ಭಾಗ- 200
ಭರತೇಶ್ ಶೆಟ್ಟಿ, ಎಕ್ಕಾರ್

ಅರ್ಜುನನನ್ನು ಕಂಡು ದೇವೇಂದ್ರ ಮಾತನಾಡಿಸಿದನು “ವತ್ಸಾ, ಊರ್ವಶಿಯ ಶಾಪದ ಬಗ್ಗೆ ವ್ಯಾಕುಲಚಿತ್ತನಾಗಬೇಡ. ಏನು ಆದರೂ ಅದೆಲ್ಲವೂ ಒಳ್ಳೆಯದಕ್ಕಾಗಿಯೆ ಆಗುವುದು. ನಿನ್ನನ್ನು ಸ್ವರ್ಗಕ್ಕೆ ಅತಿಥಿಯಾಗಿ ಕರೆಸಲ್ಪಟ್ಟಿರುವುದು ಶಾಪಗ್ರಸ್ಥನಾಗುವುದಕ್ಕಲ್ಲ. ಊರ್ವಶಿ ಇತ್ತಿರುವ ಈ ಶಾಪಕ್ಕೆ ನಿಶ್ಚಿತ ಕಾಲ ನಿರ್ಣಯವಿಲ್ಲ. ನಾನೀಗ ಅದಕ್ಕೆ ಅವಧಿಯಾಗಿ ಒಂದು ವರ್ಷವನ್ನು ನಿಗದಿಗೊಳಿಸಿ ವಿಶಾಪ ನೀಡುತ್ತಿದ್ದೇನೆ. ಆ ಒಂದು ವರ್ಷ ನಿನ್ನ ಇಚ್ಚೆಯ ಆಯ್ಕೆಯಾಗಿರಲಿದ್ದು, ಅದನ್ನು ಪೂರೈಸಿದಲ್ಲಿಗೆ ಮತ್ತೆ ನೀನು ಪೂರ್ಣ ಪುರುಷನೇ ಆಗಲಿರುವೆ. ಈಗ ವನವಾಸದಲ್ಲಿರುವ ನೀವು ಮುಂದೆ ಒಂದು ಸಂವತ್ಸರ ಕಾಲ ಅಜ್ಞಾತರಾಗಲಿಕ್ಕಿದೆ. ಆ ಸಂದರ್ಭ ನೀನು ನಪುಂಸಕನಾಗಿ ಈ ಶಾಪವನ್ನು ವರವಾಗಿ ಬಳಸಿಕೊಳ್ಳುವವನಾಗು. ಮಗನೇ ನಿನ್ನ ಜಿತೇಂದ್ರಿಯ ಶಕ್ತಿಯ ಪರೀಕ್ಷೆಯನ್ನು ಅನಿವಾರ್ಯವಾಗಿ ಮಾಡಬೇಕಾಯ್ತು. ಹರಿಯ ಕೃಪೆ, ಶಿವಾನುಗ್ರಹದ ಬಲದಿಂದ ಇಂದ್ರಿಯ ನಿಗ್ರಹ ಸಾಧಿಸಿ ಗೆದ್ದುಬಿಟ್ಟೆ. ಸುಖಭೋಗದ ಉತ್ಕರ್ಷೆಯ ಈ ಲೋಕದಲ್ಲೂ ನೀನು ನಿಯಂತ್ರಣ ಸಾಧಿಸಿ ಮಹಾತ್ಮನಾದೆ. ಅರ್ಜುನಾ ನಿನ್ನ ಈ ಸಾಧನೆ ನಮ್ಮ ಪಾಲಿಗೆ ಸೌಭಾಗ್ಯವೇ ಆಗಿದೆ. ಕಾರಣವನ್ನೂ ಹೇಳುತ್ತೇನೆ ಕೇಳು, ‘ಕಾಲಕೇಯ’ ಎಂಬ ದೈತ್ಯರು ಬ್ರಹ್ಮದೇವರನ್ನು ತಪಸ್ಸಿನ ಮೂಲಕ ಮೆಚ್ಚಿಸಿ ವರಬಲಾನ್ವಿತರಾಗಿದ್ದಾರೆ. ಜಿತೇಂದ್ರಿಯರಿಂದ ಮಾತ್ರ ಮರಣ ಎಂಬ ಅನುಗ್ರಹವಿರುವ ಕಾರಣ ಅವರನ್ನು ನಿಗ್ರಹಿಸುವಲ್ಲಿ ನಾನೂ ವಿಫಲನಾಗಿದ್ದೇನೆ. ಅಡಿಗಡಿಗೆ ಅವರ ಪೀಡನೆಗೆ ಒಳಗಾಗುತ್ತಿದೆ ಸ್ವರ್ಗಲೋಕ. ಅಂತಹ ದುರುಳನ್ನು ನೀನು ಸಂಹರಿಸುವ ಯೋಗ್ಯತೆಯನ್ನು ನೀನು ಖಚಿತ ಪಡಿಸಿಕೊಂಡಿರುವೆ. ಈ ಉದ್ದೇಶದಿಂದ ನಿನ್ನನ್ನು ಪರೀಕ್ಷಿಸಬೇಕಾಯ್ತು. ಇಷ್ಟು ಮಾತ್ರವಲ್ಲ ನಿವಾತಕವಚ ರೆಂಬ ರಕ್ಕಸರೂ ನಮಗೆ ಶತ್ರುಗಳಾಗಿ ಕಂಟಕರಾಗಿದ್ದಾರೆ. ಪ್ರಹ್ಲಾದನ ವಂಶಜರಾದ ಇವರು ಅತಿ ಬಲಗರ್ವಿತರಾಗಿ ಸಮುದ್ರ ಮಧ್ಯ ವಾಸವಾಗಿದ್ದಾರೆ. ನಿನಗಿರುವ ಅನುಗ್ರಹಬಲದಿಂದ ಜಲಾಂತರ್ಗತನಾಗಿಯೂ ನೀನು ಯುದ್ದ ಮಾಡಬಲ್ಲೆ. ಈ ಕಾರ್ಯಸಾಧನೆಗಾಗಿ ದೇವಲೋಕದ ಸೇನೆ ನಿನ್ನ ಸಹಾಯಕ್ಕೆ ಬರಲಿದೆ. ದೇವತೆಗಳಾದ ನಮ್ಮಲ್ಲಿರುವ ದಿವ್ಯ ಮಂತ್ರಾಸ್ತ್ರಗಳನ್ನು ನಿನಗೆ ಅನುಗ್ರಹಿಸುತ್ತೇವೆ. ಕಾಲಕೇಯರನ್ನೂ, ನಿವಾತಕವಚರನ್ನೂ ಸಂಹರಿಸಿ ಲೋಕಕಲ್ಯಾಣಕಾರಕನಾಗು. ನಿನಗೆ ಅಜರಾಮರ ಕೀರ್ತಿಪ್ರಾಪ್ತವಾಗಲಿ” ಎಂದು ಇಂದ್ರ ಅನುಗ್ರಹಿಸಿದನು.
ಅಂತೆಯೆ ಇಂದ್ರಾದಿ ದೇವತೆಗಳು ಅಷ್ಟ ದಿಕ್ಪಾಲಕರೂ ಸೇರಿ ಒಬ್ಬೊಬ್ಬರಾಗಿ ಅರ್ಜುನನಿಗೆ ತಮ್ಮ ತಮ್ಮ ಶಕ್ತಿಯ ಸಕಲ ಮಂತ್ರಾಸ್ತ್ರ ದಿವ್ಯಾಸ್ತ್ರಗಳನ್ನೂ
ವಿದ್ಯುಕ್ತವಾಗಿ ಅನುಗ್ರಹಿಸಿದರು. ಅಷ್ಟ ದಿಕ್ಪತಿಗಳ ಶಕ್ತ್ಯಾಯುಧಗಳ ಸಿದ್ಧಿಯನ್ನು ಪಡೆದುಕೊಂಡಂತಹ ಅರ್ಜುನ ತೇಜಃಪೂರ್ಣನಾದನು.
ಸ್ವರ್ಗಲೋಕದಲ್ಲಿ ಬಹುವಿಧ ವಿಧಾನಗಳಿಂದ ಸಮ್ಮಾನಿತನಾಗಿ, ರಕ್ಕಸ ದೈತ್ಯರ ಸಂಹಾರಕ್ಕಾಗಿ ಇಂದ್ರನ ಅಪ್ಪಣೆ ಪಡೆದು ಅರ್ಜುನ ಹೊರಟನು. ದೇವಲೋಕದ ಸೇನೆಯೂ ಜೊತೆಯಾಗಿ ಅನುಸರಿಸಿ ಸಾಗಿತು. ಅರ್ಜುನ ಮೊದಲಾಗಿ ಹಿರಣ್ಯಪುರದ ಕಾಲಕೇಯರ ಮೇಲೆ ದಂಡೆತ್ತಿ ಮುನ್ನಡೆದನು.
ಮುಂದುವರಿಯುವುದು…









