ಭಾಗ – 238
ಭರತೇಶ್ ಶೆಟ್ಟಿ, ಎಕ್ಕಾರ್

ಸಂಚಿಕೆ ೨೩೯ ಮಹಾಭಾರತ
(ಯಕ್ಷ ಪ್ರಶ್ನೆ ಬಹಳ ವಿಸ್ತಾರವಾದ ಭಾಗ. ಮಾತ್ರವಲ್ಲ ಮಹಾಕಾವ್ಯದ ಸಾರಾಂಶ, ಧರ್ಮ ಜ್ಞಾನ, ಆಚಾರ ಸಾರುವ ಅತಿ ಪ್ರಾಮುಖ್ಯ ಅವಿಭಾಜ್ಯ ಅಂಗ. ಆದರೆ ಇಲ್ಲಿ ನೂರಾರು ಪ್ರಶ್ನೆಗಳು – ಉತ್ತರಗಳು ಒಂದಕ್ಕೊಂದು ಕುತೂಹಲಕರವೂ ಅತ್ಯುತ್ತಮವೂ ಆಗಿವೆ. ಮೂಲಕಥೆ ಮುಂದುವರಿಸಬೇಕಾದ ಕಾರಣ ವಿವರಿಸಲು ಸರಳವಾಗಿರುವ ಕೆಲವು ಪ್ರಶ್ನೋತ್ತರಗಳನ್ನು ಪ್ರಸ್ತಾಪಿಸಿ ಮುಂದುವರಿಯುವ ಪ್ರಯತ್ನ ಮಾಡಲಾಗಿದೆ. )
ಪ್ರಶ್ನೆ : ಧರ್ಮರಾಯಾ! ಭೂಮಿಗಿಂತಲೂ ದೊಡ್ಡವರು ಯಾರು? ಒಂದು ವೇಳೆ ಇದ್ದರೆ ಯಾಕೆ?
ಉತ್ತರ : ಭೂಮಿಗಿಂತ ದೊಡ್ಡವರು ತಾಯಿ. ಯಾಕೆಂದರೆ ‘ಜನನೀ ಜನ್ಮ ಭೂಮಿಶ್ಚ ಸ್ವರ್ಗಾದಪಿ ಗರೀಯಸಿ’ ಎಂದು ಶಾಸ್ತ್ರವೆ ಸಾರಿದೆ. ಜನನಿ ಮತ್ತು ಜನ್ಮ ಭೂಮಿ ಸ್ವರ್ಗಕ್ಕಿಂತಲೂ ಮಿಗಿಲು. ನಮಗೆ ಜನ್ಮಭೂಮಿಯನ್ನು ತೋರಿದವಳು ಜನನಿ. ಹಾಗಾಗಿ ಆಕೆಯೆ ಹಿರಿದಾಗುತ್ತಾಳೆ. ಮಾತ್ರವಲ್ಲ ಆಕೆ ಸರ್ವಸ್ವ ಸಮರ್ಪಿಸಿ ಮಗುವನ್ನು ಪೊರೆಯುತ್ತಾಳೆ. ಪುರಾಣ ಸೂಕ್ತ, ಶತಿಗಳೂ ಅದನ್ನು ಪ್ರತಿಪಾದಿಸಿ ಹೇಳಿದೆ. ‘ಯಾ ದೇವೀ ಸರ್ವ ಭೂತೇಷು, ಮಾತೃ ರೂಪೇಣ ಸಂಸ್ಥಿತಾಃ’. ಶ್ರೀದೇವಿ ಆದಿಮಾಯೆ, ಸರ್ವವೂ ಆಗಿದ್ದು, ಆಕೆ ಮಾತೃ ರೂಪದಲ್ಲಿ ಸ್ಥಿತಳಾಗಿದ್ದಾಳೆ ಎಂದು ಪುರಸ್ಕರಿಸಿದೆ. ಅಂದರೆ ದೇವಿಯೂ ಮಾತೃ ರೂಪವೆಂದು ಪುರಾಣವೂ ಸಾರಿದೆ.
ಪ್ರಶ್ನೆ : ಆಕಾಶಕ್ಕಿಂತ ಎತ್ತರ ಯಾವುದು? ಹೇಗೆ?
ಉತ್ತರ : ಜನ್ಮದಾತ ಪಿತನು ಆಕಾಶಕ್ಕಿಂತಲೂ ಎತ್ತರ. ಪಿತಾ ಎಂಬ ಶಬ್ದೋತ್ಪತ್ತಿಯಾಗಿರುವುದು ಅದೇ ಮೂಲ ಆಧಾರದಿಂದ. ಪಾ ಎಂಬ ಧಾತುವಿನ ಅರ್ಥ ರಕ್ಷಣೆ. ‘ಪಾತಿ ರಕ್ಷಯತಿ ಇತಿ ಪಿತಾಃ’ ಏನು ಆಗುವುದಿದ್ದರೂ, ಆದರೂ ಅದರಿಂದ ರಕ್ಷಿಸುವವನು ಪಿತ. ಎಷ್ಟು ಮಹತ್ತರವಾದ ಏನೇ ಕಷ್ಟ- ನಷ್ಟ, ರೋಗವೇ ಬರಲಿ ತಂದೆ ಇದ್ದರೆ ಜವಾಬ್ದಾರನಾಗಿ ನಿಭಾಯಿಸುವ ಪ್ರಾಮಾಣಿಕ ಪ್ರಯತ್ನ ಮಾಡುತ್ತಾನೆ. ಮಾತ್ರವಲ್ಲ ತಂದೆ ಸಾಧಿಸಿದ ಸರ್ವ ಸಂಪದವನ್ನೂ ಮಕ್ಕಳಿಗೆ ಧಾರೆಯೆರೆದು ಹೋಗುತ್ತಾನೆ. ಆಸ್ತಿ ಪಾಸ್ತಿ ದೃಶ್ಯವಾಗಿ ಗೋಚರಿಸಿದರೂ, ಪುಣ್ಯದ ಭಾಗವನ್ನು ಮಕ್ಕಳಿಗೆ ಸುಕೃತ ಬಲದಿಂದ ಮರಣದ ಬಳಿಕವೂ ಕರುಣಿಸುವ ಮಹಾತ್ಮ. ಹಾಗಾಗಿಯೇ ‘ಪಿತೃ ದೇವೋಭವ’ ಎಂಬ ಸ್ಥಾನ ನೀಡಲಾಗಿದೆ.
ಪ್ರಶ್ನೆ : ಗಾಳಿಗಿಂತ ವೇಗವಾದುದು ಯಾವುದು? ಮತ್ತೆ ಯಾಕೆ?
ಉತ್ತರ : ಗಾಳಿಗಿಂತ ವೇಗವಾದುದು ಮನಸ್ಸು. ಗಾಳಿಗೆ ಒಂದು ಪ್ರದೇಶದಿಂದ ಇನ್ನೊಂದು ಕಡೆ ಕ್ರಮಿಸಲು ಸಮಯ ಬೇಕು. ಮನಸ್ಸು ಹಾಗಲ್ಲ ಕ್ಷಣಾರ್ಧದಲ್ಲಿ ಎಲ್ಲೆಲ್ಲೋ ಸಂಚರಿಸಬಲ್ಲುದು. ‘ಮನಃ ಏವ ಮನುಷ್ಯಾಣಾಂ, ಕಾರಣಂ, ಬಂಧ ಮೋಕ್ಷಯೋಃ’ ಮನುಷ್ಯನ ಬಂಧ ಮತ್ತು ಮೋಕ್ಷಕ್ಕೆ ಮನಸ್ಸು ನೇರ ಕಾರಣ. ಸುಖ ದುಃಖಗಳಿಗೂ ಮನಸ್ಸು ಕಾರಣ. ಮನಸ್ಸು ಜ್ಞಾನಕ್ರಿಯೋಭಯ ಸಾಧನವಾದ ಒಂದು ಜ್ಞಾನೇಂದ್ರಿಯ. ಜಿತೇಂದ್ರಿಯರಾದ ಬ್ರಹ್ಮರ್ಷಿ – ಮಹರ್ಷಿಗಳು ಮನಸ್ಸಿನ ಮೇಲೆ ನಿಯಂತ್ರಣ ಸಾಧಿಸಿದವರಾದರೂ ಅವರಿಗೂ ಪೂರ್ಣ ಹಿಡಿತಕ್ಕೆ ಸಿಗಲಿಲ್ಲ. ಪರಾಶರ, ವಿಶ್ವಾಮಿತ್ರ, ಮಿತ್ರಾವರುಣ ಆದಿ ಹಲವು ಋಷಿವರೇಣ್ಯರು ಇದಕ್ಕೆ ನಿದರ್ಶನವಾಗಿದ್ದಾರೆ.
ಪ್ರಶ್ನೆ : ಹುಲ್ಲಿಗಿಂತ ಹೆಚ್ಚಾಗಿ ಬೆಳೆಯುವುದು ಯಾವುದು? ಮತ್ತು ಯಾಕೆ?
ಉತ್ತರ : ಎಲ್ಲದಕ್ಕಿಂತ ಹೆಚ್ಚಾಗಿ ಬೆಳೆಯಬಲ್ಲುದಾದದ್ದು ಚಿಂತೆ. ಬುದ್ದಿ, ಮನೀಷೆ, ಮತಿ, ಆಸೆ, ವಚನ ಇವುಗಳಿಂದ ಚಿಂತೆಯ ಆವಿರ್ಭಾವವಾಗುತ್ತದೆ. ಬುದ್ದಿ ಎಂದರೆ ಅರಿವು ಅಥವಾ ತಿಳುವಳಿಕೆ. ಮನೀಷಾ ಎಂದರೆ ಅಪೇಕ್ಷೆ ಅಥವಾ ಇಚ್ಚೆ. ಮತಿ ಎಂದರೆ ಉದ್ದೇಶ ಅಥವಾ ನೆನಪು. ಆಸೆ ಎಂದರೆ ಬೇಕಾದುದನ್ನು, ಸಾಧ್ಯ – ಅಸಾಧ್ಯವಾದುದನ್ನು ಬಯಸುವುದು. ವಚನ ಎಂದರೆ ಮಾತು ಅಥವಾ ಹೇಳಿಕೆ. ಹುಲ್ಲು ಶ್ರಾವಣ – ಭಾದ್ರಪದ ಮಾಸದಲ್ಲಿ ಸಾವಿರ ಸುಳಿ ಚಿಗುರಿ ಬೆಳೆದರೆ, ನಂತರದ ಸಮಯದಲ್ಲಿ ಬೆಳವಣಿಗೆಯ ಗತಿ ಕಳೆದುಕೊಳ್ಳುತ್ತದೆ. ಆದರೆ ಚಿಂತೆ ಆದ್ಯಂತ್ಯವಾಗಿ ಬೆಳೆಯುತ್ತಲೆ ಇರುತ್ತದೆ.
ಪ್ರಶ್ನೆ : ಅಮೃತವು ಯಾವುದು?
ಉತ್ತರ: ಗೋವಿನ ಹಾಲು ಅಮೃತ. ಗೋವಿನ ಶರೀರದಲ್ಲಿ ಮೂವತ್ತ ಮೂರು ಕೋಟಿ ದೇವತೆಗಳು ಆವಾಸವಾಗಿದ್ದಾರೆ. ಮಗುವಿಗೆ ಅಮ್ಮನ ಹಾಲಿಲ್ಲದಿದ್ದರೂ ಗೋಮಾತೆಯ ಹಾಲು ಇದೆ. ಭಗವಂತನ ಅಭಿಷೇಕಕ್ಕೂ ಹಾಲು ಪ್ರಧಾನ. ಪರಮಶುದ್ಧವಾದ ಪಂಚಗವ್ಯವೂ ಗೋಮಾತೆಯಿಂದಲೆ ಪ್ರಾಪ್ತ. “ಗಾವೋ ವಿಶ್ವಸ್ಯ ಮಾತರಃ” ಎಂದು ವೇದಗಳೇ ಸಾರಿವೆ. ಗೋಮಾತೆ ವಿಶ್ವದ ಮಾತೆ ಎಂದಿವೆ. (ಗೋವಿನ ಬಗ್ಗೆ ಹೇಳಿದಷ್ಟು ಮುಗಿಯದ ವಿಸ್ತಾರವಿದೆ)
ಪ್ರಶ್ನೆ : ಸನಾತನ ಧರ್ಮ ಯಾವುದು?
ಉತ್ತರ : ‘ಧಾರಣಾತ್ ಧರ್ಮ ಇತ್ಯಾಹುಃ’ ಎಂಬ ಶಾಸ್ತ್ರ ವಚನದಂತೆ ಉತ್ತಮ ಗುಣ, ಅಭ್ಯಾಸಗಳನ್ನು ಅಳವಡಿಸಿಕೊಂಡು, ಅದನ್ನು ಆಚರಣೆ ಮಾಡುತ್ತಾ ಬದುಕುವುದೇ ಧರ್ಮ. ಈ ರೀತಿಯ ಧರ್ಮ ಜೀವನ ಮೋಕ್ಷ ಪ್ರಾಪ್ತಿಗೆ ಸಾಧನವಾಗಿದೆ. ಧರ್ಮದಲ್ಲಿ ಅನೇಕ ವಿಧಗಳಿವೆ. ಗೃಹಧರ್ಮ, ಆಶ್ರಮಧರ್ಮ, ವರ್ಣಧರ್ಮ, ಗುಣಧರ್ಮ, ನೈಮಿತ್ತಿಕ ಧರ್ಮ, ಯುಗಧರ್ಮ, ಸಂದರ್ಭೋಚಿತ ಧರ್ಮಗಳೆಂದು. ಸನಾತನ ಧರ್ಮ ಯಾವುದೆಂದರೆ ಚಾರಿತ್ರ್ಯವನ್ನು ಕಾಪಾಡುವುದು, ಆರೋಗ್ಯಕರ ಶರೀರ ಸಂಪತ್ತನ್ನು ಬೆಳೆಸಿ ಉಳಿಸುವುದು- ದುರ್ವ್ಯಸನಗಳಿಂದ ದೂರವಿರುವುದು. ಅತಿಥಿ ಅಭ್ಯಾಗತರನ್ನು ದೇವರಂತೆ ಸೇವಿಸುವುದು. ಭೋಗದಲ್ಲಿ ತ್ಯಾಗವನ್ನು ಮೆರೆಯುವುದು. ಸತ್ಯವನ್ನು ಹೇಳುವುದು, ಒಂದು ವೇಳೆ ಸತ್ಯ ಹೇಳುವುದರಿಂದ ಯಾರಿಗಾದರು ಹಾನಿಯಾಗುವುದಾದರೆ- ಅಥವಾ ಯಾರಿಗೂ ಪ್ರಯೋಜನವಾಗದಿದ್ದರೆ ಅಂತಹ ಸತ್ಯವನ್ನು ಹೇಳದಿರುವುದು. ಅಂದರೆ ಅಪ್ರಿಯ ಸತ್ಯ ನುಡಿಯದಿರುವುದು ಉತ್ತಮ. ಸುಳ್ಳು ಯಾವ ಕಾಲಕ್ಕೂ ಉತ್ತಮವಲ್ಲ. ಸುಳ್ಳಿನ ಆಯಸ್ಸು ಬಹಳ ಕಡಿಮೆ. (ಈ ರೀತಿ ಬಹಳಷ್ಟು ಸನಾತನ ಧರ್ಮದ ವಿಸ್ತಾರವನ್ನು ಧರ್ಮರಾಯ ವಿವರಿಸುತ್ತಾನೆ).
ಪ್ರಶ್ನೆ : ಪ್ರವಾಸಿಗನಿಗೆ, ಗೃಹಸ್ಥನಿಗೆ, ರೋಗಿಗೆ ಮಿತ್ರರು ಯಾರು?
ಉತ್ತರ : ಜೀವನ ಒಂದು ಪ್ರವಾಸ. ಜನನದಿಂದ ಮರಣದೆಡೆ ಸಾಗುವ ಯಾನ ಒಂದು ರೀತಿ ಪ್ರವಾಸವೆಂದು ಪರಿಗಣಿತವಾಗಿದೆ. ನಾವು ಸುಸ್ಥಿತಿಯಲ್ಲಿದ್ದರೆ ಪ್ರಾಪಂಚಿಕವಾಗಿ ಹಲವು ಮಿತ್ರರಿರುತ್ತಾರೆ. ಅಥವಾ ನಮ್ಮಲ್ಲಿ ಅಪೇಕ್ಷಿತನಿಗೆ ಬೇಕಾದ ಸುಖ, ಭೋಗ, ಉಪಕಾರ ಲಭ್ಯವಿದ್ದರೂ ಬಳಸಿ ಬರುವ ಮಿತ್ರರಿರುತ್ತಾರೆ. ಆದರೆ ಪ್ರವಾಸದಲ್ಲಿ ನಿಜವಾದ ಮಿತ್ರರು ಯಾರೆಂದರೆ ನಮ್ಮ ಸ್ಥಿತಿ ಹೇಗೆಯೆ ಇರಲಿ, ನಿರ್ಧನ, ದುರ್ಬಲ, ಅಶಕ್ತನೇ ಆಗಿದ್ದರೂ ಸಹ ಜೊತೆಗಾರನಾಗಿ ಸಹಕರಿಸುವವರೇ ನಿಜ ಮಿತ್ರರು.
ಗ್ರಹಸ್ಥನಿಗೆ ಪತ್ನಿಯೇ ಉತ್ತಮ ಮಿತ್ರಳು. ಗೃಹವಿದ್ದರೂ, ಗೃಹಿಣಿ ಇದ್ದರೆ ಮಾತ್ರ ನಿಜಾರ್ಥದಲ್ಲಿ ಒಬ್ಬಾತ ಗೃಹಸ್ಥನಾಗುತ್ತಾನೆ. ವಿವಾಹ ಕಾಲದಲ್ಲಿ ‘ಸಖಾ ಸಪ್ತ ಪದೀಭವ’ ಎಂದು ಒಪ್ಪಂದವಾಗಿರುತ್ತದೆ. ಪತ್ನಿಯೇ, ನೀನು ನನ್ನ ದಾಂಪತ್ಯ ಜೀವನದಲ್ಲಿ ಸಂಪತ್ತು, ದಾನ ಧರ್ಮ, ಅತಿಥಿ ಸತ್ಕಾರ, ಸೇವೆ, ಪೂಜೆ ಯಜ್ಞ ಮುಂತಾಗಿ ಸತ್ಕರ್ಮಗಳ ಮಿತ್ರಳಾಗಿರು ಎಂದು. ಪತ್ನಿ ಮಾನಸಿಕ ಆದಿವ್ಯಾಧಿಗಳಿಗೆ ಔಷಧಿಯಂತೆ, ಆಮೋದ ಪ್ರಮೋದಗಳಲ್ಲಿ ಸಮವಯಸ್ಕ ಮಿತ್ರಳಾಗಿ, ಪೂಜೆ ಯಜ್ಞಯಾಗಾದಿಗಳಲ್ಲಿ ಪತಿವ್ರತೆಯಾಗಿ, ಜೀವನದ ಹೋರಾಟದಲ್ಲಿ ವೀರ ಕ್ಷತ್ರಯಾಣಿಯಾಗಿ, ಕಷ್ಟಕಾಲದಲ್ಲಿ ಬಂಧುವಿನಂತೆ ಸಹಕರಿಸುವಳೋ ಅಂತಹ ಪತ್ನಿಯೇ ಗೃಹಸ್ಥನ ಪರಮ ಮಿತ್ರಳು.
ನ ಗೃಹಂ ಗೃಹಮಿತ್ಯಾಹುಃ, ಗೃಹಿಣೀ ಗೃಹಮುಚ್ಯತೇ|
ಗೃಹಂ ತು ಗೃಹಿಣೀ ಹೀನಃ ಕಾಂತಾರಾತ್ ಅತಿರಿಚ್ಯತೇ||
ಅಂದರೆ, ‘ಮನೆ ಮನೆಯಲ್ಲ, ಗೃಹಿಣಿಯೇ ಮನೆ. ಗೃಹಿಣಿ ಇಲ್ಲದ ಮನೆ ಅಡವಿಗಿಂತಲೂ ಕಡೆ’.
ರೋಗಿಗೆ ವೈದ್ಯನೇ ಮಿತ್ರ. ‘ವೈದ್ಯೋ ನಾರಾಯಣೋ ಹರಿಃ’ ರೋಗಿಗೆ ಎರಡು ರೀತಿಯ ವೇದನೆ ಇರುತ್ತದೆ. ಒಂದು ರೋಗದ ಬಾಧೆ, ನರಳಾಟ. ಮತ್ತೊಂದು ಪ್ರಾಣಭಯ. ರೋಗವನ್ನು ಗುಣ ಪಡಿಸುವ ಚಿಕಿತ್ಸೆ ಮತ್ತು ರಕ್ಷಣೆಯ ಅಭಯ ನೀಡುವ ವೈದ್ಯನೇ ರೋಗಿಗೆ ನಿಜವಾದ ಮಿತ್ರ.
ಮುಂದುವರಿಯುವುದು…






















































