31.8 C
Udupi
Saturday, April 11, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 240

ಭರತೇಶ್ ಶೆಟ್ಟಿ ,ಎಕ್ಕಾರ್

ಸಂಚಿಕೆ ೨೪೧ ಮಹಾಭಾರತ

ಪ್ರಶ್ನೆ : ಹೆಚ್ಚು ಮಿತ್ರರನ್ನು ಪಡೆದರೆ ಏನು ಫಲ?

ಉತ್ತರ : ಹೆಚ್ಚು ಮಂದಿ ಮಿತ್ರರಿದ್ದರೆ ಸುಖವು ಸಿಗುತ್ತದೆ. ಸೂರ್ಯನಿಗೂ ಮಿತ್ರಾ ಎಂಬ ಹೆಸರಿದೆ. ಕಷ್ಟ – ಸುಖ ವ್ಯತ್ಯಾಸ ಕಾಣದೆ ಜೊತೆಗಿದ್ದು ಆತ ಜಗನ್ಮಿತ್ರನಾಗಿದ್ದಾನೆ. “ಪರೋಕ್ಷೇಕಾರ್ಯ ಹಂತಾರಂ, ಪ್ರತ್ಯಕ್ಷೇ ಪ್ರಿಯವಾದಿನಂ! ವರ್ಜಯೇತ್ ತಾದೃಶಂ ಮಿತ್ರಂ ವಿಷ ಕುಂಭಂ, ಪಯೋ ಮುಖಂ” ಎದುರಲ್ಲಿ ಚೆನ್ನಾಗಿ ಮಾತನಾಡಿ , ಪರೋಕ್ಷವಾಗಿ ಹಾನಿ ಮಾಡುವ, ಬಾಯಲ್ಲಿ ಹಾಲು ಸುರಿಸಿ, ಹೊಟ್ಟೆಯಲ್ಲಿ ವಿಷ ಹೊತ್ತಿರುವ ಮಿತ್ರರನ್ನು ದೂರವಿಡಬೇಕು. ಹೆಚ್ಚು ಮಂದಿ ಮಿತ್ರರಿದ್ದಾಗ ಯಾವ ಪ್ರದೇಶಕ್ಕೆ ಹೋದರೂ, ವಿಭಿನ್ನ ಸಮಸ್ಯೆ ಬಂದರೂ ಅದನ್ನು ನಿವಾರಿಸಬಲ್ಲ ಯಾರಾದರೊಬ್ಬರನ್ನು ಹೊಂದಿರುತ್ತೇವೆ ಎಂಬುವುದು ತಾತ್ಪರ್ಯ. ಹಾಗೆಯೇ ಗುಣವರಿತು ಮಿತ್ರತ್ವ ಮಾಡಬೇಕೆಂಬ ಎಚ್ಚರಿಕೆಯೂ ಜೊತೆಗಿದೆ.

ಪ್ರಶ್ನೆ : ಜಗತ್ತಿನಲ್ಲಿ ‘ನಿಂದ್ಯ’ ಎನ್ನಬಹುದಾದವನು ಯಾರು?

ಉತ್ತರ : ಪರನಿಂದಕನೇ ನಿಂದ್ಯನಾಗಿರುತ್ತಾನೆ. ಯಾವಾತ ತನ್ನನ್ನು ಹೊಗಳಿಕೊಳ್ಳುತ್ತಾನೋ, ಅಂದರೆ ಆತ್ಮಸ್ತುತಿ ಮಾಡುತ್ತಾನೋ ಅವನೂ ನಿಂದ್ಯನು ಆಗುತ್ತಾನೆ. ಅವನಿಗಿಂತಲೂ ಸದಾ ಪರ ದೂಷಣೆಯಲ್ಲಿ ತೊಡಗಿರುವ, ಅನ್ಯರ ಹುಳುಕು ಹುಡುಕುವುದರಲ್ಲಿ ನಿರತನಾಗಿರುವಾತ ನಿಂದ್ಯನು ಆಗುತ್ತಾನೆ.

ಪ್ರಶ್ನೆ : ಸುಜನ ಬಾಹಿರನು ಯಾರು?

ಉತ್ತರ : ಮದೋನ್ಮತ್ತನು ಸುಜನ ಬಾಹಿರ. ಅಷ್ಟ ಮದಗಳಾದ ೧. ಜಾತಿ, ೨. ಕುಲ, ೩. ಬಲ, ೪.ಯೌವನ, ೫.ಜ್ಞಾನ ಅಥವಾ ವಿದ್ಯೆ, ೬.ಐಶ್ವರ್ಯ, ೭.ಉದ್ಯೋಗ ಅಥವಾ ಅಧಿಕಾರ ೮.ರೂಪ. ಈ ಅಷ್ಟ ಮದಗಳಲ್ಲಿ ಯಾವ ಒಂದು ಬಗೆಯ ಇರುವಿಕೆಯಿಂದ ಅಹಂಕಾರ ತಳೆದರೂ ಆತ ಸುಜನಬಾಹಿರನಾಗುತ್ತಾನೆ. ನಾನು ಈ ಜಾತಿ, ಈ ವಂಶ (ಕುಲ) ಎಂಬ ಅಹಂ ಭಾವ. ನಾನು ಯುವಕ ತ್ರಾಣವಿದೆ ಎಂಬ ಮದ, ವಿದ್ಯಾವಂತ ನೆಂಬ ಗರ್ವ, ಶ್ರೀಮಂತಿಕೆ, ಉನ್ನತ ಹುದ್ದೆಯಿದೆ, ಸೌಂದರ್ಯವಿದೆ ಹೀಗೆ ಯಾವುದೇ ಒಂದು ಕಾರಣದಿಂದ ಮನದಲ್ಲಿ ಹೆಚ್ಚುಗಾರಿಕೆಯ ಭಾವ ಮೂಡಿ ಮದವೇರಿದರೆ ಆತ ಸುಜನನಾಗಲಾರ.

ಪ್ರಶ್ನೆ : ಪುರುಷ ಮತ್ತು ಸ್ತ್ರೀಯ ಲಕ್ಷಣಗಳೇನು?

ಉತ್ತರ : ಪುರುಷನು ಶ್ರಮದ ಸಂಪಾದನೆಯಿಂದ ಜೀವಿಸಿ, ಉಳಿಸಿದ್ದರಲ್ಲಿ ಸತ್ಪಾತ್ರರಿಗೆ ದಾನ ನೀಡಬೇಕು. ಗುಣಗ್ರಾಹಿಯಾಗಿರಬೇಕು, ನೆರೆಯವರನ್ನು ಪ್ರೀತಿ ಗೌರವದಿಂದ ಕಾಣಬೇಕು. ಕಷ್ಟ ಎದುರಾದಾಗ ಧೈರ್ಯದಿಂದ ಎದುರಿಸಬೇಕು, ತನ್ನ ಪರಿವಾರವನ್ನು ರಕ್ಷಿಸಬೇಕು. ಪತ್ನಿಯನ್ನು ಸ್ನೇಹಿತೆ – ಸಹಧರ್ಮಿಣಿಯಾಗಿ ನಡೆಸಿಕೊಳ್ಳಬೇಕು. ಆತನಿಗೆ ಆತ್ಮಾಭಿಮಾನವೂ ಬೇಕು. ಸಮರ್ಥನಾಗಿದ್ದು ಪತ್ನಿಯನ್ನು ಅಥವಾ ಇತರರನ್ನು ಆಶ್ರಯಿಸಿ ಮರೆಗೆ ಸರಿದು, ಜವಾಬ್ದಾರಿ ತಪ್ಪಿಸಿ ಬದುಕುವಾತ ಪುರುಷ ಪದಕ್ಕೆ ಅಪವಾದವಾಗುತ್ತಾನೆ.

ಸ್ತ್ರೀಯು ಪ್ರಿಯವಾದ ಮಾತನಾಡುವವಳೂ, ಮೃದು ಭಾಷಿಯೂ, ಲಜ್ಜೆಯುಳ್ಳವಳೂ, ಮಾನನಿಧಿಯೂ, ಗಂಡನ ಸಕಲ ಕಾರ್ಯಗಳಲ್ಲಿ ಸಹಭಾಗಿಯೂ ಆಗಿರಬೇಕು. ಸಕಲ ವಿಧದ ಸತ್ಕರ್ಮ, ಧಾರ್ಮಿಕ ಕಾರ್ಯಗಳು, ಧನ ಸದ್ವಿನಿಯೋಗಗಳಲ್ಲಿ ಜವಾಬ್ದಾರೆಯಾಗಿರಬೇಕು. ಸಾಧ್ವಿ ಪತ್ನಿಯಾಗಿ ಗ್ರಾಹಸ್ಥ್ಯವನ್ನು ನಡೆಸಬೇಕು. ಪುರುಷನ ಅಧಿಕಾರ, ಸ್ಥಾನ ಇತ್ಯಾದಿ ಬಯಸದೆ ಇದ್ದರೆ ಉತ್ತಮ. ತನ್ನದಲ್ಲದ್ದನ್ನು ಬಯಸಲೇ ಬಾರದು.

(ಹೀಗೆ ನೂರಾರು ಪ್ರಶ್ನೋತ್ತರಗಳು ಧರ್ಮ, ತತ್ವ, ವರ್ಣಾಶ್ರಮ, ಆಚಾರ, ವಿಚಾರ, ರಾಜನೀತಿ, ದೇವಪ್ರೀತಿ ಹೀಗೆ ಸಮಗ್ರವಾಗಿ ಸಾಗುತ್ತದೆ)

ಪ್ರಶ್ನೆ : ಧರ್ಮರಾಯಾ ನಿನ್ನ ಸದುತ್ತರಗಳಿಂದ ತೃಪ್ತನಾಗಿದ್ದೇನೆ. ಸತ್ತು ಬಿದ್ದಿರುವ ನಿನ್ನ ನಾಲ್ವರು ತಮ್ಮಂದಿರಲ್ಲಿ ಓರ್ವನನ್ನು ಬದುಕಿಸಬಲ್ಲೆ. ಯಾರಾಗಬಹುದೆಂದು ಹೇಳು?

ಉತ್ತರ : ಸ್ವಾಮಿ, ನಕುಲನನ್ನು ಬದುಕಿಸಿ.

ಪ್ರಶ್ನೆ : ನಕುಲನೇ! ಅದೇಕೆ? ಭೀಮಾರ್ಜುನರಂತಹ ಬಲಾಢ್ಯರನ್ನು ಬಿಟ್ಟು ನಂತರದ ನಕುಲನನ್ನು ಬಯಸಿರುವೆ?

ಉತ್ತರ : ನಮ್ಮ ತಂದೆಗೆ ಈರ್ವರು ರಾಣಿಯರು. ಕುಂತಿ ಮತ್ತು ಮಾದ್ರಿ. ಕುಂತಿಯ ಮಗನಾಗಿ ನಾನಿದ್ದೇನೆ. ಪಿತನ ಮರಣ ಕಾಲದಲ್ಲೇ ಸಹಗಮನ ಮಾಡಿದ ಮಾದ್ರಿ ದೇವಿಗೆ ನಮ್ಮಮ್ಮ ಕುಂತೀದೇವಿ ನಿನ್ನ ಮಕ್ಕಳನ್ನೂ ರಕ್ಷಿಸಿ ಪಾಲಿಸುವೆ ಎಂಬ ವಚನವನ್ನು ಇತ್ತಿದ್ದಾಳೆ. ನಕುಲ ಮತ್ತು ಸಹದೇವ ಮಾತೆ ಮಾದ್ರಿಯ ಮಕ್ಕಳು. ಹಾಗಾಗಿ ಆ ಮಾತೆಯ ಇಬ್ಬರೂ ಮಕ್ಕಳು ಬದುಕಿದರೆ ಮಾತೃ ವಚನ ಉಳಿಸಿದಂತಾಗುತ್ತದೆ. ಒಬ್ಬನನ್ನೇ ಬದುಕಿಸುವುದಾದರೂ ಇವರೀರ್ವರಲ್ಲಿ ಒಬ್ಬಾತನು ನನ್ನ ಆಯ್ಕೆ.

ಧರ್ಮರಾಯನ ಸ್ವಾರ್ಥರಹಿತ ಧರ್ಮಬುದ್ದಿಯನ್ನು ಕಂಡು ಮೆಚ್ಚಿ, ಆತನ ಉತ್ತರಗಳಿಂದ ಪೂರ್ಣ ಸಂತೃಪ್ತಿ ಹೊಂದಿದ್ದ ಯಕ್ಷ “ಅಯ್ಯಾ ಧರ್ಮ ಮೂರ್ತಿಯೇ ನೀನು ರಾಜ ಋಷಿಯಂತೆ ಪೂಜನೀಯ ಯೋಗ್ಯತೆ ಹೊಂದಿರುವೆ. ನಿನ್ನ ನಿಷ್ಕಲ್ಮಷ ಧರ್ಮ ಬುದ್ಧಿಯನ್ನು ನೋಡಿ ಮಹದಾನಂದವಾಗಿದೆ. ನಿನ್ನವರಾದ ನಾಲ್ವರೂ ತಮ್ಮಂದಿರು ಬದುಕಲಿ. ಅವರ ಪ್ರಾಣವನ್ನು ಹಿಂದಿರುಗಿಸುತ್ತೇನೆ” ಎಂದು ಸಂಕಲ್ಪದಿಂದ ಅನುಗ್ರಹಿಸಿದನು. ನಾಲ್ವರೂ ಬದುಕಿ, ನಿದ್ರೆಯಿಂದ ಎಚ್ಚರಗೊಂಡವರಂತೆ ಕಣ್ತೆರೆದರು. ಅವರ ಶರೀರದ ಆಯಾಸವೆಲ್ಲ ಪರಿಹಾರವಾಗಿ ದಿವ್ಯ ಚೈತನ್ಯ ತನು ಮನದಲ್ಲಿ ತುಂಬಿತ್ತು.

ಇದನ್ನು ನೋಡುತ್ತಿದ್ದ ಧರ್ಮರಾಯ, ” ಓ ಮಹಾತ್ಮ! ನೀನು ಯಕ್ಷನೆಂದು ಹೇಳಿಕೊಂಡರೂ ನನಗೆ ಅನುಮಾನವಿದೆ. ಒಂದು ಕಾಲಿನಲ್ಲಿ ಸರೋವರ ಮಧ್ಯದಲ್ಲಿ ಇಷ್ಟು ಹೊತ್ತು ನಿಂತಿರುವ ನೀನು ಮಹಾತ್ಮನೇ ಹೌದು. ನನ್ನ ತಮ್ಮಂದಿರನ್ನು ಕೊಂದು, ಈಗ ಬದುಕಿಸಿದೆ. ಅನುಗ್ರಹ – ನಿಗ್ರಹ ಶಕ್ತಿ ಓರ್ವ ಸಾಮಾನ್ಯ ಯಕ್ಷನಿಗಿರುವುದು ಕಷ್ಟ ಸಾಧ್ಯ. ಹಾಗಿದ್ದರೆ ನಿಜವಾಗಿಯೂ ನೀನು ಯಾರು? ಮಾತ್ರವಲ್ಲ ನಮ್ಮನ್ನು ಈ ರೀತಿ ಪರೀಕ್ಷೆಗೆ ಒಳ ಪಡಿಸಿರುವೆ, ವಿನಾಕಾರಣ ನೀನು ಈ ರೀತಿ ಮಾಡಿರಲಾರೆ. ದಯಮಾಡಿ ನಿನ್ನ ಈ ನಡೆಯ ಉದ್ದೇಶವೇನು ಎಂದು ನಮಗೆ ತಿಳಿಯಪಡಿಸಬೇಕು ಎಂದನು.

ಆಗ ಯಕ್ಷನು “ಯುಧಿಷ್ಠಿರಾ! ನಾನು ಬೇರೆ ಯಾರೂ ಅಲ್ಲ ನಿನ್ನ ಜನ್ಮಕ್ಕೆ ಅನುಗ್ರಹದಾತನಾಗಿರುವ ಯಮಧರ್ಮ. ನಿಮ್ಮನ್ನು ನೋಡುವ ಬಯಕೆಯೂ ಇತ್ತು. ಆದರೆ ಈಗ ಅನಿವಾರ್ಯವಾಗಿ ನಿಮ್ಮೈವರನ್ನು ರಕ್ಷಿಸಬೇಕಾದ ಕಾಲವೂ ಕೂಡಿ ಬಂತು. ಕುತಂತ್ರಿಯಾದ ಶಕುನಿಯ ದುರ್ಭೋದನೆಯಿಂದ ಪ್ರೇರಿತನಾದ ದುರ್ಯೋಧನ. ಮಹಾಮಾಂತ್ರಿಕನಾಗಿರುವ ಕನಿಕನೆಂಬವನಿಗೆ ಹೇರಳವಾದ ಧನ ದ್ರವ್ಯಾದಿಗಳನ್ನಿತ್ತು ಪ್ರಲೋಬನೆಗೊಳಪಡಿಸಿದ. ಆ ಮಾಂತ್ರಿಕನ ಅಭಿಚಾರಿಕ ತಂತ್ರ ಶಕ್ತಿಯಿಂದ ಹೋಮಾಗ್ನಿಯಲ್ಲಿ ಒಂದು ಭೂತ ಶಕ್ತಿಯನ್ನು ಸೃಷ್ಟಿ ಮಾಡಿ ಅದಕ್ಕೆ ಒಂದಿಷ್ಟು ಬಲಿ, ಉಣಿಸನ್ನಿತ್ತನು. ನಂತರ ‘ಹೋಗಿ ಪಾಂಡವರನ್ನು ತಿಂದು ಬಾ’ ಎಂದು ಆಜ್ಞಾಪಿಸಿ ಕಳುಹಿಸಿದ್ದನು. ಮಹಾಶಕ್ತಿಪ್ರದವಾದ ಆ ವಾಮಾಚಾರದ ಶಕ್ತಿ ನಿಮ್ಮನ್ನರಸಿ ಬರುವಷ್ಟರಲ್ಲಿ ನಿನ್ನ ನಾಲ್ವರು ತಮ್ಮಂದಿರ ಪ್ರಾಣ ಕಸಿದು ಅವರನ್ನು ಹೆಣವಾಗಿಸಿದ್ದೆ. ನಿನ್ನನ್ನು ಧರ್ಮ ಜಿಜ್ಞಾಸೆಯಲ್ಲಿ ನಿರತನನ್ನಾಗಿಸಿದ್ದೆ. ವಾಮಾಚಾರದ ನೀಚ ಶಕ್ತಿಯ ಭೂತವಾದರೂ ಅದು ಸತ್ತು ಬಿದ್ದ ಹೆಣವನ್ನು ಮುಟ್ಟುವುದಿಲ್ಲ. ಧರ್ಮ ಜಿಜ್ಞಾಸೆ ನಿರತರಾಗಿರುವ ನಿನ್ನನ್ನು ಕಬಳಿಸಲು ಕಾದು ಕುಳಿತು ನಿನ್ನ ಬಳಿಗೂ ಅದರ ಸಂಚಾರವಾಗಿತ್ತು. ಕ್ಷಣಮಾತ್ರದ ಭಯ ನಡುಕ ನಿನಗೊಮ್ಮೆ ಆದದ್ದನ್ನು ಸ್ಮರಿಸಿಕೋ, ಅದು ಆ ಸಂದರ್ಭದಲ್ಲಾಗಿತ್ತು. ಆದರೆ ನೀನು ಧರ್ಮ ಕಾರ್ಯದಲ್ಲಿ ತೊಡಗಿದ್ದ ಕಾರಣ ಕಾಯುತ್ತಾ ಹೊಂಚು ಹಾಕುತ್ತಿತ್ತು. ಯಾರು ಧರ್ಮಚಿಂತಕರಾಗಿರುತ್ತಾರೋ ಅವರನ್ನು ಯಾವ ಶಕ್ತಿಗೂ ವಶ ಪಡಿಸಲಾಗುವುದಿಲ್ಲ. ಕಾದು ಕುಳಿತು, ಅವಧಿ ಮೀರುವ ಹೊತ್ತಿಗೆ ಇಂತಹ ಕ್ಷುದ್ರವಾದ ಶಕ್ತಿಗಳು ಅವುಗಳಿಗೆ ಸರಿಯಾದ ಬಲಿ ಸಿಗದಿದ್ದರೆ ತನ್ನನ್ನು ಉಂಟು ಮಾಡಿದವನನ್ನು ಬಲಿ ಪಡೆದುಕೊಳ್ಳುತ್ತದೆ. ಅಂತೆಯೆ ಮಾಂತ್ರಿಕ ಕನಿಕನ ಅಭಿಚಾರಿಕ ತಂತ್ರಶಕ್ತಿಯ ಮಹಾಬಲಶಾಲಿ ಭೂತ ಅದರ ಗುರಿಯಾಗಿದ್ದ ನೀವೈವರು ಸಿಗದ ಕಾರಣ, ತಿರುಗುಬಾಣವಾಗಿ ಆತನನ್ನು ನುಂಗಿ ನೀರು ಕುಡಿಯಿತು. ಮಂತ್ರಶಕ್ತಿಯಿಂದ ಉತ್ಪನ್ನವಾದ ಇಂತಹ ಶಕ್ತಿಯನ್ನು ಪ್ರಶಾಂತಗೊಳಿಸಿ ಮಂತ್ರಪೂರಕವಾಗಿ ಶಕ್ತಿ ತುಂಬುತ್ತಿದ್ದರೆ ಸಹಜವಾಗಿ ಅದು ಪ್ರಭಾವಯುಕ್ತವಾಗಿ ಸತ್ಕರ್ಮಗಳಿಗೆ ಪೂರಕವಾಗುತ್ತಿತ್ತು. ಹಾಗಾಗಲಿಲ್ಲ, ಅದು ತನ್ನನ್ನು ಸೃಷ್ಟಿ ಮಾಡಿದವನನ್ನು ಬಲಿ ಪಡೆದ ಕಾರಣದಿಂದ ನಿಷ್ಕ್ರಿಯಗೊಂಡು ನಾಶವಾಯಿತು. ಆ ಮಂತ್ರವಾದಿ ಬ್ರಾಹ್ಮಣನನೂ ಸ್ವಯಂ ರಕ್ಷಣೆಯ ಬಗ್ಗೆ ಯೋಚಿಸಿ ಏನೂ ಮಾಡದಿದ್ದರಿಂದ ತನ್ನ ಸೃಷ್ಟಿಗೆ ತಾನೆ ಆಹುತಿಯಾಗಿ ನಾಶವಾಗಿದ್ದಾನೆ. ಆತ ಸೃಷ್ಟಿಸಿದ ಭೂತವೂ ನಷ್ಟವಾಯಿತು. ಸಜ್ಜನರಿಗೆ ಕೇಡು ಬಗೆಯುವ ಯಾರೆ ಆಗಲಿ ಅಂತಹವರಿಗೆ ಕೆಡುಕಾಗುತ್ತದೆ. ನಿಮಗೆ ಒದಗಲಿದ್ದ ಬಹುದೊಡ್ಡ ಕೇಡು – ಅನಾಹುತ ದೇವಾನುಗ್ರಹದಿಂದ ತಾನಾಗಿ ಪರಿಹಾರವಾಯಿತು. ಮುಂದೆಯೂ ಧರ್ಮ ಮಾರ್ಗಿಗಳಾದ ನಿಮಗೆ ದೇವತಾ ರಕ್ಷಣೆ ಸದಾ ಇರುತ್ತದೆ. ನಿಶ್ಚಿಂತರಾಗಿ ಧರ್ಮದ ಹಾದಿಯಲ್ಲಿ ಬದುಕಿಕೊಂಡಿರಿ. ಇನ್ನು ಭಯ ಬೇಡ, ಎಲ್ಲವೂ ಒಳಿತೆ ಆಗಲಿದೆ” ಎಂದು ಯಮರಾಜ ಅನುಗ್ರಹಿಸಿದನು.

ಸೋದರರು ಎದ್ದು ಅಣ್ಣ ಧರ್ಮಜನಿಗೆ ವಂದಿಸಿ ನಿಂತರು. ಧರ್ಮರಾಜ ಯಮಧರ್ಮನನ್ನು ಕುರಿತು ತನ್ನ ಆಸೆಯೊಂದನ್ನು ಕೇಳಿಕೊಳ್ಳಲು ಅನುಮತಿ ಬೇಡಿದನು. ಯಮನೂ ಆಗಲಿ ಅದೇನೆಂದು ಹೇಳಿಕೋ ಪೂರೈಸುವೆ ಎಂದು ಸಮ್ಮತಿಸಿದ. ಧರ್ಮರಾಯ ಕೇಳಲಾರಂಭಿಸಿದ.”ಧರ್ಮಪ್ರಭೋ…

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page