24 C
Udupi
Sunday, August 17, 2025
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ 266

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೬೭ ಮಹಾಭಾರತ

ಉತ್ತರಕುಮಾರನು ಪಾರ್ಥನ ರಥವನ್ನು ಭೀಷ್ಮ ದ್ರೋಣಾದಿಗಳು ವಿರಚಿಸಿ ನಿಂತ ವ್ಯೂಹವನ್ನು ಭೇದಿಸಲು ತೊಡಗದೆ, ಮೊದಲಾಗಿ ಬಲಭಾಗದಿಂದ ಹಸ್ತಿನಾವತಿಗೆ ತೆರಳುತ್ತಿದ್ದ ಸೈನ್ಯದತ್ತ ಶರವೇಗದಲ್ಲಿ ಹಾರಿಸಿದನು. ದ್ರೋಣಾಚಾರ್ಯರು ಈ ವೇಗವನ್ನು ಕಂಡು ಅರ್ಜುನ ದುರ್ಯೋಧನ ಮತ್ತು ಗೋವುಗಳನ್ನು ಅರಸುತ್ತಾ ಹೋಗುತ್ತಿದ್ದಾನೆ. ಅಲ್ಲಿ ತಲುಪುವ ಮೊದಲು ನಾವು ತಡೆಯಬೇಕು. ಎಂದು ಸೇನೆಗೆ ಆದೇಶ ನೀಡಿದರು. ಅಷ್ಟರಲ್ಲಾಗಲೆ ಪಾರ್ಥ ಅಕ್ಷಯಾಸ್ತ್ರಗಳನ್ನು ಪ್ರಯೋಗಿಸಿ ಸೈನ್ಯಕ್ಕೂ, ಗೋವುಗಳು ಹೋಗುತ್ತಿದ್ದ ದಾರಿಗೂ ಅಡ್ಡವಾಗಿ ಬೇಲಿಯಂತೆ ಶರಪಂಜರವನ್ನು ನಿರ್ಮಿಸಿ ಬಿಟ್ಟನು. ಬೆಂಗಾವಲಿಗಿದ್ದ ಸೇನೆಗೆ ಏನಾಗುತ್ತಿದೆ ಎಂದು ಅರ್ಥವಾಗದೆ ವಿಸ್ಮಿತರಾಗಿ ನೋಡುತ್ತಿದ್ದಾರೆ. ಗೋವುಗಳು ಕೌರವರ ವಶದಿಂದ ಮುಕ್ತವಾದವು. ಮತ್ಸ್ಯ ದೇಶದತ್ತ ತಿರುಗಿ ಸಾಗುವಂತೆ ಬಾಣಗಳಿಂದಲೆ ಅರೆಕ್ಷಣದಲ್ಲಿ ತಡೆ ನಿರ್ಮಿಸಿ, ಪುರದತ್ತ ಸಾಗಬಲ್ಲ ದಾರಿ ವಿರಚಿಸಿ ಆ ಕಡೆಯ ದಿಕ್ಕನ್ನಷ್ಟೆ ತೆರೆದಿಟ್ಟನು. ಹೀಗಾಗುತ್ತಿರುವಾಗ ಹೆದರಿ, ಜಿಗಿಯುತ್ತಾ, ಬಾಲವೆತ್ತಿ ದನಗಳು ಕಾಣಸಿಕ್ಕ ದಾರಿಯತ್ತ ಓಡುತ್ತಾ, ಮತ್ಸ್ಯದೇಶದ ಕಡೆ ಸಾಗಿದವು. ಅರ್ಜುನನಿಗೆ ತಾನು ಬಂದ ಪ್ರಧಾನ ಕಾರ್ಯ ಆಯಿತು, ಗೋವುಗಳನ್ನು ಬಂಧನದಿಂದ ಬಿಡುಗಡೆಗೊಳಿಸಿದಕ್ಕೆ ಸಮಾಧಾನವಾಯಿತು.

ಅರ್ಜುನ ರಣಮುಖದಲ್ಲಿ ಶೋಭಿಸುವುದನ್ನು, ಆತನ ಯುದ್ಧ ವೈಖರಿಯನ್ನು ಕಾಣಲು ದೇವಲೋಕದ ಇಂದ್ರನ ಮಣಿರತ್ನಮಯ ವಿಮಾನರಥದಲ್ಲಿ ಕುರುವಂಶದ ಪಿತೃಗಳಾದ ವಸುಮನ, ಬಲಾಕ್ಷ, ಶಿಬಿ, ಯಯಾತಿ, ಸಗರ, ನಹುಷ, ಮಾಂಧಾತ, ಗಯಾದಿಗಳೂ, ಅಷ್ಟ ದಿಕ್ಪಾಲಕರು, ಗಂಧರ್ವರು, ದೇವ ಸಮೂಹಗಳೂ, ಸಿದ್ಧರೂ, ಪರಮ ಋಷಿಗಳು ಅಂಬರ ಪಥದಲ್ಲಿ ನಿಂತು ನೋಡಲು ಬಂದಿದ್ದಾರೆ. ಅವರಿಗೂ ಕೌತುಕ ಕರ್ಣ, ದ್ರೋಣ, ಭೀಷ್ಮ ಕೃಪಾದಿಗಳಿರುವ ಸಮಗ್ರ ಕುರು ಸೇನೆಯನ್ನು ಸವ್ಯಸಾಚಿ ಏಕಾಂಗಿಯಾಗಿ ಯಾವ ರೀತಿ ರಣಾಂಗಣದಿಂದ ಹಿಮ್ಮೆಟ್ಟಿಸಿಯಾನು? ಇದನ್ನು ಕಣ್ಣಾರೆ ಕಂಡು ಅನುಭವಿಸಬೇಕು.

ಇತ್ತ ಕೌರವ ಸೇನೆ ಗೋವುಗಳನ್ನು ಬಿಡಿಸಿಕೊಂಡ ಅರ್ಜುನನ ಮೇಲೆ ತೀಕ್ಷ್ಣವಾಗಿ ಮುಗಿ ಬೀಳುತ್ತಿದೆ. ಮುಂಚೂಣಿಯಲ್ಲಿ ಕರ್ಣನ ಜೊತೆ ಆತನ ಸೋದರ ಸಂಗ್ರಾಮಜಿತ, ಮಿತ್ರರಾದ ಶತ್ರುಸಹ, ಜಯ ಮೊದಲಾದವರು ಉಗ್ರವಾಗಿ ಎರಗಿದರು. ವಿಕರ್ಣಾದಿ ವೀರರೂ ಮುಂಗಡೆಗೆ ಬಂದು ಅರ್ಜುನನನ್ನು ತಡೆಯುವ ದುಸ್ಸಾಹಸಕ್ಕೆ ಮನಮಾಡಿದರು. ಅರೆಕ್ಷಣದಲ್ಲಿ ಅವರೆಲ್ಲರಿಗೂ ಕರ್ಣ ನೋಡುತ್ತಿರುವಂತೆಯೆ ರಣಧಾರುಣಿಯಲ್ಲಿ ಮರಣವನ್ನಪ್ಪಿ ಶಯನ ಸ್ಥಿತಿ ಕಾಣಿಸಿದ ಪಾರ್ಥ. ತನ್ನ ಸಾರಥಿ ಉತ್ತರನಿಗೆ ರಥವನ್ನು ಮುಂದೊತ್ತಿ ಯುದ್ದ ಮಾಡಬೇಕೆಂಬ ಉತ್ಕಟ ಛಲವುಳ್ಳ ಕರ್ಣನತ್ತ ಒಯ್ಯಲು ಹೇಳಿದನು. ತನ್ನ ಸೋದರ ಸಂಗ್ರಾಮಜಿತನು ಕಣ್ಣೆದುರು ಪಾರ್ಥನಿಂದ ಹತನಾದಾಗ, ಕಾಪಾಡಲಾಗದೆ ಹೋದ ಕರ್ಣ ಈಗ ಅತ್ಯುಗ್ರನಾಗಿದ್ದಾನೆ. ಸರಸರನೆ ಹನ್ನೆರಡು ಶರಗಳನ್ನು ಎಳೆದೆಳೆದು ಅರ್ಜುನನ ರಥ, ಕುದುರೆ, ಸಾರಥಿ ಉತ್ತರನಿಗೆ ಗುರಿಯಾಗಿ ಪ್ರಯೋಗಿಸತೊಡಗಿದನು. ಕುದುರೆಗಳು, ಉತ್ತರಕುಮಾರ ಗಾಯಗೊಂಡರು. ಇಷ್ಟಾದಾಗ ಅರ್ಜುನ ಸುಮ್ಮನುಳಿದಾನೆ? ಅತ್ಯುಗ್ರ ಕದನವೆ ಸಾಗಿತು. ಅರ್ಜುನ ‘ಭಲ್ಲ’ ಎಂಬ ದಿವ್ಯ ಶರಗಳನ್ನು ತೂಣಿರದಿಂದೆಳೆದು ಕರ್ಣನಿಗೆ ಗುರಿಯಾಗಿ ಪ್ರಯೋಗಿಸತೊಡಗಿದನು. ಕರ್ಣನ ತೋಳು ತೀವ್ರವಾಗಿ ಘಾಸಿಯಾಯಿತು. ಕೋಲ್ಮಿಂಚಿನಂತೆ ಪಾರ್ಥನಂಬುಗಳು ಕರ್ಣನ ತೊಡೆ, ತಲೆ, ಹಣೆ, ಪಾದಗಳನ್ನು ಚುಚ್ಚಿ ಆತನ ರಥದಲ್ಲಿ ಬಂಧಿಸಿದಂತಹ ಸ್ಥಿತಿಯಾಯಿತು. ತಕ್ಷಣ ಕರ್ಣ ತನ್ನ ಸಾರಥಿಗೆ ತನ್ನ ರಥವನ್ನು ವ್ಯೂಹ ಮಧ್ಯಕ್ಕೊಯ್ಯಲು ಆಜ್ಞೆ ಮಾಡಿದ. ವ್ಯೂಹದ ಒಳ ನುಸುಳಿ ಪಾರ್ಥನಿಂದ ತಪ್ಪಿಸುವ ಸ್ಥಿತಿ ಕರ್ಣನದ್ದಾಯಿತು. ಕರ್ಣ ತನ್ನನ್ನು ತಾನು ತನ್ನ ರಥದಿಂದ ಬಿಡಿಸಿಕೊಳ್ಳಲು ಬಹಳ ಹೊತ್ತು ಬೇಕಾಯಿತು.

ಕರ್ಣನ ಸ್ಥಿತಿ ಹೀಗಾಗುತ್ತಲೆ, ಮುಂದೆ ಹೋಗಲಾರದಂತೆ ಶರಪಂಜರ ನಿರ್ಮಿಸಿ ತಡೆಯಲ್ಪಟ್ಟಿದ್ದ ದುರ್ಯೋಧನ ಎದುರಾದನು. ಅಷ್ಟರಲ್ಲಿ ಇದನ್ನು ನೋಡಿದ ಕೃಪಾಚಾರ್ಯರು ದುರ್ಯೋಧನನ ರಕ್ಷಣೆಗೆ ಧಾವಿಸಿ ಅರ್ಜುನನತ್ತ ಬಾಣ ಪ್ರಯೋಗಿಸಿದರು. ಘನಘೋರ ಶಸ್ತ್ರ ವಿದ್ಯಾ ಪ್ರದರ್ಶನ ನಡೆದು ಹೋಯಿತು. ಕೃಪಾಚಾರ್ಯರೇನು ಸಾಮಾನ್ಯರೆ? ಒಂದರ ಮೇಲೊಂದರಂತೆ ತನ್ನ ವಿದ್ಯಾ ವಿಶೇಷಗಳಿಂದ ಪಾರ್ಥನಿಗೆ ತಡೆಯೊಡ್ಡಿ ನಿಲ್ಲಿಸತೊಡಗಿದರು. ಅವರು ಪ್ರಾಥಮಿಕ ಗುರುಗಳಲ್ಲವೆ ಅರ್ಜುನನಿಗೆ. ಅತ್ಯುಗ್ರ ದ್ವಂದ್ವ ನೀಡುತ್ತಿದ್ದ ಕೃಪಾಚಾರ್ಯರ ಲೋಹ ಕವಚವನ್ನು ಸೀಳಿ ಕತ್ತರಿಸಿಬಿಟ್ಟನು ಪಾರ್ಥ. ಅವರ ಬಿಲ್ಲನ್ನೂ ತುಂಡರಿಸಿದನು. ಕ್ರಮದಂತೆ ಹಲವು ದಿವ್ಯ ಧನುಸ್ಸುಗಳನ್ನು ಕೈಗೆತ್ತಿಕೊಂಡರೂ ಅವೆಲ್ಲವೂ ಪಾರ್ಥನಿಂದ ಕತ್ತರಿಸಲ್ಪಟ್ಟವು. ಇನ್ನೂ ಇವರು ತಡೆದರೆ ಆಗದೆಂದು ರಥದ ನೊಗವನ್ನೂ, ಚಕ್ರಗಳನ್ನೂ ಛೇದಿಸಿ ಅವರನ್ನು ವಿರಥರನ್ನಾಗಿಸಿ ಬೀಳಿಸಿ ಬಿಟ್ಟನು.

ಕೃಪಾಚಾರ್ಯರು ಬೀಳುತ್ತಿದ್ದಂತೆಯೆ ದ್ರೋಣಾಚಾರ್ಯರು ಇದಿರಾಗಿ ಬಂದರು. ಗುರುಶಿಷ್ಯರ ಸಂಗ್ರಾಮ, ಇಬ್ಬರೂ ಸೋಲದವರು – ಅಜೇಯರು. ವಿದ್ಯಾಪಾರಂಗತರು, ಉದಾತ್ತರು, ಮಹಾಬಲರು, ಮಹಾರಥಿಗಳು ಆದ ಇವರೀರ್ವರು ಪರ್ವತಗಳಂತೆ ಪರಸ್ಪರ ಎದುರಾಗಿದ್ದಾರೆ. ಪಾರ್ಥ ತನ್ನ ಗುರುವಿಗೆ ವಂದಿಸಿ ಶಿರಬಾಗಿ ಪ್ರಣಾಮಗಳನ್ನು ಸಲ್ಲಿಸಿದನು. ಗುರುಗಳೇ ನೀವಾಗಿ ನನ್ನ ಮೇಲೆ ಬಾಣ ಪ್ರಯೋಗಿಸದೆ ನಾನು ನಿಮ್ಮೊಡನೆ ಯುದ್ದ ಆರಂಭಿಸಲಾರೆ. ಬಯಸುವಿರಾದರೆ ನೀವು ನನ್ನ ಮೇಲೆ ಆಕ್ರಮಣ ಮಾಡಬೇಕು ಎಂದು ಬೇಡಿಕೊಂಡನು. ದ್ರೋಣಾಚಾರ್ಯರಿಗೆ ಅರ್ಜುನನ ಗುರು ಭಕ್ತಿ ಅತಿ ಮೆಚ್ಚುಗೆಯಾಯಿತು. ಆತನ ಇಚ್ಚೆಯಂತೆಯೆ ಒಂದರ ಮೇಲೊಂದರಂತೆ ಶರವರ್ಷಗಳನ್ನು ಪಾರ್ಥನ ಮೇಲೆ ಸುರಿಸಿದರು. ಶಿಷ್ಯೋತ್ತಮನಲ್ಲವೆ ಭೀಭತ್ಸು! ಸರ್ವಾಸ್ತ್ರಗಳನ್ನೂ ಪಥ ಮಧ್ಯದಲ್ಲೇ ಕಡಿದು ಹಾಕಿದನು. ದ್ರೋಣ – ಅರ್ಜುನರ ಯುದ್ದ ಯಾವ ಮಟ್ಟ ತಲುಪಿತು ಎಂದರೆ ದಿವ್ಯಾಸ್ತ್ರಗಳ ಮಹಾಪೂರ ಹರಿದು ಘರ್ಷಿಸಿ ಸ್ಪೋಟಿಸಿ ಪ್ರಳಯ ಸದೃಶ ಸ್ಥಿತಿ ನಿರ್ಮಾಣವಾಯಿತು. ಗಗನ ಪಥದಲ್ಲಿ ನಿಂತು ಯುದ್ಧ ನೋಡುತ್ತಿದ್ದ ದೇವಾನು ದೇವತೆಗಳು, ಪಿತೃಗಳು ದ್ರೋಣಾಚಾರ್ಯರ ಸಾಮರ್ಥ್ಯವನ್ನು ಹಾಡಿ ಹೊಗಳತೊಡಗಿದರು. “ದೇವ, ದಾನವ, ಸರ್ಪ, ಗಂಧರ್ವರನ್ನೆಲ್ಲಾ ಕೆಡ ಹಾಕಬಲ್ಲ ಪಾರ್ಥನನ್ನು ಈ ತೆರನಾಗಿ ಉಗ್ರ ಸಮರದಲ್ಲಿ ವ್ಯಸ್ಥಗೊಳಿಸದ ಗುರು ದ್ರೋಣರೆ! ಶಹಬ್ಬಾಸ್! “

ಅರ್ಜುನನೂ ಉಗ್ರನಾಗಿದ್ದಾನೆ, ಅಂತರಗಳು ಇಲ್ಲದೆ ಅಂಟಿಕೊಂಡಂತೆ ಸಾಗುವ ಶೀಘ್ರಾತಿ ಶೀಘ್ರ ಶರಗಳನ್ನು ಸಂಧಾನಗೈದು ದ್ರೋಣರೆದುರು ಶರ ಚಪ್ಪರದಂತೆ ಪ್ರಯೋಗಿಸಿ ಖಂಡಿಸಲಾಗದಂತೆ ಮಾಡಿ ಕಂಗೆಡಿಸಿದನು. ಗುರುವಿಗೆ ತನ್ನ ಶಿಷ್ಯನ ಅಸಮ ಪರಾಕ್ರಮ ಕಂಡು ಅನುಭವಿಸಿ ಸಂತೋಷ ಆದರೂ ಅಜೇಯನಾಗಿರುವ ತನ್ನ ಸ್ವಾಭಿಮಾನದ ಕಿಚ್ಚು ಹೊತ್ತಿ ಉರಿಯುತ್ತಿತ್ತು. ತನಗೆ ಹಿನ್ನಡೆಯಾಗುತ್ತಿದ್ದಂತೆ ಪುತ್ರ ಅಶ್ವತ್ಥಾಮ ಅರ್ಜುನನ ಮುಂದಾಗಿ ವ್ಯೂಹದ ಮುಂಚೂಣಿಗೆ ಬಂದನು. ಅತಿ ಭಯಂಕರ ಕಾಳಗ ನಡೆಯಿತು. ಅಶ್ವತ್ಥಾಮ ಒಮ್ಮೆಗೆ ಅರ್ಜುನನ ಬಿಲ್ಲಿನ ಹಗ್ಗವನ್ನು ಕಡಿದು ದೇವತೆಗಳ ಶ್ಲಾಘನೆಗೂ ಪಾತ್ರನಾದನು. ಕ್ಷಣಾರ್ಧದಲ್ಲಿ ಸಂಭಾಳಿಸಿಕೊಂಡು ಯುದ್ಧ ಮುಂದುವರಿದು ಅಶ್ವತ್ಥಾಮನ ದಿವ್ಯಾಸ್ತ್ರಗಳು, ಬತ್ತಳಿಕೆಯ ಶರಗಳು ಬರಿದಾಗಿ, ಶಸ್ತ್ರ ಸಂಚಯಕ್ಕಾಗಿ ಗುರುಪುತ್ರ ಹಿಂದೆ ಸರಿದು ಹೋಗಬೇಕಾಯ್ತು.

ಇಷ್ಟಾಗುತ್ತಲೆ ತುಸು ಚೇತರಿಸಿಕೊಂಡಿದ್ದ ಕರ್ಣ ರೋಷಾಗ್ನಿಯಂತೆ ಮತ್ತೆ ಅರ್ಜುನನೆದುರು ಮುಂದೊತ್ತಿ ಬಂದನು.

ಮುಂದುವರಿಯುವುದು…

spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page