21.7 C
Udupi
Tuesday, February 17, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 172

ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೭೩ ಮಹಾಭಾರತ

ಪಾಂಡವರ ಉಗ್ರ ಪ್ರತಿಜ್ಞೆಗಳು ದುರ್ಯೋಧನನ ಪಕ್ಷದ ಆತ್ಮಸ್ಥೈರ್ಯವನ್ನು ಅಂತರಂಗದಲ್ಲಿ ಅಲುಗಾಡಿಸಿ ಭಯಭೀತಗೊಳಿಸಿದ್ದರೂ, ಬಹಿರಂಗವಾಗಿ ತೋರಗೊಡದೆ ಪಾಂಡವರ ಪ್ರತಿಜ್ಞಾ ವಾಕ್ಯಗಳನ್ನು ಲೇವಡಿ ಮಾಡುತ್ತಾ ಕರ್ಣಾದಿ ಪ್ರಮುಖ ವೀರರು ಹಾಸ್ಯಾಸ್ಪದವಾಗಿ ಪುನರುಚ್ಚರಿಸುತ್ತಾ ಅಪಹಾಸ್ಯ ಮಾಡತೊಡಗಿದರು.

ಕೌರವರ ನಿಂದನೆಗಳಿಂದ ಅತ್ಯುಗ್ರರಾದ ಭೀಮಾರ್ಜುನರು ಸೆಟೆದು ನಿಂತಾಗ ಧರ್ಮರಾಯ ತನ್ನ ತಮ್ಮಂದಿರನ್ನು ಮುಖಭಾವದಿಂದಲೇ ಸಂತೈಸಿದನು. ಸಿಟ್ಟುಗೊಂಡಿದ್ದರೂ ಅಣ್ಣನ ಮುಖ ನೋಡಿ ಅಸಮಾಧಾನದಿಂದಲೇ ಅವರು ಸುಮ್ಮನಾದರು.

ಅಷ್ಟು ಹೊತ್ತಿಗೆ ಪ್ರಾಕೃತಿಕ ವಿಕೋಪ, ಉತ್ಪಾತಗಳು, ಪ್ರಾಣಿ ಪಕ್ಷಿಗಳ ವಿಕಾರ ಆಕ್ರಂದನ, ಲಾಯಗಳಲ್ಲಿ ಗಜ ತುರಗಗಳ ವಿಕೃತ ಕೆನೆತ, ಧೂಳೆದ್ದ ಬಿರುಗಾಳಿ ಹೀಗೆ ಭಯೋತ್ಪಾದಕ ಪ್ರತಿಕ್ರಿಯೆ ಗೋಚರಿಸಿ ಅಮಂಗಲ ಸೂಚಕ ಶಕುನಗಳು ಉಂಟಾದವು. ಇದನ್ನೆಲ್ಲಾ ಕಂಡು ಕೌರವನ ಪಕ್ಷ ಒಮ್ಮೆಗೆ ಭಯಗೊಂಡು ಕಂಪಿಸಿತು. ಸಜ್ಜನರೂ ಇದು ಭವಿಷ್ಯದಲ್ಲಿ ವಿನಾಶದ ಸೂಚನೆಯೆಂದು ಆಡತೊಡಗಿದರು.

ವಿದುರನು ಎದ್ದು ನಿಂತು ಧೃತರಾಷ್ಟ್ರನನ್ನು ಉದ್ದೇಶಿಸಿ ನಡೆದ ವೃತ್ತಾಂತದ ವರದಿಯನ್ನೂ, ದ್ರೌಪದಿಗಾದ ಅಪಚಾರ, ಭಗವತ್ಕೃಪೆಯಿಂದ ಆಕೆಗೊದಗಿದ ರಕ್ಷಣೆ, ಪಾಂಡವರ ಪ್ರತಿಜ್ಞೆ, ಈಗ ಆಗುತ್ತಿರುವ ಪೃಕೃತಿ ವಿಕೋಪವನ್ನೆಲ್ಲಾ ಸವಿವರವಾಗಿ ವಿವರಿಸಿದನು. ಧೃತರಾಷ್ಟ್ರನೇ ಈ ಎಲ್ಲಾ ಅನರ್ಥಕ್ಕೆ ಕಾರಣೀಕರ್ತನೆಂದೂ ಮುಂದೆ ಅನುಭವಿಸಲಿರುವ ವಿಯೋಗ, ವಿನಾಶಗಳಿಗೂ ಹೊಣೆಗಾರನೆಂದೂ ಆಪಾದಿಸಿದನು. ವಿದುರನ ಮಾತುಗಳನ್ನು ಕೇಳಿ ಸಭಾಸದರಾಗಿದ್ದ ಬಹುಮಂದಿ ಸಹಮತ ವ್ಯಕ್ತಪಡಿಸಿ ಧೃತರಾಷ್ಟ್ರನನ್ನು ನೇರ ಆರೋಪಿಯಾಗಿ ದೂಷಿಸಿ, ಇಷ್ಟಾದ ಮೇಲೂ ಎಚ್ಚೆತ್ತುಕೊಳ್ಳದಿದ್ದರೆ ಮೂರ್ಖತನವೇ ಹೌದೆಂದು ನಿರ್ಧರಿಸಿ ಅಭಿಪ್ರಾಯ ಮಂಡಿಸಿದರು.

ಧೃತರಾಷ್ಟ್ರನಿಗೆ ತನ್ನ ಮಕ್ಕಳಿಗೆ ಆಪತ್ತು ಬರಲಿದೆ ಎಂದು ಅರಿವಾದಾಗ ದ್ರೌಪದಿಯನ್ನು ಕರೆದು ಸಮಾಧಾನ ಪಡಿಸತೊಡಗಿದನು. “ಮಗಳೇ ದ್ರೌಪದಿ, ಯಾವುದೋ ವಿಷಗಳಿಗೆಯಲ್ಲಿ ಆಗಬಾರದ್ದು ಆಗಿ ಹೋಯಿತು. ಅದಕ್ಕಾಗಿ ನಾನು ನಿನ್ನಲ್ಲಿ ಕ್ಷಮೆ ಕೇಳುತ್ತೇನೆ. ನಿನ್ನ ಪಾತಿವ್ರತ್ಯ ಶಕ್ತಿ ಏನೆಂಬುವುದು ಇಂದು ಎಲ್ಲರೆದುರು ಪ್ರಕಟವಾಗಲು ವೇದಿಕೆಯಾಯಿತು. ನಿನ್ನ ಬಗ್ಗೆ ಅಪಾರ ಗೌರವ ಮೂಡುವುದಕ್ಕೂ ಇದೇ ಕಾರಣ. ಅಂಧನೂ, ವೃದ್ಧನೂ ಆದ ನಾನು ಅಸಹಾಯಕನಾದೆ. ನನ್ನ ಮಕ್ಕಳು ಮಾಡಬಾರದ ದುಷ್ಕೃತ್ಯವೆಸಗಿದ್ದರಿಂದ ಅಪಮಾನಿತರು ಆಗಿದ್ದಾರೆ. ಬುದ್ದಿಗೇಡಿಗಳಾಗಿ ನನ್ನ ಮಕ್ಕಳು ಮಾಡಿದ ಅಪರಾಧಗಳನ್ನು ಪರಮ ಸಾಧ್ವಿಯಾದ ನೀನು ಕ್ಷಮಿಸಬೇಕು. ನಮ್ಮ ಮನೆಯನ್ನು ಬೆಳಗುವ ಜ್ಯೋತಿ ನೀನು. ನಿನ್ನ ಕೋಪದಿಂದ ಈ ವಂಶ ನಿರ್ವಂಶವಾಗಬಾರದು. ನಮ್ಮ ಈ ಚಂದ್ರವಂಶದ ರಕ್ಷಣೆ ನಿನ್ನ ಕೈಯಲ್ಲಿದೆ. ಎಲ್ಲರನ್ನೂ ಕ್ಷಮಿಸಿ ನಮ್ಮ ಮನೆಯನ್ನು ಉಳಿಸಿ ಬೆಳೆಸಬೇಕು. ಮಗಳೇ ನಿನ್ನ ಬಗ್ಗೆ ಅಪಾರ ಗೌರವವಿದೆ. ನಿನ್ನ ಗುಣ, ಧರ್ಮದ ಬಗ್ಗೆ ಚೆನ್ನಾಗಿ ತಿಳಿದುಕೊಂಡಿದ್ದೇವೆ. ಮಾತ್ರವಲ್ಲ ನಿನ್ನ ಶ್ರೇಷ್ಠತೆಯನ್ನು ಮೆಚ್ಚಿ ಮೂರು ವರಗಳನ್ನು ನಿನಗೆ ನೀಡಬೇಕೆಂದು ಬಯಸಿದ್ದೇನೆ. ನಿನಗೆ ಬೇಕಾದುದನ್ನು ಕೇಳಿಕೋ ಮಗಳೇ” ಎಂದನು.

ದ್ರೌಪದಿಯು ಕೇಳಿಸಿಕೊಂಡು ಮನಸಾರೆ ಅತ್ತುಬಿಟ್ಟಳು “ಮಹಾರಾಜ, ನಿಮ್ಮಲ್ಲಿ ನಾನು ನನ್ನ ಕಷ್ಟ ಹೇಳಿಕೊಂಡೆ, ಬೇಡಿಕೊಂಡೆ. ಆದರೆ ಕೇಳಿಸಿಕೊಳ್ಳುವ ಕಾಲದಲ್ಲಿ ನೀವು ಉದಾಸೀನತೆ ತೋರಿದಿರಿ. ಇರಲಿ ಈ ಕ್ಷಣದಲ್ಲಾದರೂ ನಿಮಗೆ ಕೇಳುವ ಮನಸ್ಸಾಗಿದೆಯಲ್ಲಾ, ಅದೇ ದೈವ ಸಂಕಲ್ಪ ಎಂದು ತಿಳಿಯುವೆ”. ಹೀಗೆ ನುಡಿದು ತನ್ನೈವರು ಪತಿವರ್ಯರತ್ತ ನೋಡಿದರೆ ಅವರು ನೆಲನೋಟಕರಾಗಿದ್ದಾರೆ. ಆಲೋಚಿಸಿ ಕೇಳಿದಳು ” ರಾಜ, ಮೊದಲ ವರವಾಗಿ ನನ್ನನ್ನೂ ನನ್ನ ಐವರು ಪತಿಗಳನ್ನೂ ದಾಸ್ಯದಿಂದ ಮುಕ್ತಗೊಳಿಸಿ ಎಂದಳು” ಧೃತರಾಷ್ಟ್ರನು ಆ ಕೂಡಲೇ “ಹಾಗೆಯೇ ಆಗಲಿ. ನೀನು ಮತ್ತು ಪಾಂಡವರೈವರು ಸ್ವತಂತ್ರರು” ಎಂದು ಹೇಳಿದನು. ಎರಡನೆಯ ವರ ಕೇಳಲು ಅನುಮತಿ ನೀಡಿದನು. ಆಗ ದ್ರೌಪದಿ “ನನ್ನ ಐವರು ಪತಿಗಳ ಆಯುಧಗಳನ್ನು ಅವರವರಿಗೆ ಮರಳಿ ಕೊಡಿಸಿ” ಎಂದಳು. ಧೃತರಾಷ್ಟ್ರನು “ಹಾಗೆಯೇ ಆಗಲಿ, ಪಾಂಡವರ ಆಯುಧಗಳು ಅವರವರಿಗೆ ಕೊಡಲ್ಪಡಲಿ” ಎಂದು ಆದೇಶ ಮಾಡಿದನು. ಮೂರನೆಯ ವರ ಕೇಳಲು ಧೃತರಾಷ್ಟ್ರ ಅವಕಾಶ ನೀಡಿದ. ಆದರೆ ದ್ರೌಪದಿ ನಿರಾಕರಿಸಿ ಮೂರನೆಯ ವರ ನಾನು ಕೇಳಲಾಗದು ಎಂದಳು. ಅಂದರೆ ಕ್ಷತ್ರಿಯಾಣಿಯಾಗಿ ಎರಡು ವರ ಕೇಳಲು ಮಾತ್ರ ಅವಕಾಶವಿದೆ ಎಂಬರ್ಥವೋ ಅಲ್ಲ ಪರಮ ವಿಕ್ರಮಿಗಳಾದ ಪಾಂಡವರು ಸ್ವತಂತ್ರರಾಗಿ ಆಯುಧ ಧಾರಣೆ ಮಾಡಿದರೆ ಕಳೆದುದೆಲ್ಲೆವನ್ನೂ ಪುನರಪಿ ಸ್ವ ಸಾಮರ್ಥ್ಯದಿಂದ ಸಂಪಾದಿಸಬಲ್ಲರೆಂಬ ವಿಶ್ವಾಸದ ಸೂಚನೆಯೋ ಎಂಬಂತೆ ಎರಡು ವರ ಕೇಳಿ ಮೂರನೆಯದ್ದನ್ನು ಬೇಡಲಿಲ್ಲ. ಅಲ್ಲಿ ನೆರೆದಿದ್ದ ಸಜ್ಜನರ ಯೋಚನೆ ಬೇರೆಯಾಗಿತ್ತು. ದ್ರೌಪದಿ ತನಗೆ ಸಿಕ್ಕಿದ ಅವಕಾಶವನ್ನು ಸದ್ವಿನಿಯೋಗ ಪಡಿಸಿ ಕಳೆದುಕೊಂಡ ಸಂಪೂರ್ಣವನ್ನು ಪುನರಪಿ ಸ್ವಾಧೀನಪಡಿಸಿಕೊಳ್ಳಬೇಕಿತ್ತು. ಈ ಕೌರವರ ದುಷ್ಟಕೂಟವನ್ನು ತಮ್ಮ ಅಧೀನವೋ, ಇಲ್ಲ ಶಿಕ್ಷೆ ವಿಧಿಸಲೋ ಬಳಸಿಕೊಳ್ಳಬೇಕಿತ್ತು ಅಂದುಕೊಂಡರು. ಆದರೆ ದ್ರೌಪದಿ ಮಾತ್ರ ಆ ಮಟ್ಟಕ್ಕೆ ಇಳಿಯದೆ ಸ್ವಾಭಿಮಾನಿಯಾಗಿ ತನ್ನ ಯೋಗ್ಯತೆಯನ್ನು ಪ್ರಕಟಿಸುವಂತೆ ವ್ಯವಹರಿಸಿದ್ದಾಳೆ.

ಮುಂದುವರಿಯುವುದು..

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page