂ ಮನವರಿಕೆಯಾಗಿ ತಿರುಗಿ ಪ್ರಜ್ವಲಿಸುತ್ತಾ ಸಾಗುತ್ತಿರುವ ಪಾರ್ಥನತ್ತ ತಿರುಗಿ ನೋಡಿದನು, ಹಸ್ತಿನೆಯ ಸೇನೆಗೆ ಮರಳಿ ಪುರ ಸೇರಲು ಆದೇಶ ನೀಡಿದನು. ಆಗ ಎದ್ದು ನಿಂತ ಯೋಧರೂ, ರಥಿಕರೂ ಕೌರವನ ಆಜ್ಞೆಯಂತೆ ಹೊರಡಲು ಅನುವಾದರು.

ಹೀಗೆ ಹಿಂದಿರುಗುವ ಸಿದ್ಧತೆಯಲ್ಲಿರುವ ಕುರುಸೇನೆಯನ್ನು ಅರ್ಜುನನೂ ತಿರುಗಿ ನೋಡಿದನು. ರಥ ನಿಲ್ಲಿಸಿ, ಎದ್ದು ನಿಂತು ಅಜ್ಜ ಭೀಷ್ಮರಿಗೂ, ಗುರು ದ್ರೋಣಾಚಾರ್ಯರಿಗೂ ಕರ ಜೋಡಿಸಿ ಶಿರ ಬಾಗಿ ನಮಿಸಿದನು. ಜೋಡು ಶರಗಳನ್ನು ಕೃಪಾಚಾರ್ಯರ ಪಾದಮೂಲದಲ್ಲಿ ಬೀಳುವಂತೆ ಪ್ರಯೋಗಿಸಿ ಶರಸಂಧಾನ ಮುಖೇನ ಅವರಿಗೂ ಪಾದಸ್ಪರ್ಶಿ ನಮನ ಸಲ್ಲಿಸಿದನು. ಮತ್ತೆರಡು ಶರಗಳನ್ನು ಅಶ್ವತ್ಥಾಮನ ಭುಜಗಳನ್ನು ಸವರುತ್ತಾ ಸಾಗುವಂತೆ ಪ್ರಯೋಗಿಸಿ ಆಲಿಂಗನದ ಮೈತ್ರಿ ಭಾವ ಪ್ರಕಟಿಸಿದನು. ಕರ್ಣ – ದುರ್ಯೋಧನರನ್ನು ಕಂಡಾಗ ಯಾಕೊ ಧನಂಜಯನಿಗೆ ತುಸು ಸಿಟ್ಟು ಮನಮಾಡಿತು. ಶರಗಳನ್ನು ಪ್ರಯೋಗಿಸಿ ದುರ್ಯೋಧನನ ಮುತ್ತಿನ ಕಿರೀಟ ಹಾರಿಸಿದ, ಕರ್ಣನ ಸೊಂಟಕ್ಕೆ ಪ್ರಯೋಗಿಸಿ ಅಂಗರಾಜ ಅಂಗಾತ ಬೀಳುವಂತೆ ಮಾಡಿದನು. ತನ್ನ ಗಾಂಡೀವ ತಂತಿಯನ್ನೆಳೆದು ಮೀಟಿ ಝೇವಡೆಯುವಂತೆ ಮಾಡಿ ವೀರಾವೇಶದಿಂದ ಜಯಘೋಷವಾಗಿ ಅಬ್ಬರಿಸುವ ಝೇಂಕಾರದ ತರಂಗಗಳನ್ನೆಬ್ಬಿಸಿದನು. ಉತ್ತರಕುಮಾರನೂ ಮಹೋಲ್ಲಾಸದಿಂದ ಧನಂಜಯನ ವಿಕ್ರಮವನ್ನು ಕೂಗಿ ಕೊಂಡಾಡಿ ಜಯಘೋಷ ಉದ್ಘೋಷಿಸತೊಡಗಿದನು. ಈ ವಿಜಯೋತ್ಸವ ನೋಡುತ್ತಿದ್ದ ಕೌರವನಿಗೆ ಮೈಮೇಲಾಗಿರುವ ಗಾಯಗಳಿಗೆ ಉಪ್ಪು ಹಾಕಿದ ತೆರದಲ್ಲಿ ಉರಿಯತೊಡಗಿತು. ಕರ್ಣನಿಗೆ ಅಸಹನೀಯ ರೋಷ, ತಾಪ, ಪ್ರತಿಕಾರದ ಕಿಚ್ಚು, ಅಸಹಾಯಕ ಸ್ಥಿತಿ ಉಮ್ಮಳಿಸಿದರೂ ಈಗ ಹಲ್ಲುಕಿತ್ತ ಸರ್ಪದಂತಾಗಿದ್ದಾನೆ. ಇವರಿಬ್ಬರೂ ಸಮಸ್ತ ಸೇನೆಯ ಜೊತೆ ನಿರುಪಾಯರಾಗಿ ತೆಪ್ಪಗೆ ಹಸ್ತಿನೆಯತ್ತ ಮುಖಮಾಡದೆ ಅನ್ಯ ಮಾರ್ಗವಿರಲಿಲ್ಲ. ಬಂದ ದಾರಿಗೆ ಸುಂಕವಿಲ್ಲ ಎಂದು ನೋವುನ್ನು ಉಣ್ಣುತ್ತಾ ಮರಳಿ ಹೊರಟರು.

ಅರ್ಜುನ ಉತ್ತರಕುಮಾರನೊಡನೆ ಕುರುಸೇನೆಯ ನಿರ್ಗಮನವನ್ನು ನೋಡುತ್ತಾ ನಿಂತಿದ್ದಾರೆ. ರಣಕ್ಷೇತ್ರದಿಂದ ಹೊರಟು ಹೋಯಿತು ಕುರು ಸೇನೆ. “ವತ್ಸಾ! ಅದ್ಬುತ ವಿಜಯ ಪ್ರಾಪ್ತವಾಯಿತು. ನಮ್ಮ ರಥ ಮೊದಲು‌ ನಾವು ಹೋಗಿದ್ದ ಸ್ಮಶಾನದ ಬನ್ನಿ ಮರದೆಡೆಗೆ ಸಾಗಲಿ” ಎಂದನು ಪಾರ್ಥ.

ಹಾಗೆ ಬರುವಾಗ ದಾರಿಯಲ್ಲಿ ಹೆದರಿ ಓಡಿ ಬಂದಿದ್ದ ಕುರು ಸೈನಿಕರು ಕಾಣ ಸಿಕ್ಕರು. ಪಾರ್ಥನನ್ನು ಕಂಡು ಹೆದರಿ ನಡುಗ ತೊಡಗಿದರು. “ಅಯ್ಯಾ ಸೈನಿಕರೆ, ದೀನರನ್ನು ನಾನು ಹಿಂಸಿಸಲಾರೆ. ಹೋಗಿ‌ ನಿಮ್ಮ ಪುರ – ಮನೆಗಳನ್ನು ಸೇರಿಕೊಳ್ಳಿ” ಎಂದು ಅಭಯ ನೀಡಿ ಮನ್ನಿಸಿ ಕಳುಹಿಸಿದನು ಅರ್ಜುನ.

ಪಾರ್ಥನ ಅನುಜ್ಞೆಯಂತೆ ಸ್ಮಶಾನದೆಡೆ ರಥವನ್ನೊಯ್ದ ಉತ್ತರ ಕುಮಾರ. ಬನ್ನೀ ಮರದಲ್ಲಿ ಗಾಂಡೀವವನ್ನೂ, ದಿವ್ಯಶರ, ತೂಣಿರಗಳನ್ನೂ ಮೊದಲಿನಂತೆಯೆ ಕಟ್ಟಿಟ್ಟು, ದೇವಾನುದೇವತೆಗಳ ರಕ್ಷಣೆಗಾಗಿ ಸಂಪ್ರಾರ್ಥಿಸಿದನು. ಮರಳಿ ಬ್ರಹನ್ನಳೆಯಾಗಿ ಬಳೆತೊಟ್ಟು, ಕೈಗಾಪುಗಳನ್ನು ಕಳಚಿಟ್ಟನು ಅರ್ಜುನ. ಸಾರಥಿಯ ಪೀಠವೇರಿ ಕುಳಿತ ಬ್ರಹನ್ನಳೆಯನ್ನು ಕಂಡು ಉತ್ತರಕುಮಾರನಿಗೆ ವಿಚಿತ್ರವೆಣಿಸಿತು.

ಆಗ ಪಾರ್ಥ “ಅಯ್ಯಾ ಕುಮಾರ, ಗಾಬರಿಯಾಗಬೇಡ, ಸದ್ಯ ನೀನು ಕುರುಸೇನೆಯನ್ನು ಗೆದ್ದು ಗೋವುಗಳನ್ನು ಬಿಡಿಸಿ ತಂದಿರುವುದು. ನಾನು ಸಾರಥಿಯಾಗಿ ಸಹಕರಿಸಿದ್ದೇನೆ. ವಾಸ್ತವ ವಿಚಾರ ತಿಳಿಸಬೇಕಾದ ಸಮಯ ಬಂದಾಗ ಪ್ರಕಟಗೊಳ್ಳುತ್ತದೆ. ಹೇಗೆ ನಾಟ್ಯಾಚಾರ್ಯ ಬ್ರಹನ್ನಳೆಯಾಗಿ ನಿನ್ನನ್ನು ಅರಮನೆಯಿಂದ ಕರೆ ಬಂದಿದ್ದೇನೊ ಹಾಗೆಯೆ ಮರಳಿ ಹೋಗಬೇಕಾದ ಅಗತ್ಯವಿದೆ. ವಾಸ್ತವ ಸ್ಥಿತಿಯಲ್ಲಿ ಸತ್ಯ ರಹಸ್ಯವಾಗಿರಲಿ. ಸಂದೇಶವಾಹಕರನ್ನು ಕಳುಹಿಸಿ- ‘ಯುವರಾಜ ಉತ್ತರಕುಮಾರರು ಯುದ್ದ ಗೆದ್ದು, ಗೋವುಗಳನ್ನು ಬಿಡಿಸಿಕೊಂಡು ಬರುತ್ತಿದ್ದಾರೆ’ ಎಂದು ಅರಮನೆಗೆ ತಕ್ಷಣ ಸುದ್ಧಿ ಕಳುಹಿಸು” ಎಂದು ಅರ್ಜುನ ಹೇಳಿದನು. ಹಾಗೆಯೆ ಒಪ್ಪಿ ನಡೆದುಕೊಂಡನು ಉತ್ತರಕುಮಾರ.
ವಿರಾಟ ಪುತ್ರ ರಥಿಕನಾಗಿ, ಬ್ರಹನ್ನಳೆ ಸಾರಥಿಯಾಗಿ ರಥ ವಿರಾಟ ನಗರಿಯತ್ತ ಸಾಗುತ್ತಿದೆ.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page