25.7 C
Udupi
Wednesday, March 25, 2026
spot_img
spot_img
HomeBlogಮಹಾಭಾರತ

ಮಹಾಭಾರತ

ಭಾಗ – 205

ಭರತೇಶ್ ಶೆಟ್ಟಿ,ಎಕ್ಕಾರ್

ರಾಜಾ ಋತುಪರ್ಣನಲ್ಲಿ ಮಿಂದು ಶುಚಿರ್ಭೂತನಾಗಿ ತುಸು ವಿಶ್ರಾಂತಿ ಪೂರೈಸಿ ಬಳಿಕ ಸನ್ನದ್ಧನಾಗಿ ಬರುವಂತೆ ಬಾಹುಕ ವಿನಂತಿಸಿಕೊಂಡಿದ್ದನು. ಅಂತೆಯೇ ಅಯೋಧ್ಯೆಯ ಅರಸ ಋತುಪರ್ಣ ಸರ್ವ ಸಿದ್ಧತೆಗಳೊಂದಿಗೆ ಋತುಪರ್ಣ ಹೊರಟು ನಿಂತಾಗ ಬಾಹುಕ ರಥಕ್ಕೆ ಉತ್ತಮಾಶ್ವಗಳನ್ನು ಬಿಗಿದು ಸಾರಥ್ಯ ಪೀಠದಲ್ಲಿ ಸಿದ್ದನಾಗಿ ಕುಳಿತಿದ್ದಾನೆ. ಋತುಪರ್ಣ ರಥಿಕನಾಗಿ ಕುಳಿತಾಗ ಬಾಹುಕನ ಸಾರಥ್ಯದಲ್ಲಿ ವರೂತ ಶರವೇಗ ಪಡೆಯುತ್ತಾ ಅಯೋಧ್ಯೆಯಿಂದ ಕುಂಡಿನಾಪುರದತ್ತ ಹಾರತೊಡಗಿತು. ಹೀಗೆ ಸಾಗುವ ವೇಗದ ರಭಸಕ್ಕೆ ಧೂಳು ಆಗಸದೆತ್ತರಕ್ಕೆ ಪುಟಿದೇಳುತ್ತಿತ್ತು. ಬೀಸುವ ಗಾಳಿ ಕಣ್ತೆರೆದು ನೋಡಲಾಗದಷ್ಟು ಬಿರುಸಾಗಿ ಮುಖಕ್ಕೆ ಅಪ್ಪಳಿಸುತ್ತಿತ್ತು. ಋತುಪರ್ಣ ತನ್ನ ಕೈಯಲ್ಲಿದ್ದ ಕರ ವಸ್ತ್ರವನ್ನು ಬೀಸುತ್ತಾ ಸಾವರಿಸಿಕೊಂಡು ರಥದಲ್ಲಿ ವಿರಾಜಮಾನನಾಗಿದ್ದನು. ಒಮ್ಮೆಲೆ ಕೈಯಲ್ಲಿದ್ದ ವಸ್ತ್ರ ಜಾರಿ ಹಾರಿತು. ಕೂಡಲೆ ರಥ ನಿಲ್ಲಿಸಲು ಬಾಹುಕನಿಗೆ ಹೇಳಿ, ತನ್ನ ಕರವಸ್ತ್ರ ಬಿದ್ದ ವಿಚಾರ ತಿಳಿಸಿದನು. ಆಗ ಬಾಹುಕ “ಸ್ವಾಮಿ ನಿಮ್ಮ ವಸ್ತ್ರ ಯೋಜನಾಂತರ ಹಿಂದೆ ಬಿದ್ದಿದೆ. ಈಗ ಹಿಂದಿರುಗಿ ಹೋಗಿ ತರುವ ಪ್ರಯತ್ನ ಮಾಡಿದರೆ ತಡವಾದೀತು” ಎಂದುತ್ತರಿಸಿದನು. ಅರೆ ಕ್ಷಣಾರ್ಧದಲ್ಲಿ ಬಹು ಯೋಜನ ದೂರ ಕ್ರಮಿಸಿತೆ ರಥ? “ಎಷ್ಟು ಯೋಜನ ದಾಟಿದೆ?” ಎಂದು ರಾಜ ಕೇಳಿದ ಪ್ರಶ್ನೆಗೆ ಅರ್ವತ್ತಾರು ಯೋಜನ ಹಿಂದೆ ಇದೆ ನಿಮ್ಮ ಕರವಸ್ತ್ರ ಎಂಬ ಉತ್ತರ ಬಾಹುಕನಿಂದ ಬಂತು. ಹಾಗಿದ್ದರೆ ಈ ರೀತಿಯ ತ್ವರಿತ ರಥ ಚಲನೆ ಸಾಮಾನ್ಯ ಸಾರಥಿಯಿಂದ ಸಾಧ್ಯವಿಲ್ಲ. ರಥಕಲ್ಪ – ಅಶ್ವ ಹೃದಯ ವಿದ್ಯಾ ಪಾರಂಗತರಿಗಷ್ಟೆ ಸಾಧ್ಯವಾಗುವ ಸಿದ್ಧಿ ಇದು. ಹಾಗಿದ್ದರೆ ಈ ಬಾಹುಕ ಯಾರು? ಇಷ್ಟು ನೈಪುಣ್ಯತೆ ಇದೆ ಎಂದಾದರೆ ಈ ರೂಪದೊಳಗೆ ಯಾವುದೊ ರಹಸ್ಯ ಅಡಗಿದೆ ಎಂಬ ಸಂದೇಹ ಋತುಪರ್ಣನಿಗೆ ಬಲವಾಯಿತು. ಸುದೀರ್ಘ ಚರ್ಚೆಯಾಗದರೂ ಬಾಹುಕ ತನ್ನ ನಿಜವನ್ನು ತಿಳಿಸದೆ ಪರೋಕ್ಷ ಮಾತುಗಳಲ್ಲೆ ಸಂತೈಸುವ ಪ್ರಯತ್ನ ಮಾಡಿದನು. ಋತುಪರ್ಣ ಬಾಹುಕನ ಜೊತೆಗೆ ತಾನು ಕಂಡಿದ್ದ ವಿಶೇಷ ಸುಗುಣಗಳನ್ನು, ಚಮತ್ಕೃತಿಗಳೆಲ್ಲವನ್ನು ಸ್ಮರಿಸಿ ಇಂತಹ ಕೌಶಲ್ಯಗಳು ಚಕ್ರವರ್ತಿ ನಳ ಚಕ್ರವರ್ತಿ ಬಿಟ್ಟರೆ ಬೇರೆ ಯಾರಿಗೂ ಸಿದ್ಧಿಯಾದದ್ದಿಲ್ಲ ಎಂದು ತನ್ನ ತಿಳುವಳಿಕೆಯಿಂದ ತರ್ಕಿಸಿದನು. ಮಾತ್ರವಲ್ಲ ತನ್ನೆದುರು ಇರುವ ವಿಕಾರ ಸ್ವರೂಪಿ ನಳ ಚಕ್ರವರ್ತಿ ಇರಬಹುದೇ? ಎಂಬ ಅನುಮಾನದಿಂದ ಪ್ರಶ್ನಿಸಿದಾಗಲೂ ಬಾಹುಕ ಸ್ಪಷ್ಟ ಉತ್ತರ ನೀಡದೆ “ನಾನು – ನಳ – ಅಲ್ಲ – ಬಾಹುಕ” ಎನ್ನುವ ಮಾತಿನಲ್ಲಿ ಅಂತರ ವಿರಾಮ ವ್ಯತ್ಯಯಗೊಳಿಸಿ ಸತ್ಯದೊಳಗೆ ಸುಳ್ಳನ್ನು ಸುತ್ತಿದಂತೆ ಅಯೋಮಯ ಸ್ಥಿತಿ ನಿರ್ಮಿಸಿದನು. ಆಗ ಋತುಪರ್ಣ “ಅಯ್ಯಾ ಮಹಾತ್ಮ ನೀನು ನಳ ಚಕ್ರವರ್ತಿಯೆ ಹೌದಾಗಿದ್ದರೆ ನನ್ನಿಂದ ಅಪರಾಧವಾಯಿತು. ಅಲ್ಲದೆ ಹೋಗಿದ್ದರೆ ನಿನ್ನಂತಹವನಲ್ಲಿ ನಳ ಚಕ್ರವರ್ತಿಯನ್ನು ಆರೋಪಿಸಿದ್ದು ನನ್ನ ಅಕ್ಷಮ್ಯ ಅಪರಾಧ. ಎರಡೂ ವಿಧಾನದಲ್ಲೂ ಶಿಕ್ಷಾರ್ಹನಾಗಿದ್ದೇನೆ. ಕೃತ ಪಾತಕಕ್ಕಾಗಿ ಇಂತಹ ಮಾತುಗಳನ್ನಾಡಿದ ನನ್ನ ನಾಲಗೆಯನ್ನು ಕೊಯ್ದು ಪ್ರಾಯಶ್ಚಿತ್ತ ಮಾಡಿಕೊಳ್ಳುವೆ” ಎಂದು ಕಿರುಗತ್ತಿಯನ್ನು ಕೈಗೆತ್ತಿಕೊಂಡಾಗ ತಡೆದು ಬಾಹುಕ ತನ್ನ ನೈಜ ವೃತ್ತಾಂತವನ್ನೆಲ್ಲ ವಿವರಿಸಿದನು. ನಳ ಚಕ್ರವರ್ತಿಯೆ ಈ ಬಾಹುಕ ಎಂದು ತಿಳಿದಾಗ ಸಾಮಂತ ರಾಜ ಋತುಪರ್ಣ ಒಂದೊಮ್ಮೆಗೆ ಮೂಕ ವಿಸ್ಮಿತನಾದನು. ತಾನೇನಾದರು ತಪ್ಪಾಗಿ ಮನನೋಯುವಂತೆ ವ್ಯವಹರಿಸಿದ್ದರೆ ಕ್ಷಮಿಸಬೇಕೆಂದು ಬೇಡಿದನು. ಇಬ್ಬರೂ ಮೈತ್ರಿಯ ಆಲಿಂಗನದಲ್ಲಿ ಸಂಭ್ರಮಿಸಿದರು. ನಳ ಚಕ್ರವರ್ತಿ ಅಕ್ಷ ಹೃದಯ ವಿದ್ಯೆ ತಿಳಿಯದೆ ದ್ಯೂತದಲ್ಲಿ ಸೋಲು ಅನುಭವಿಸಿದ್ದನು. ಋತುಪರ್ಣ ಆ ದಿವ್ಯ ವಿದ್ಯೆಯನ್ನು ನಳ ಚಕ್ರವರ್ತಿಗೆ ಉಪದೇಶಿಸಿದನು. ಪ್ರತಿ ವಿನಿಮಯವಾಗಿ ರಥಕಲ್ಪ ಅಶ್ವ ಹೃದಯ ವಿದ್ಯೆಯನ್ನು ಋತುಪರ್ಣನಿಗೆ ನಳ ಚಕ್ರವರ್ತಿ ಉಪದೇಶಿಸಿದನು. ಈ ವಿದ್ಯಾ ವಿನಿಮಯವಾಗುವ ಹೊತ್ತಿಗೆ ಗ್ರಹಗಳೂ ಕ್ಷೇಮಸ್ಥಾನಕ್ಕೆ ಪಲ್ಲಟವಾಗಿದ್ದವು. ಸುಕ್ಷೇಮದ ಪರಿಣಾಮ ನೀಡುವ ಕಾಲ ಕೂಡಿ ಬಂದಿತ್ತು. ಅದೇ ಸಮಯದಲ್ಲಿ ನಳನ ಧೋತ್ರಾದಿ ವಸ್ತ್ರಗಳನ್ನು ಕಚ್ಚಿಕೊಂಡು ಹಾರಿ ಬಂದ ಪಕ್ಷಿಗಳು ಉದುರಿಸಿ ಹಾರಿ ಹೋದವು. ನಳನು ಆ ವಸ್ತ್ರಗಳನ್ನು ಸ್ವೀಕರಿಸಿ ಭದ್ರಗೊಳಿಸಿದನು.

ಈಗ ಋತುಪರ್ಣ ಸಾರಥ್ಯಕ್ಕೆ ಮುಂದಾದರೂ ಬಾಹುಕ ರೂಪಿ ನಳ ಚಕ್ರವರ್ತಿ ಇನ್ನೂ ತುಸು ಕಾಲ ಈ ವಿಚಾರ ಗೌಪ್ಯವಾಗಿ ನಮ್ಮೊಳಗೆ ಉಳಿಯಬೇಕು. ಯಥಾಸ್ಥಿತಿಯಲ್ಲಿ ನಾವು ಕುಂಡಿನಾಪುರ ಸೇರಬೇಕು. ಕಾಲಹರಣ ಬೇಡವೆಂದು ರಥವೇರಿಸಿ ಹೊರಟರು. ಕ್ರಮವಾಗಿ ಸಾಗಿ ಕ್ಲಪ್ತ ಸಮಯಾವಧಿಗೆ ಮೊದಲೆ ಕುಂಡಿನಾಪುರಕ್ಕೆ ಬಂದು ಮುಟ್ಟಿದರು.

ಋತುಪರ್ಣನನ್ನು ಆದರದ ಸ್ವಾಗತಾದಿಗಳೊಂದಿಗೆ ಸತ್ಕರಿಸಿದನು ರಾಜ ಭೀಷ್ಮಕ. ಪರಿಚಾರಕರು ವಿಶ್ರಾಂತಿ ಗ್ರಹದತ್ತ ಕರೆದೊಯ್ದರು. ದಮಯಂತಿಯ ಯೋಜನೆಯಂತೆ ಋತುಪರ್ಣನ ಬಿಡದಿಗೆ ಆಹಾರ ತಯಾರಿಯ ಎಲ್ಲಾ ಸಾಮಾಗ್ರಿ ತಲುಪಿಸಿದ್ದರೂ ಅಲ್ಲಿ ಪ್ರಮುಖವಾದ ಬೆಂಕಿ ಮತ್ತು ನೀರಿನ ವ್ಯವಸ್ಥೆ ಇರಲಿಲ್ಲ. ಆದರೆ ಋತುಪರ್ಣನ ಬಿಡಾರದಲ್ಲಿ ಸೂಕ್ತ ಸಮಯದಲ್ಲಿ ಅತ್ಯುತ್ತಮ ಭೋಜನ ಸಿದ್ಧವಾಗಿ ಊಟವೂ ಆಗಿ ಹೋಗಿತ್ತು. ಈ ಸೂಕ್ಷ್ಮವನ್ನು ಗಮನಿಸಲು ದಮಯಂತಿ ಆಳುಗಳನ್ನು ನಿಯೋಜಿಸಿದ್ದಳು. ನಳ ಚಕ್ರವರ್ತಿ ನೀರು – ಅಗ್ನಿ ಇಲ್ಲದೆಯೂ ಪಾಕ ಸಿದ್ದಗೊಳಿಸಬಲ್ಲ ವಿದ್ಯೆ ಪ್ರಾಪ್ತಿಸಿಕೊಂಡಿದ್ದನು. ಪಾಕಶಾಸ್ತ್ರ ಪ್ರವೀಣರ ಸಾಲಿನಲ್ಲಿ ನಳನೂ ಅಗ್ರ ಸ್ಥಾನಿಯೇ ಆಗಿದ್ದವನು.

ದಮಯಂತಿಗೆ ತನ್ನ ಪತಿಯನ್ನು ಗುರುತಿಸಲು ಅಯೋಧ್ಯೆಯಿಂದ ರಥ ಕ್ರಮಿಸಲು ಅಸಾಧ್ಯ ಸಮಯದೊಳಗೆ ಬಂದು ತಲುಪಿದ್ದು ಮತ್ತು ವಿಶಿಷ್ಟ ಭೋಜನ ತಯಾರಾದ ರೀತಿಯ ಸೂಕ್ಷ್ಮಗಳು ಧಾರಾಳ ಸಾಕ್ಷ್ಯಗಳಾಗಿ ಮಹದಾನಂದವಾಯಿತು.

ನಳ ಚಕ್ರವರ್ತಿಗೂ ಆತ ಅಯೋಧ್ಯೆಯಲ್ಲಿ ಇರಬೇಕಾದರೆ ಒಂದು ದಿನ ಹುಚ್ಚನಂತೆ ವ್ಯವಹರಿಸುತ್ತಾ ಬಂದಿದ್ದ “ಪರ್ಣಾದ” ಎಂಬಾತ ಹುಚ್ಚನಲ್ಲ, ಬದಲಾಗಿ ದಮಯಂತಿ ಕಳುಹಿಸಿದ ಬೇಹುಗಾರ ಎಂಬ ಸಂಶಯ ಮೂಡಿತ್ತು. ಏಕೆಂದರೆ “ಹೆಂಡತಿಯ ಸೀರೆಯ ತುಂಡು ಬೇಕು – ಹೆಂಡತಿ ಬೇಡ” ಎಂಬ ವಾಕ್ಯದ ಹಿಂದಿನ ಸತ್ಯ ಗೊತ್ತಿದ್ದವರು ನಳ ಮತ್ತು ದಮಯಂತಿ ಮಾತ್ರ. ಮತ್ತೆ ಸಾಗಿದ ಪರೀಕ್ಷಾ ಪ್ರಕರಣಗಳ ಮರ್ಮವರಿತು ನಳ ಚಕ್ರವರ್ತಿಯೂ ಮುಂದುವರೆಯುವ ಮನ ಮಾಡಿದ್ದಿರಬಹುದು. ಈಗ ನಳ ಚಕ್ರವರ್ತಿ – ದಮಯಂತಿ ಈರ್ವರಿಗೂ ಸತ್ಯ ಅಗೋಚರವಾಗಿ ಗೋಚರಿಸುತ್ತಿದೆ.

ನಳ – ದಮಯಂತಿಯರ ಮದುವೆಯಾಗಿದ್ದ ಸ್ವಯಂವರ ಕಾಲದಲ್ಲೂ ಪರೀಕ್ಷೆ ಒದಗಿತ್ತು. ಅಂದು ಪರೀಕ್ಷೆಗೊಳಪಡಿಸಿದವರು ದೇವರಾಜ ಇಂದ್ರ, ಅಗ್ನಿ, ವಾಯು ಮತ್ತು ವರುಣ. ಅಂದಿನ ಪರೀಕ್ಷೆ ದಮಯಂತಿಗೆ ಬಹಳ ಕೌತುಕಪ್ರದವಾಗಿ ಒದಗಿತ್ತು.

ಮುಂದುವರಿಯುವುದ

spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page