23.9 C
Udupi
Sunday, February 1, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 224

ಭರತೇಶ್ ಶೆಟ್ಟಿ, ಎಕ್ಕಾರ್

ಬ್ರಹ್ಮಹತ್ಯಾ ದೋಷವನ್ನು ಸ್ವಯಂ ಸಾಮರ್ಥ್ಯ ದಿಂದ ನಿವಾರಿಸುವ ಶಕ್ತಿ ದೇವೇಂದ್ರನಿಗಿದ್ದರೂ ಲೋಕಾಪವಾದ ಬಾಧಿಸಬಾರದೆಂದು ಒಂದು ವರ್ಷ ಕಾಲ ಆ ಸಂಕಷ್ಟವನ್ನು ಅನುಭವಿಸಿದನು. ಕೊನೆಗೆ ಹತ್ಯಾ ದೋಷವನ್ನು ನಾಲ್ಕು ಭಾಗಗಳಾಗಿ ವಿಭಾಗಿಸಿ ಭೂಮಿ, ವೃಕ್ಷ, ಜಲ ಹಾಗು ನಾರಿಯರಿಗೆ ಹಂಚಿದನು. ದೋಷದ ನಾಲ್ಕನೆಯ ಒಂದೊಂದು ಭಾಗಗಳನ್ನು ಕ್ರಮವಾಗಿ ಈ ನಾಲ್ಕು ವಿಭಾಗಗಳಿಗೆ ಪ್ರಸರಿಸಿದನು. ಕಾಲು ಭಾಗವನ್ನು ಸ್ವೀಕರಿಸಿದ ಭೂಮಿಯಲ್ಲಿ ಅದು ವಸುಂಧರೆಯ ಒಂದಂಶ ಪ್ರದೇಶ ದೋಷ ಪೂರಿತವಾಗಿ ಬೆಳೆ ಬೆಳೆಯದ ನಿರುಪಯುಕ್ತ ಬಂಜರು ಭೂಮಿಯಾಯಿತು. ದೋಷದ ಪಾಲು ಧರಿಸಿದ ಜಲದಲ್ಲಿ ಕಲುಷಿತ ಕಲ್ಮಶ ನೊರೆಗುಳ್ಳೆಗಳಾದವು. ಮೂರನೆಯ ಪಾಲು ಮರಗಳಲ್ಲಿ ಗೋಂದಿನ ರೂಪ ಅಂದರೆ ಅಂಟು ಮಾಯಣದ ರೂಪ ಪಡೆಯಿತು. ನಾಲ್ಕನೆಯ ಭಾಗ ಹೆಣ್ಣಿನಲ್ಲಿ ನಿರಂತರ ಆವರ್ತನವಾಗುತ್ತ ಮಾಸ ಮಾಸದಲ್ಲಿ ವೇದನಾಮಯ ರಜೋರೂಪವಾಗಿ ರಜಸ್ವಲೆಯಾಗಿಸುತ್ತಾ ಕಾಣಿಸತೊಡಗಿತು.

ದೇವೇಂದ್ರನಿಂದ ತನ್ನ ಮಗ ವಿಶ್ವರೂಪನ ಹತ್ಯೆಯಾಗಿದೆ. ವಿಶ್ವರೂಪನ ತಂದೆ ಮಹಾ ತಪಸ್ವಿ ‘ತ್ವಷ್ಟ’ನು ಬಹಳ ಕೋಪಗೊಂಡಿದ್ದಾನೆ. ಕೋಪದ ಪರಿಣಾಮಾಗಿ ಇಂದ್ರನನ್ನು ಶಿಕ್ಷಿಸಲು ನಿಶ್ಚಯಿಸಿದನು. ಅದಕ್ಕಾಗಿ ಮಹಾಯಾಗವೊಂದನ್ನು ತನ್ನ ತಪಸ್ಸ್ಶಕ್ತಿಯಿಂದ ವಿರಚಿಸಿಸಿದನು. ಆ ಮುಖೇನ ತನ್ನ ಸಂಕಲ್ಪದಂತೆ “ವೃತ್ರ” ಎಂಬ ಲೋಕ ಭಯಂಕರ ರೂಪದ ಮಗನನ್ನು ಪಡೆದನು. ತ್ವಷ್ಟನಿಂದ ಇಲ್ಲೊಂದು ಪ್ರಮಾದ ನಡೆದು ಹೋಯಿತು. ‘ಇಂದ್ರನಿಗೆ ಶತ್ರುವಾಗಿ ವಧಿಸು’ ಎಂದು ಉಚ್ಚರಿಸಲ್ಪಡಬೇಕಾಗಿದ್ದ ಮಂತ್ರ ಉದ್ವೇಗದಿಂದ ತನಗರಿವಿಲ್ಲದೆಯೇ ‘ಇಂದ್ರನ ಶತ್ರುವಾಗಿ ವಧಿಸಲ್ಪಡು’ ಎಂದಾಗಿ ಹೋಗಿತ್ತು.

ಅತಿ ಭಯಾನಕ, ಲೋಕ ನಾಶಕನೂ ಆದ ವೃತ್ರಾಸುರನು ತ್ರೈಲೋಕಗಳನ್ನು ವಶಪಡಿಸಿ ವಿಧ್ವಂಸಗೈಯತೊಡಗಿದನು. ಯಾವ ಆಯುಧಗಳೂ ವೃತ್ರಾಸುರನ ಮೇಲೆ ಪರಿಣಾಮ ಬೀರುತ್ತಿರಲಿಲ್ಲ. ಕಾರಣ ತ್ವಷ್ಟ ಇತ್ತಂತಹ ರಕ್ಷೆ ಅಷ್ಟು ಬಲಯುತವಾಗಿತ್ತು.ಇದರಿಂದಾಗಿ ಕಂಗೆಟ್ಟ ದೇವತೆಗಳು ದೆಸೆಗೆಟ್ಟು ಓಡಿ ಶ್ರೀಮನ್ನಾರಾಯಣನ ಬಳಿ ಬಂದು ರಕ್ಷಿಸಬೇಕೆಂದು ಬೇಡಿಕೊಂಡರು. ವೃತ್ರಾಸುರನ ವೃತ್ತಾಂತವರಿತ ಶ್ರೀ ಹರಿ ಇಂದ್ರಾದಿ ದೇವತೆಗಳಿಗೆ ಪರಿಹಾರ ದಾರಿ ಸೂಚಿಸಿದನು. ಪರಮ ವೈಷ್ಣವನೂ, ನಾರಾಯಣ ಕವಚ ಸಿದ್ಧಿಪುರುಷನೂ ಆದ ದಧೀಚಿ ಮಹರ್ಷಿಯ ಬಳಿ ಹೋಗಬೇಕು. ಶ್ರೀಹರಿ ನಿರ್ದೇಶಿಸಿ ನಿಮ್ಮನ್ನು ಕಳುಹಿಸಿರುವ ವಿಚಾರ ತಿಳಿಯಪಡಿಸಬೇಕು. ಲೋಕಕಂಟಕನಾದ ವೃತ್ರಾಸುರನ ವಧೆಗಾಗಿ ದಧೀಚಿಯ ಬೆನ್ನೆಲುಬನ್ನು ದಾನವಾಗಿ ನೀವು ಕೇಳಬೇಕು. ಖಂಡಿತವಾಗಿಯು ದಧೀಚಿ ಮಹರ್ಷಿ ಅಂತಹ ಅನನ್ಯ ಮಹಾದಾನವನ್ನು ಮಾಡಿ ಮಹಾತ್ಮನಾಗುತ್ತಾನೆ. ಆ ಅಸ್ಥಿಯನ್ನು ವಿಶ್ವಕರ್ಮನಿಗಿತ್ತು ವಜ್ರಾಯುಧವನ್ನು ಸಿದ್ಧಪಡಿಸಿಕೊಳ್ಳಬೇಕು. ಆ ದಿವ್ಯಾಯುಧದಿಂದ ವೃತ್ರಾಸುರನ ಸಂಹಾರವಾಗುತ್ತದೆ. ನಷ್ಟವಾದ ನಿಮ್ಮ ಸಮಸ್ತ ಆಯುಧಗಳೂ ಪುನರಪಿ ನಿಮ್ಮದಾಗುವುದು. ಸರ್ವರಿಗೂ ಶುಭವಾಗಲಿ ಎಂದು ಹರಸಿ ನಾರಾಯಣನು ದೇವೇಂದ್ರನನ್ನು ಕಳುಹಿಸಿ ಕೊಟ್ಟನು. ಹಾಗೆಯೆ ದೇವೇಂದ್ರ ಸಹಿತ ದೇವತೆಗಳು ದಧೀಚಿ ಮಹರ್ಷಿಯ ಬಳಿ ಬಂದು ನಿವೇದಿಸಿಕೊಂಡರು. ಮಹಾದಾನಿಯಾಗಿ ತನ್ನ ಬೆನ್ನೆಲುಬನ್ನು ಲೋಕಹಿತಕ್ಕಾಗಿ ಮಹರ್ಷಿ ಸಂತೋಷದಿಂದ ದಾನವಾಗಿತ್ತು ಕೃತಾರ್ಥರಾದರು. ವಿಶ್ವಕರ್ಮ ದಧೀಚಿಯ ಅಸ್ಥಿಯಿಂದ ವಜ್ರಾಯುಧ ನಿರ್ಮಿಸಿ ಕೊಟ್ಟರು. ನಂತರ ಸಾಗಿದ ಯುದ್ದದಲ್ಲಿ ಇಂದ್ರನಿಂದ ವೃತ್ರಾಸುರನ ವಧೆಯಾಯಿತು. ಇಂದ್ರಪದವಿ ಪುನರಪಿ ಕೈವಶವಾಯಿತು. ಆದರೆ ಸ್ವರ್ಗ ಪೀಠ ಏರುವಲ್ಲಿ ಮತ್ತೆ ಬ್ರಾಹ್ಮಣ ಪುತ್ರನಾದ ವೃತ್ರಾಸುರನ ವಧೆ ಬ್ರಹ್ಮಹತ್ಯಾ ದೋಷವಾಗಿ ಬಾಧಿಸಿತು. ವಿಶ್ವರೂಪನ ಹತ್ಯೆಯಿಂದ ಒದಗಿದ ದೋಷವನ್ನು ಹೇಗೋ ಭೂಮಿ, ಜಲ, ವೃಕ್ಷ, ಸ್ತ್ರೀಯರಿಗೆ ಹಂಚಿ ನಿವಾರಿಸಿಕೊಂಡಿದ್ದ ಇಂದ್ರನಿಗೆ ಈಗ ಪರಿಹಾರ ದಾರಿ ಹೇಗೆ? ಎಂಬ ವ್ಯಥೆ ಎದುರಾಯಿತು.

ಋಷಿಗಳೊಡನೆ ಈ ಕುರಿತಾಗಿ ಸಮಾಲೋಚಿಸಿದಾಗ, ಅಶ್ವಮೇಧ ಯಾಗವನ್ನು ಮಾಡಿ ದೋಷಮುಕ್ತನಾಗಬೇಕೆಂಬ ಸಲಹೆ ಪ್ರಾಪ್ತವಾಯಿತು. ಆದರೆ ಅಷ್ಟರೊಳಗೆ ಬ್ರಹ್ಮಹತ್ಯಾದೋಷ ಇಂದ್ರನನ್ನು ಹಿಂಬಾಲಿಸಿ ಬಂತು. ಚಂಡಾಲಿಕೆಯ ರೂಪಧರಿಸಿ ಬಹುವಿಧ ರೋಗ, ದುರ್ನಾತಗಳನ್ನು ಹೊತ್ತು ಇಂದ್ರನನ್ನು ಆವರಿಸಲು ಬೆನ್ನಟ್ಟಿತು. ಈ ದುರ್ಗಂಧವನ್ನೂ, ಭೀಕರ ರೋಗಗಳನ್ನೂ ಹೊತ್ತು ತಂದ ಚಂಡಾಲಿಕೆಯನ್ನು ಸಹಿಸಲಾಗದೆ ಇಂದ್ರ ದಶ ದಿಕ್ಕುಗಳಿಗೂ ಓಡಿ ತಪ್ಪಿಸಿಕೊಳ್ಳುವ ಪ್ರಯತ್ನ ಮಾಡಿದನು. ಕೊನೆಗೆ ಮಾನಸ ಸರೋವರದಲ್ಲಿ ತಾವರೆಯ ನಾಳದಲ್ಲಿ ಅಡಗಿ ಕುಳಿತನು. ಸ್ವರ್ಗಾಧಿಪತ್ಯ, ಸುಖ ವಂಚಿತನಾದ ಇಂದ್ರನಿಗೆ ಈಗ ಯಾರೂ ಸಹಾಯಕರಿಲ್ಲ. ಆದರೆ ಅಗ್ನಿ ಸುಪ್ತ ರೂಪದಲ್ಲಿ ದೂತನಾಗಿ ಬಾಹ್ಯ ವಾರ್ತೆಗಳನ್ನು ಮುಟ್ಟಿಸುವ ಕೆಲಸ ಮಾಡತೊಡಗಿದನು. ಈ ರೀತಿ ತಾವರೆಯ ನಾಳದಲ್ಲಿ ಅಡಗಿರುವ ಸ್ಥಿತಿಯಲ್ಲಿ ಇಂದ್ರ ಸಾವಿರ ವರ್ಷಕಾಲ ಮಾನಸ ಸರೋವರದಲ್ಲಿ ಕಳೆದನು. ಹೀಗಿರಲು ಬ್ರಹ್ಮ ದೇವರು ಅಗ್ನಿ ಮುಖೇನ ದೌತ್ಯ ಮಾಡಿಸಿ ಋತಂಭರ ಶ್ರೀ ಹರಿಯ ತಪಸ್ಸಾಚರಿಸಲು ಸೂಚಿಸಿದರು. ಅಭಯಪ್ರದನಾದ ಶ್ರೀಹರಿಯ ಕಾರುಣ್ಯದಿಂದ ಇಂದ್ರ ಚೈತನ್ಯ ಹೊಂದಿದನು. ಆ ಬಳಿಕ ಬ್ರಹ್ಮ ಹತ್ಯಾ ದೋಷ ಪರಿಹಾರಕ್ಕಾಗಿ ಅಶ್ವಮೇಧ ಯಾಗ ಪೂರೈಸಿದನು. ದೋಷ ಮುಕ್ತನಾಗಿ ಮತ್ತೆ ದೇವಲೋಕದ ಸುರಗದ್ದುಗೆ ಏರಿದನು.

ಇದಿಷ್ಟು ಪ್ರಕರಣಗಳು ನಡೆಯುವಾಗ ಮಧ್ಯೆ ದೇವರಾಜ ಇಂದ್ರ ಸಹಸ್ರ ವರ್ಷ ಕಾಲ ದೇವ ಸಿಂಹಾಸನದಿಂದ ರಿಕ್ತನಾಗಿದ್ದು ಬರಿದಾಗಿ ಉಳಿಯುವ ಸ್ಥಿತಿ ನಿರ್ಮಾಣವಾಯಿತು. ಹೀಗಾದ ಸ್ಥಿತಿಯಲ್ಲಿ ಅರಾಜಕತೆ ಉಂಟಾಗಬಾರದೆಂಬ ಚಿಂತನೆ ದೇವತೆಗಳದ್ದಾಯಿತು. ಬ್ರಹ್ಮದೇವರ ಬಳಿ ಸಾಗಿ ಪರಿಹಾರ ದಾರಿಗಾಗಿ ಸಮಾಲೋಚನೆ ನಡೆಸಿದರು. ಆಗ ಬ್ರಹ್ಮ ದೇವರು “ಭೂಲೋಕದಲ್ಲಿ ನೂರಾರು ದಿವ್ಯ ಯಾಗ ಮಾಡಿ ಪುಣ್ಯ ಸಂಚಯ ಮಾಡಿರುವ ‘ನಹುಷ’ ನೆಂಬ ಚಕ್ರವರ್ತಿ ಇದ್ದಾನೆ. ಆತನನ್ನು ಕರೆತಂದು ಸ್ವರ್ಗಾಧಿಪತ್ಯವನ್ನು ಅವನಿಗಿತ್ತು ಪಟ್ಟಾಭಿಷಿಕ್ತನನ್ನಾಗಿಸಿ” ಎಂದು ಸಲಹೆ ಇತ್ತರು. ಅದರಂತೆ ಪೂಜ್ಯರಾದ ಬ್ರಹಸ್ಪತಿ ಆಚಾರ್ಯರ ಸಹಿತ ದೇವತೆಗಳು ನನ್ನ ಬಳಿ ಬಂದು ವಿಷಯ ಪ್ರಸ್ತಾಪಿಸಿ ಸ್ವರ್ಗಾಧಿಪತಿಯಾಗಲು ಆಹ್ವಾನಿಸಿದರು. ನನಗೂ ಭಯವಾಯಿತು. ದೇವತೆಗಳು ನಮಗೆ ಪೂಜನೀಯರು. ಅವರ ಸಮ್ಮುಖದಲ್ಲಿ ಮನುಷ್ಯ ಮಾತ್ರನಾದ ನಾನು ನಿಸ್ತೇಜನು. ಭೌತಿಕ ಶರೀರಿಯಾದ ನಾನು ದಿವ್ಯ ಲೋಕದ ಸುರಗದ್ದುಗೆಯೇರುವುದು ಅಸಾಧ್ಯ. ಮಾತ್ರವಲ್ಲ ಸುರಾಧಿಪಥ್ಯದ ಅಧಿಕಾರ ನಿಭಾಯಿಸುವಲ್ಲಿ ನಾನು ಅಸಮರ್ಥನೆಂದು ಪ್ರಾಮಾಣಿಕನಾಗಿ ಒಪ್ಪಿಕೊಂಡು, ಕ್ಷಮೆ ಕೇಳಿ ಸವಿನಯದಿಂದ ಆಹ್ವಾನವನ್ನು ತಿರಸ್ಕರಿಸಿದೆ.

ಆದರೆ ಅಷ್ಟಕ್ಕೆ ಬಿಡದ ಸುರಗುರುಗಳು- ದೇವತೆಗಳೊಡನೆ ಸೇರಿ ದಿವ್ಯ ತೇಜಸ್ಸನ್ನು ನನಗೆ ಧಾರೆಯೆರೆದು ವಿದ್ಯಾ ತಪೋಯೋಗ ಬಲ ಸಂಪನ್ನನಾಗಿಸಿ ತೇಜಃಪೂರ್ಣನನ್ನಾಗಿಸಿದರು. ಇನ್ನು ಬರಬಹುದಲ್ಲವೇ? ಹೊರಡು ಎಂದರು. ನಿರ್ವಾಹವಿಲ್ಲದೆ ಸ್ವರ್ಗಾಧಿಪತಿಯಾಗಿ ಪಟ್ಟಾಭಿಷಿಕ್ತನಾದೆ. ನಹುಷೇಂದ್ರನಾಗಿ ಸ್ವರ್ಗ ಭೋಗವನ್ನು ಯಥೇಚ್ಚವಾಗಿ ಅನುಭವಿಸಿದೆ.

ಇಷ್ಟೆಲ್ಲಾ ಕಥೆ ಕೇಳುತ್ತಿದ್ದ ಧರ್ಮರಾಯ ನಹುಷನನ್ನು ಪ್ರಶ್ನಿಸಿದ ” ಸ್ವರ್ಗಾಧಿಪತಿಯಾದ ತಾವು ಈ ರೀತಿ ಹೆಬ್ಬಾವಿನ ರೂಪದಲ್ಲಿ ಬಿದ್ದಿರಲು ಕಾರಣವೇನು?”

ಮುಂದುವರಿಯುವುದು…

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page