28.1 C
Udupi
Monday, February 2, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ-227

ಭರತೇಶ್ ಶೆಟ್ಟಿ, ಎಕ್ಕಾರ್

ಮಾರ್ಕಾಂಡೇಯರು ಪಾಂಡವರ ಬಳಿ ಬಂದಾಗ ಸಕಲ ಗೌರವ ಪ್ರೀತಿ ಆದರಗಳೊಂದಿಗೆ ವನವಾಸದಲ್ಲಿ ಎಷ್ಟು ಸಾಧ್ಯವೋ ಅಷ್ಟು ಸತ್ಕಾರಗಳಿಂದ ಸ್ವಾಗತಿಸಿ ಪೂಜಿಸಿದರು. ಕುಶಲೋಪರಿ ವಿಚಾರಿಸಿದ ಮಹರ್ಷಿ ಪಾಂಡವರ ಸ್ಥಿತಿಗೆ ಮರುಗಿ ಅಭಯಪ್ರದರಾದರು. ಸದಾ ತಪೋಮಗ್ನರಾಗಿರುವ ಋಷಿವರ ಕೆಲದಿನಗಳ ಕಾಲ ಇವರೆಲ್ಲರ ಜೊತೆಯಿದ್ದು ಧೈರ್ಯ ಸ್ಥೈರ್ಯ ತುಂಬಿ ಮುಂದಿನ ಲೋಕ ಕಲ್ಯಾಣಕ್ಕೆ ಪೂರಕರಾಗುವಂತೆ ಮಾನಸಿಕವಾಗಿ ಸಿದ್ಧಗೊಳಿಸುವತ್ತ ಕಾರ್ಯ ಪ್ರವೃತ್ತರಾದರು.

ಹೀಗಿರಲು ಒಂದು ದಿನ ಧರ್ಮರಾಯ ಋಷಿವರನಿಗೆ ನಮಿಸಿ ಪಾದಪೂಜೆಗೈದು ತನ್ನ ಮನದ ಗೊಂದಲ ಪರಿಹಾರಕ್ಕಾಗಿ ಅನುಮತಿ ಯಾಚಿಸಿದನು. ಒಪ್ಪಿಗೆ ಪಡೆದು ಬಳಿಕ ಪ್ರಶ್ನಿಸಿದ. “ಸ್ವಾಮಿ ಯಾವುದು ಧರ್ಮ? ಧರ್ಮವನ್ನು ಕಂಡುಕೊಳ್ಳುವುದು ಹೇಗೆ?

ಮಾರ್ಕಾಂಡೇಯರು ಉತ್ತರಿಸುತ್ತಾ, “ಧರ್ಮರಾಯ ಸ್ವಯಂ ನೀನೇ ಧರ್ಮ ಮೂರ್ತಿ, ನಿನಗಿಂತಹ ಗೊಂದಲ ಮೂಡಿದೆಯೆಂದರೆ ಪರಿಭಾಷೆ ಹೇಳುವುದು ಕಷ್ಟವೇ. ಆದರೂ ನಿನ್ನ ಸಮಾಧಾನಕ್ಕಾಗಿ ಹೇಳುತ್ತೇನೆ ಕೇಳು. ಧರ್ಮ ಏನು ಎಂದು ಹೇಳುವಲ್ಲಿ ಹೇಳುವವನ ಅರ್ಹತೆಯನ್ನು ಅವಲಂಬಿಸಿಕೊಂಡು ವ್ಯಾಖ್ಯಾನಿಸಲ್ಪಡುತ್ತದೆ. ಆದರೂ ಧರ್ಮ ಹೀಗೆಯೇ, ಇದೇ ಧರ್ಮ ಎಂದು ಹೇಳುವುದು ಕಷ್ಟ ಸಾಧ್ಯ.

ಪ್ರತಿಯೊಂದು ವಿಚಾರಕ್ಕೂ ಕೃತೃ ಓರ್ವನಿದ್ದಾನೆ – ಅವನೇ ದೇವರು. ಆ ದೇವನು ಸರ್ವ ವಿಚಾರಕ್ಕೂ ಆಧಾರವೆಂದು ತಿಳಿದು ಆಚರಿಸುವುದು ಧರ್ಮ ಎಂದು ಕೆಲವರು ಹೇಳುತ್ತಾರೆ.

ಧರ್ಮವೇ ಎಲ್ಲವನ್ನೂ ನಿಯಂತ್ರಿಸುತ್ತದೆ. ಸೃಸ್ಟಿಯ ಸರ್ವವನ್ನೂ ಒಂದು ದೈವಿಕ ಶಕ್ತಿ ಹಿಡಿದುಕೊಂಡಿದೆ ಎಂದು ತಿಳಿದು ನಡೆಯುವುದು ಧರ್ಮ ಎಂದು ಹೇಳುತ್ತಾರೆ.

ಸತ್ಯ, ಪ್ರಾಮಾಣಿಕತೆ, ಅಹಿಂಸೆ, ನಿಷ್ಟೆಯಿಂದ ಬದುಕುವುದು ಧರ್ಮ ಎಂದೂ ವ್ಯಾಖ್ಯಾನಿಸಲ್ಪಟ್ಟಿದೆ.

ಅನ್ಯರ ಹಿತಕ್ಕಾಗಿ ನಮ್ಮ ಹಿತವನ್ನು ಪರಿತ್ಯಾಗ ಮಾಡುವುದೂ ಧರ್ಮ ಎಂದು ಹೇಳಲ್ಪಟ್ಟಿದೆ.

ಧರ್ಮ ಸಮ್ಮತವಲ್ಲದ ದುಷ್ಕೃತ್ಯಗಳನ್ನು ಮಾಡದೇ ಇರುವುದು ಧರ್ಮ ಎನಿಸಲ್ಪಟ್ಟಿದೆ.

ಕೆಲವನ್ನು ಮಾಡುವುದೂ, ಮತ್ತೆ ಕೆಲವನ್ನು ಮಾಡದೇ ಇರುವುದು. ಸಮಯ ಸಂದರ್ಭ ನೋಡಿ ಪರಿಣಾಮವನ್ನು ಗ್ರಹಿಸಿ ಸರಿಯಾದುದನ್ನೇ ನಿರ್ಧರಿಸಿ ಕೃತಾರ್ಥರಾಗುವುದೂ ಧರ್ಮಸಮ್ಮತ ಎಂದಿದ್ದಾರೆ.

ಧರ್ಮವನ್ನು ವಿಭಜಿಸಿ ಸಾಮಾನ್ಯ ಧರ್ಮ, ವಿಶೇಷ ಧರ್ಮ ಎಂದೂ ವಿಭಜಿಸಿದ್ದಾರೆ. ಎಲ್ಲ ಕಾಲಕ್ಕೂ, ಎಲ್ಲ ದೇಶಕ್ಕೂ, ಎಲ್ಲ ಜನರಿಗೂ ಸಂಬಂಧಿಸಿದ್ದು ಸಾಮಾನ್ಯ ಧರ್ಮ. ಸತ್ಯವಂತರಾಗಿ, ಅಹಿಂಸೆಯಿಂದ ಬದುಕಿ, ಚೋರತನ ಮಾಡದೆ, ಅರ್ಹತೆಯಿರುವುದನ್ನು ಮಾತ್ರ ಸ್ವೀಕರಿಸಿ ಬದುಕುವುದು ಸಾಮಾನ್ಯ ಧರ್ಮಕ್ಕೆ ನಿದರ್ಶನಗಳು. ಕೆಲವು ಸಂದರ್ಭಕ್ಕೆ, ಕೆಲವು ಕಾಲಕ್ಕೆ, ಕೆಲವು ಜನಕ್ಕೆ ಮಾತ್ರ ಅನ್ವಯವಾಗುವಂತಹುದು ವಿಶೇಷ ಧರ್ಮ. ವರ್ಣಾಶ್ರಮ, ಆಶ್ರಮ ಧರ್ಮ, ಕುಲಧರ್ಮ ವಿಶೇಷ ಧರ್ಮಕ್ಕೆ ಉದಾಹರಣೆಯಾಗಿ ನೀಡಲ್ಪಟ್ಟಿದೆ.

ವಿಶಿಷ್ಟವಾದ ಆಚಾರದಿಂದಲೂ ಧರ್ಮವನ್ನು ಕಂಡುಕೊಳ್ಳಬಹುದು. ಪಾತಿವೃತ್ಯ, ಮಾತಾಪಿತೃ ಸೇವೆ, ಗುರು ಭಕ್ತಿ, ಶೃದ್ಧಾ ವಿಶೇಷ, ಸ್ವಾಮಿ ನಿಷ್ಠೆ ಇತ್ಯಾದಿ ಆಚಾರಗಳು ಧರ್ಮವೆಂದು ಪರಿಗಣಿತವಾಗಿವೆ.

ಈ ಎಲ್ಲಾ ವಿಧದ ಧರ್ಮ ಜಿಜ್ಞಾಸೆಗಳಿಗೂ ಪ್ರಾಸಂಗಿಕವಾಗಿ ಸತ್ಯವಾನ್ ಸಾವಿತ್ರಿ, ಧರ್ಮವ್ಯಾಧನ ಕಥೆ ಹೇಳಿದರು. ಮಾತ್ರವಲ್ಲ ಪ್ರತಿಯೊಂದು ವ್ಯಾಖ್ಯಾನಕ್ಕೂ ಆಧಾರವಾಗಿ ಹಿಂದೆ ನಡೆದ ಘಟನೆಗಳನ್ನು ಆಧಾರವಾಗಿ ಹೇಳುತ್ತಾ ಸಂದರ್ಭೋಚಿತವಾಗಿ ಧರ್ಮದ ವ್ಯಾಖ್ಯಾನವನ್ನು ವಿಸ್ತರಿಸಿ ವಿವರಿಸಿದರು. ಧರ್ಮರಾಯನು ಧರ್ಮ ಎಂಬುವುದನ್ನು ಇಂತಿಷ್ಟೆ ವ್ಯಾಪ್ತಿಯೊಳಗೆ ನಿರ್ಬಂಧಿಸಲಾಗದು ಎಂಬುವುದನ್ನು ವಿವೇಚಿಸಿಕೊಂಡನು. ಹೀಗೆ ಪಾಂಡವರ ಜೊತೆ ಮತ್ತೆ ಕೆಲವು ದಿನಗಳ ಕಾಲ ಜೊತೆಯಿದ್ದು ಹಿತ ಬೋಧನೆಗಳನ್ನು ಉಪದೇಶಿಸಿ ಮಾರ್ಕಾಂಡೇಯರು ತನ್ನ ಆಶ್ರಮಕ್ಕೆ ಮರಳಿದರು.

ಹೀಗೆ ಪಾಂಡವರು ದ್ವೈತವನದಲ್ಲಿ ಕಾಲಕಳೆಯುತ್ತಿರುವಾಗ ಇವರ ಜೊತೆ ವನವಾಸದಲ್ಲಿ ಇದ್ದ ಹಲವರಲ್ಲಿ ಓರ್ವ ಬ್ರಾಹ್ಮಣ ಹಸ್ತಿನಾವತಿಗೆ ಬಂದನು. ಧೃತರಾಷ್ಟ್ರ ಆತನನ್ನು ಕರೆಸಿಕೊಂಡು ಪಾಂಡವರ ವಿಚಾರ ಕೇಳಿಕೊಂಡನು. ಆತನು ನುಡಿದ ವಿಚಾರ “ಪಾಂಡವರಿಗೆ ಅರಮನೆ, ಐಶ್ವರ್ಯ, ಪರಿಚಾರಕರು ಇಲ್ಲದೇ ಇದ್ದರೂ, ರಾಜಕುಮಾರರಾಗಿದ್ದೂ ಸ್ವಯಂ ತಾವೇ ಜೀವನ ಸಾಗಿಸಬಲ್ಲ ನೈತಿಕತೆ ಹೊಂದಿದ್ದಾರೆ. ಮಹಾತ್ಮರು, ಪುಣ್ಯಾತ್ಮರು ಆದ ಋಷಿವರರು ತಪೋ ನಿಧಿಗಳು ನಿರಂತರ ಪಾಂಡವರ ಜೊತೆಗಿದ್ದು ಹರಸಿ ಆಶೀರ್ವದಿಸಿ ಉತ್ತಮರಾದ ಪಾಂಡುಪುತ್ರರು ಇನ್ನಷ್ಟು ಶ್ರೇಷ್ಟರಾಗಿದ್ದಾರೆ. ಸಾಕ್ಷಾತ್ ಸೂರ್ಯ ನಾರಾಯಣ ದೇವರು ಅಕ್ಷಯ ಪಾತ್ರೆ ಕರುಣಿಸಿ ಊಟೋಪಚಾರಕ್ಕೆ ಕೊರತೆ ಇಲ್ಲದಂತೆ ಅನುಗ್ರಹಿಸಿದ್ದಾರೆ. ಅರ್ಜುನ ಶಿವದೇವನನ್ನು ಸಾಕ್ಷಾತ್ಕರಿಸಿ ಪಾಶುಪತಾಸ್ತ್ರ, ಗಿರಿಜೆಯಿಂದ ಅಂಜಲಿಕಾಸ್ತ್ರ, ಗಣಪತಿ ಷಣ್ಮುಗ, ಶಿವಗಣಗಳಿಂದಲೂ ದಿವ್ಯಾನುಗ್ರಹ ಪಡೆದಿದ್ದಾನೆ. ಸ್ವರ್ಗವನ್ನೇರಿ ಕಾಲಕೇಯ ನಿವಾತಕವಚಾದಿ ದಾನವರನ್ನು ಕೊಂದು ಕಿರೀಟಿ ಎಂದು ದೇವಲೋಕದಲ್ಲಿ ಸನ್ಮಾನಿತನಾಗಿದ್ದಾನೆ. ಅಷ್ಟ ದಿಕ್ಪಾಲಕರಿಂದ ದಿವ್ಯಾಯುಧಗಳನ್ನು ಪಡೆದು ಮರಳಿದ್ದಾನೆ. ಒಟ್ಟಿನಲ್ಲಿ ಹೇಳುವುದಾದರೆ ಪಾಂಡವರು ಸಕಲ ಜ್ಞಾನ ಪಾರಂಗತರೂ, ದೈವೀ ಶಕ್ತಿ ಸಂಪನ್ನರೂ, ಪ್ರಬಲರೂ ಆಗಿ ಬೆಳೆಯುತ್ತಿದ್ದಾರೆ”. ಹೀಗೆ ಸವಿವರವಾಗಿ ಪಾಂಡವರ ವನವಾಸದ ಬೆಳವಣಿಗೆಗಳನ್ನು ಹೇಳಿದನು.

ಇದನ್ನು ಕೇಳಿ ತಿಳಿದ ಕಣ್ಣು ಕಾಣದ ಅಂಧರಾಜ ಧೃತರಾಷ್ಟ್ರನಿಗೆ ಮುಂದೇನು ಗತಿ ಎಂದು ಕಾಣದಾಯಿತು. ಕಷ್ಟ ಅನುಭವಿಸುತ್ತಿದ್ದಾರೆಂದು ಭಾವಿಸಿದರೆ ಅಲ್ಲಿ ಕನಸು ಮನಸಿನಲ್ಲೂ ಕಲ್ಪಿಸಲಾಗದ ಸಾಧನೆ ಮಾಡಿದ್ದಾರೆ. ಇನ್ನು ನನ್ನ ಮಕ್ಕಳ ಗತಿಯೇನು ಎಂದು ಮಮ್ಮಲ ಮರುಗತೊಡಗಿದನು. ದುರ್ಯೋಧನನಿಗೂ ಈ ವಿಚಾರ ತಿಳಿದು ಭಯವಾಯಿತು. ಮೊದಲೆ ಪಾಂಡವರು ಅಜೇಯರು. ಇನ್ನು ಇವರನ್ನು ನಿಯಂತ್ರಿಸಲು ಸಾಧ್ಯವೆ ಇಲ್ಲ. ಇವರನ್ನು ಹೇಗೆ ದುರ್ದೆಸೆಗೆ ತಳ್ಳುವುದು ಎಂದು ಯೋಚಿಸತೊಡಗಿದನು.

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page