ಬಾಗ 166
ಭರತೇಶ್ ಶೆಟ್ಟಿ ಎಕ್ಕರ್

ಸಂಚಿಕೆ ೧೬೭ ಮಹಾಭಾರತ
ಅತಿಯಾದರೆ ಅಮೃತವೂ ವಿಷ. ಧರ್ಮರಾಯನ ಮನವೂ ವಿಷಮ ಸ್ಥಿತಿಗಿಳಿಯಿತು. ಹೌದಲ್ಲಾ ದ್ರೌಪದಿ ನಮ್ಮ ಪಾಲಿನ ಭಾಗ್ಯಲಕ್ಷ್ಮಿಯೇ ಹೌದು. ಈ ದುಸ್ಥಿತಿಯಿಂದ ಮೇಲೇಳುವ ಭಾಗ್ಯ ಆಕೆಯಿಂದಲಾದರೂ ಒದಗಲಿ ಎಂದು ಭಾವಿಸಿ, “ಸರಿ ಆಗೆಯೇ ಆಗಲಿ” ಎಂದು ದ್ರೌಪದಿಯನ್ನೇ ಪಣವಾಗಿಟ್ಟು ಆಡಿದನು. ಅರೆಕ್ಷಣದಲ್ಲಿ ಸಾಗಿದ ಆಟದ ಫಲಿತಾಂಶ ಧರ್ಮರಾಯ ಸೋತನು.
ದುರ್ಯೋಧನ ತನ್ನ ಇಷ್ಟಾರ್ಥ ಸಿದ್ಧಿಗೆ ಇನ್ನೇನು ಕಾಲ ಕೂಡಿ ಬಂದಿದೆ ಎಂದು ಅತಿ ಸಂಭ್ರಮಿಸಿದನು. ಇತ್ತ ಧೃತರಾಷ್ಟ್ರ ಸಂಜಯನಲ್ಲಿ ತನ್ನ ಮಗ ಏನೇನು ಗೆದ್ದುಕೊಂಡಿದ್ದಾನೆ ಎಂದು ಕೇಳಿ ತಿಳಿಯುವುದರಲ್ಲೇ ಮಗ್ನನಾಗಿದ್ದಾನೆ. ಭೀಷ್ಮಾಚಾರ್ಯರು ಕಲ್ಲಗೊಂಬೆಯಂತೆ ಮನಸ್ಸನ್ನೂ ಕಲ್ಲಾಗಿಸಿ ಕುಳಿತು ಕಣ್ಮುಚ್ಚಿ ಕಣ್ಣಂಚಿನಿಂದ ನೀರಿಳಿಸುತ್ತಾ, “ದೇವರೇ, ನಾನು ಕಾಪಿಟ್ಟು ಸಂರಕ್ಷಿಸಿದ ಸಾಮ್ರಾಜ್ಯದ ಪಂಚಾಂಗವೇ ಕುಸಿದರೂ, ಮೇಲ್ಛಾವಣಿಯನ್ನು ಹೊತ್ತು ನಿಂತ ಕಂಬದಂತೆ ಇನ್ನೂ ಭಾರವನ್ನು ಹೊತ್ತು ಸುಮ್ಮನೆ ನಿಲ್ಲಬೇಕಾಯಿತಲ್ಲ. ಈ ದುಸ್ಥಿತಿ ನೋಡಿದ ಬಳಿಕ ಇಚ್ಚಾಮರಣಿಯಾದ ನಾನು ಮರಣವನ್ನು ಇಚ್ಚಿಸಿದರೆ ತಪ್ಪೇನು? ಯಾಕಾಗಿ ಬದುಕಬೇಕು? ಎಂಬಂತೆ ಮರುಗುತ್ತಿದ್ದಾರೆ. ಇಂತಹ ಅನಾಚಾರವನ್ನು ಕಂಡು ಖಂಡಿಸಬೇಕೆಂದು ಬಾಯ್ತೆರೆಯಲು ಮುಂದಾದ ದ್ರೋಣರನ್ನು ಮಗ ಅಶ್ವತ್ಥಾಮ ಸುಮ್ಮನಾಗಿಸಿದನು. ನಿರಂಕುಶನಾದ ದುರ್ಯೋಧನ ವಿದುರನನ್ನು ಕರೆದು “ಹೇ ವಿದುರಾ! ನಮಗೆಲ್ಲಾ ಹಿರಿಯನು ನೀನು. ಆದರೂ ಏಕೋ ಏನೋ ನಿನಗೆ ಪಾಂಡವರೆಂದರೆ ಕೌರವರಾದ ನಮಗಿಂತಲೂ ತುಸು ಹೆಚ್ಚು ಪ್ರೀತಿ. ಈಗ ಧರ್ಮರಾಯ ತನ್ನ ಸಹೋದರರ ಜೊತೆ ಪತ್ನಿ ದ್ರೌಪದಿಯನ್ನೂ ಪಣದಲ್ಲಿ ಸೋತ ಪರಿಣಾಮ ನಮ್ಮ ದಾಸರಾಗಿದ್ದಾರೆ. ನೀನು ದ್ರೌಪದಿಯ ಅಂತಃಪುರಕ್ಕೆ ಹೋಗಿ ನಾನು ಬರ ಹೇಳಿದ್ದೇನೆಂದು ಹೇಳು. ನನ್ನ ಅರಮನೆಯ ಕಸಗುಡಿಸುವ ದಾಸಿಯರ ಜೊತೆ ಈಕೆಯೂ ಸೇರಿಕೊಳ್ಳಲು ನನ್ನ ಅಪ್ಪಣೆಯಾಗಿದೆ ಎಂದು ತಿಳಿಸು” ಎಂದನು.
ಕೆರಳಿ ಕೆಂಡಾಮಂಡಲನಾದ ವಿದುರ ” ಎಲವೋ ಮೂಢ, ಅಧಮ, ಮೂರ್ಖ ದ್ರೌಪದಿಯ ಬಗ್ಗೆ ನೀನೇನು ತಿಳಿದಿರುವೆ? ಆಕೆ ಅಗ್ನಿ ಸಂಭವೆ, ಯಾಜ್ಞಸೇನೆ. ದ್ರುಪದಜೆ, ವರ್ತಮಾನ ಚಕ್ರವರ್ತಿಣಿ. ತನ್ನನ್ನೇ ಸೋತ ಬಳಿಕ ಅಧಿಕಾರವಿಲ್ಲದಿದ್ದರೂ ನಿಮ್ಮವರ ದುಷ್ಪ್ರೇರಣೆಗೆ ಬಲಿಯಾಗಿ ಧರ್ಮರಾಯ ತಪ್ಪೆಸಗಿದ್ದಾನೆ. ಆತನಿಗೆ ಪಣವಾಗಿ ದ್ರೌಪದಿಯನ್ನಿಟ್ಟು ಆಡುವ ಅಧಿಕಾರವಿತ್ತೇ? ಇದನ್ನು ಮೊದಲು ವಿವೇಚಿಸಬೇಕು. ಅದೇನೇ ಇರಲಿ, ನೀನೇನೆಂದೆ ? ದ್ರೌಪದಿ ನಿನ್ನ ದಾಸಿಯಾಗ ಬೇಕೇ! ಯಾರೂ ಆಡಲೇಬಾರದಾದ ಮಾತನ್ನು ನೀನಾಡಿ ಪಾಪಿಯಾದೆ. ಆಕೆ ಅಸಾಮಾನ್ಯಳು. ಯಮಪಾಶದಂತಿರುವ ಆಕೆಯನ್ನು ಕೆಣಕಿ ನಿನ್ನ ಕೊರಳಿಗೆ ಉರುಳಾಗಿಸಿರುವೆ. ಅರಿಯದೆ ನಿನ್ನಿಂದ ತಪ್ಪಾಗಿದ್ದರೆ, ಈಗಲೂ ಕಾಲ ಮಿಂಚಿಲ್ಲ. ದುರ್ಮಾರ್ಗ ಬಿಟ್ಟು ಹಿತ ಅಹಿತ ಕಾರ್ಯಗಳನ್ನು ಅದರ ಪರಿಣಾಮಗಳನ್ನೂ ತರ್ಕಿಸಿ ಧರ್ಮಪಥವನ್ನು ಆರಿಸಿದರೆ ನಿನಗೆ ಏಳಿಗೆಯಿದೆ. ಇಲ್ಲವಾದರೆ ಆಕೆಯ ಕಾರಣದಿಂದಲೇ ಈ ನಿನ್ನ ಬಳಗವನ್ನು ಯಾಜ್ಞಸೇನಿಯಾದ ದ್ರೌಪದಿ ಆಹುತಿಯಾಗಿ ಸ್ವೀಕರಿಸಿ ವೈಶ್ವಾನರನಿಗೆ (ಅಗ್ನಿಗೆ) ಆಹಾರವಾಗಿಸುತ್ತಾಳೆ ಎಚ್ಚರವಿರಲಿ. ಮೈಮರೆತು ಕುಲನಾಶಕವಾದ ದ್ಯೂತವನ್ನು ವಂಚನೆಯ ಮಾರ್ಗ ಅನುಸರಿಸಿ ಆಡಿದ ನಿನಗೆ ಕ್ಷಣಿಕ ಗೆಲುವಷ್ಟೇ ಒದಗಿದೆ. ಮದೋನ್ಮತ್ತನಾಗಿ ಉಚಿತ ಅನುಚಿತಗಳನ್ನು ವಿವೇಚಿಸದೆ ಮುಂದುವರಿದೆ ಎಂದಾದರೆ ನಿನ್ನಿಂದಲೇ ಕುಲಕ್ಷಯವಾಗಿ ನಾಶವಾಗಲಿದೆ. ಈ ಹಿಂದೆಯೂ ನಿನಗೆ ಈ ಅನುಭವ ಆಗಿದೆ. ಪ್ರಮಾಣಕೋಟಿಗೆ ಭೀಮನನ್ನು ತಳ್ಳಿದಾಗ, ವಾರಣಾವತದ ಅರಗಿನ ಅರಮನೆಯ ವೃತ್ತಾಂತ, ಹೆಚ್ಚೇಕೆ ದ್ರೌಪದಿಯ ಸ್ವಯಂವರ ಪ್ರಕರಣಗಳಲ್ಲಿ ನಿನ್ನ ಕೃತ್ಯಗಳನ್ನೂ, ನಿನಗಾದ ಪರಿಭವಗಳನ್ನೂ ಸ್ಮರಿಸಿ ಕೊಂಡು ತರ್ಕಿಸು. ಕೆಟ್ಟ ಮೇಲೂ ಬುದ್ದಿ ಬಾರದೆ ಹೋದರೆ ಅದೇ ನಿನ್ನ ಪಾಲಿನ ದುರ್ದೈವ” ಎಂದು ಸ್ಪಷ್ಟವಾಗಿ ನಿಷ್ಠುರದ ನುಡಿಗಳಲ್ಲಿ ತಿಳಿ ಹೇಳಿ ಎಚ್ಚರಿಸಿದನು.
ವಿದುರನ ವಚನಗಳು ಶಕುನಿ ದುರ್ಯೋಧನರನ್ನು ತಡೆದೀತೇ? ಕೊಳಚೆ ಅನ್ಯರಿಗೆ ಹೊಲಸಾದರೂ, ಹಂದಿಗೆ ಹಿತವಲ್ಲವೇ? ಕೋಣನ ಮುಂದೆ ಕಿನ್ನರಿ ಬಾರಿಸಿದಂತೆ ವಿದುರನ ಎಚ್ಚರಿಕೆ ಕೌರವ ಪಾಳಯದ ಮೇಲೆ ಕಿಂಚಿತ್ ವ್ಯತ್ಯಾಸವನ್ನೂ ಮಾಡಲಿಲ್ಲ. ವಿದುರನನ್ನು ಮತ್ತೆ ಹೀನಾಯವಾಗಿ ನಿಂದಿಸಿ, ಅಪಮಾನಿಸಿದರು. ದುರ್ಯೋಧನ ತಿರುಗಿ ನಿಷ್ಠಾವಂತ ಸೇವಕ ಪ್ರಾತಿಕಾಮಿಯನ್ನು ಕರೆದನು. “ಅಯ್ಯಾ ಪ್ರಾತಿಕಾಮಿ ಸೂತನೇ, ನೀನು ದ್ರೌಪದಿಯ ಅಂತಃಪುರಕ್ಕೆ ಹೋಗಿ ಆ ದಾಸಿಯನ್ನು ಕರೆದು ತಾ. ಪಾಂಡವರಿಗೋ, ಇಲ್ಲಾ ಈ ಮುದಿ ವಿದುರನಿಗೋ ನೀನು ಹೆದರುವ ಅವಶ್ಯಕತೆಯಿಲ್ಲ. ನಿನಗಿದು ರಾಜಾಜ್ಞೆ. ನಾನು ಆಜ್ಞೆ ಮಾಡಿರುವೆನೆಂದು ಹೇಳಿ ಕರೆದು ಕೊಂಡು ಬಾ” ಎಂದು ಆಜ್ಞಾಪಿಸಿದನು.
ಅಂತೆಯೇ ಪ್ರಾತಿಕಾಮಿ ಪಾಂಡವರ ವಲ್ಲಭೆ ದ್ರೌಪದಿಯ ಅಂತಃಪುರದ ಬಳಿ ಬಂದು ಪ್ರವೇಶಕ್ಕೆ ಅಪ್ಪಣೆ ಬೇಡಿದನು. ದೊರೆತಾಗ ಒಳಬಂದು, ” ಅಮ್ಮಾ ದ್ರೌಪದಿ ದೇವಿ, ನಿಮ್ಮ ಪತಿಯಾದ ಧರ್ಮರಾಯ ಪ್ರಭುಗಳು ಯಾಕೋ ದುರ್ಬುದ್ಧಿಗೊಳಗಾದವರಾಗಿ ದ್ಯೂತವಾಡಿದರು. ತನ್ನ ಸಮಸ್ತವನ್ನೂ, ಸಹೋದರರನ್ನೂ, ತನ್ನನ್ನೂ ಸೋತ ಬಳಿಕ ನಿಮ್ಮನ್ನೂ ಪಣವಾಗಿರಿಸಿ ಆಡಿ ಸೋತಿದ್ದಾರೆ. ಈಗ ನೀವೂ ದುರ್ಯೋಧನನ ವಶವಾಗಿದ್ದೀರಿ. ನಿಮ್ಮನ್ನು ಸಭೆಗೆ ಕರೆತರಲು ರಾಜಾಜ್ಞೆಯಾಗಿದೆ. ಅಪ್ಪಣೆಯಂತೆ ಆ ಕಾರ್ಯಕ್ಕಾಗಿ ನಾನಿಲ್ಲಿ ಬಂದಿರುವೆ. ತಾವು ದಯಮಾಡಿಸಬೇಕು” ಎಂದು ದುಃಖದಿಂದ ಬೇಡಿದನು.
ಧರ್ಮರಾಯನು ಧರ್ಮಿಷ್ಟನೇ ಹೌದು. ನಿಸ್ಸಂದೇಹವಾಗಿ ಆತನ ಧರ್ಮ ಬುದ್ದಿಯನ್ನು ಅರಿತಿದ್ದೇನೆ. ಇಂದೇಕೆ ಯುಧಿಷ್ಠಿರನ ಸ್ಥಿರತೆಗೆ ಮಂಕು ಕವಿಯಿತು ಎಂದು ಚಿಂತಿಸಿ ಒಮ್ಮೆಗೆ ಆಕೆಗೆ ಭೂಮಿಯೇ ಕುಸಿದಂತಾಯಿತು. ಹೀಗೆ ಆಗಿರುವುದು ನಿಜವೇ ಎಂಬ ಅನುಮಾನವೂ ಆಕೆಗೆ ಆಯಿತು. ಆದರೂ ಸಾವರಿಸಿಕೊಂಡು, ಧೈರ್ಯದಿಂದ ಕೇಳಿದಳು ” ಅಯ್ಯಾ ಸೂತನೇ, ಯಾವ ರಾಜನೇ ಆದರೂ ಪತ್ನಿಯನ್ನು ಪಣವಾಗಿಟ್ಟು ಜೂಜಾಡುವ ಕ್ರಮವಿದೆಯೇ? ಧರ್ಮರಾಯನಿಗೆ ಆಡಬೇಕೆಂದಿದ್ದರೆ ಅಕ್ಷಯವಾದ ಸಂಪತ್ತು ಬೇಕಾದಷ್ಟಿತ್ತಲ್ಲವೇ? ಎಂದು ಪ್ರಶ್ನಿಸಿದಳು.
ಆಗ ಪ್ರಾತಿಕಾಮಿ “ಅಮ್ಮಾ ಸರ್ವಸ್ವವನ್ನೂ ಸೋತ ಧರ್ಮರಾಜರು ಸೋದರರನ್ನೂ, ತನ್ನನ್ನೂ ಸೋತು ಕಡೆಗೆ ನಿಮ್ಮನ್ನೂ ಒಡ್ಡಿ ಸೋತಿದ್ದಾರೆ”
ಮಹಾರಾಜ್ಞಿ ಚಕ್ರವರ್ತಿಣಿಯಾಗಿ ಆಜ್ಞೆ ಮಾಡಿದಳು “ಪ್ರಾತಿಕಾಮಿ, ನೀನು ಸಭೆಗೆ ಹೋಗು. ಧರ್ಮರಾಯನಲ್ಲಿ ನಾನು ಪ್ರಶ್ನೆ ಕೇಳಿದ್ದೇನೆಂದು ಹೇಳು. ಏನೆಂದರೆ, ಮೊದಲು ಪಣಕ್ಕೆ ಯಾರನ್ನು ಒಡ್ಡಿದೆ? ತನ್ನನ್ನು ತಾನೆ ಸೋತ ಬಳಿಕ, ತಾನು ಪರಾಧೀನನಾದ ನಂತರದಲ್ಲಿ ಅನ್ಯರ ಮೇಲೆ ಅಧಿಕಾರವಿದೆಯೇ? ಇಲ್ಲವೆಂದಾದರೆ ಈ ಪಣ ಸಿಂಧುವೇ?” ಹೀಗೆ ಕೇಳಿ ಸದುತ್ತರ ಪಡೆದು ಬಾ ಆ ಬಳಿಕ ನಾನು ಬರಲಾದೀತೆ ಎಂದು ಹೇಳುವೆ” ಎಂದು ಮರು ಜವಾಬ್ದಾರಿ ಹೊರಿಸಿ ಸೇವಕನನ್ನು ಕಳುಹಿಸಿದಳು.
ಪ್ರಾತಿಕಾಮಿ ಸಭಾಮಧ್ಯಕ್ಕೆ ಬಂದು ದ್ರೌಪದಿಯ ಪ್ರಶ್ನೆಯನ್ನು ಮಂಡಿಸಿ, ಉತ್ತರಕ್ಕಾಗಿ ಕಾದು ನಿಂತನು.
ಮುಂದುವರಿಯುವುದು…