28.5 C
Udupi
Saturday, February 14, 2026
spot_img
spot_img
HomeBlogಮಹಾಭಾರತ

ಮಹಾಭಾರತ

spot_imgspot_img

ಭಾಗ 153

ಭರತೇಶ್ ಶೆಟ್ಟಿ, ಎಕ್ಕಾರ್

ಭೀಮಸೇನನು ಮೊದಲು ಪಾಂಚಾಲ ದೇಶಕ್ಕೆ ಹೋದನು. ಅಲ್ಲಿ ಗೌರವಾದರಗಳೊಂದಿಗೆ ಕಪ್ಪ ಕಾಣಿಕೆ ದೊರೆಯಿತು. ನಂತರ ದಶಾರ್ಣ ದೇಶಕ್ಕೆ ಹೋಗಿ ಅಲ್ಲಿನ ರಾಜ ಸುಧರ್ಮನನ್ನು ಘೋರ ಯುದ್ದದ ಬಳಿಕ ಸೋಲಿಸಿದನು. ಆತನ ಶೌರ್ಯಕ್ಕೆ ಮೆಚ್ಚಿ ಸೇನಾಪತಿಯಾಗಿ ನಿಯೋಜಿಸಿ ದಿಗ್ವಿಜಯ ಮುಂದುವರಿಯಿತು. ಬಳಿ ರಾಜಾ ಅಶ್ವಮೇದೇಶ್ವರನನ್ನು ಸೋಲಿಸಿ ಪುಳಿಂದ ನಗರವನ್ನು ಆಕ್ರಮಿಸಿ ಸುಮಿತ್ರ – ಸುಕುಮಾರ ಎಂಬ ರಾಜರಿಬ್ಬರನ್ನು ಸೋಲಿಸಿ ಕಪ್ಪ ಸಂಗ್ರಹಿಸಿದನು. ಅಲ್ಲಿಂದ ಚೇದಿರಾಜ್ಯಕ್ಕೆ ಬಂದಾಗ ಅಲ್ಲಿನ ಅರಸನಾದ ಶಿಶುಪಾಲ ಪ್ರೀತಿಯಿಂದ ಬರಮಾಡಿಕೊಂಡು ಬಹುವಿಧದ ಕಾಣಿಕೆಯಿತ್ತು ಮನ್ನಿಸಿದನು. ಹೀಗೆ ಭೀಮಸೇನನೂ ಅಪಾರ ಕಪ್ಪ ಕಾಣಿಕೆ ಸಂಗ್ರಹಿಸುತ್ತಾ ಇಂದ್ರಪ್ರಸ್ಥಕ್ಕೆ ಮರಳಿ ಬಂದನು.

ದಕ್ಷಿಣ ದಿಕ್ಕಿಗೆ ಹೊರಟಿದ್ದ ಸಹದೇವನು ಸೈನ್ಯದೊಂದಿಗೆ ಶೂರಸೇನದೇಶ, ಮತ್ಸ್ಯದೇಶ, ಪಟಚ್ಚರರೆಂಬ ಚೋರರಾಜರನ್ನೆಲ್ಲಾ ಗೆದ್ದು ಕಪ್ಪ ಸಂಗ್ರಹಿಸುತ್ತಾ ಕುಂತಿಭೋಜಕ್ಕೆ ಬಂದನು. ಅಲ್ಲಿ ಅಪಾರ ಪ್ರೀತಿ ವಾತ್ಸಲ್ಯದ ಸ್ವಾಗತ ಆದರ ಆತಿಥ್ಯದ ಜೊತೆ ಕಪ್ಪವೂ ಜೊತೆಗೆ ಸೈನ್ಯವೂ ಸಿಕ್ಕಿತು. ಆವಂತಿನಗರದ ವಿಂದಾನು – ವಿಂದರನ್ನು ಸೋಲಿಸಿ ಭೀಷ್ಮಕ, ಕೋಸಲ, ದೇಶಾಧಿಪರನ್ನು ಗೆದ್ದು, ಪ್ರಾಕೋಟರು, ನಾಟಕೇಯರು, ಹೋದಂಬಕರು, ವಾಜೀನರು, ಅರ್ಬುಕರನ್ನೆಲ್ಲಾ ಸೋಲಿಸಿ ಮಾಹೀಷ್ಮತಿ ನಗರಕ್ಕೆ ಬಂದನು. ಅಲ್ಲಿನ ರಾಜನಾದ ನೀಲನಿಗೂ ಸಹದೇವನಿಗೂ ಯುದ್ದವಾಗಿ ಸಹದೇವನಿಗೆ ಬದುಕುವುದೇ ಕಷ್ಟ ಎಂಬ ಸ್ಥಿತಿ ಒದಗಿತು. ಸೈನ್ಯ, ಆನೆ ಕುದುರೆಗಳೂ ವಿಪರೀತ ಅಗ್ನಿಜ್ವಾಲೆಯ ಎದುರು ಕಮರಿ ಜೀವ ಉಳಿಸಿಕೊಳ್ಳಲು ತೊಳಲಾಡಬೇಕಾಯಿತು. ಈ ರೀತಿಯ ಉರಿ ಜ್ವಾಲೆಗೆ ಅಗ್ನಿ ದೇವನೆ ನೇರ ಕಾರಣ ಎಂಬುವುದನ್ನು ಅರಿತುಕೊಂಡ ಸಹದೇವ, ಕೈಕಾಲು ಮುಖ ತೊಳೆದು ಪರಿಶುದ್ಧನಾಗಿ ಆಚಮನ ಮಾಡಿ, ನೆಲದ ಮೇಲೆ ದರ್ಬಾಸನ ಹರಡಿ ಕುಳಿತು ಅಗ್ನಿದೇವನನ್ನು ಬಹುವಿಧವಾಗಿ ಸ್ತೋತ್ರ ಮಾಡಿದನು.

ಮಾಹಿಷ್ಮತಿ ನಗರಕ್ಕೆ ಅಗ್ನಿ ದೇವನ ರಕ್ಷಣೆಯಿದೆ. ಅರಸನಾದ ನೀಲ ಅಥವಾ ನೀಲಧ್ವಜನಿಗೆ ಸುಂದರಿಯಾದ ಮಗಳೊಬ್ಬಳಿದ್ದಾಳೆ. ಅವಳು ತನ್ನ ತಂದೆ ಹೋಮ ಹವನಾದಿಗಳಲ್ಲಿ ನಿರತನಾದಾಗ ಅಗ್ನಿಯು ಆರಿ ಹೋಗದಂತೆ ಬೀಸಣಿಗೆ ಬೀಸುತ್ತಾ ಸಹಕರಿಸಿ ಅಗ್ನಿಯನ್ನು ಸ್ಥಿತಗೊಳಿಸುತ್ತಿದ್ದಳು. ಆದರೆ ಒಮ್ಮೆ ಬೀಸಣಿಗೆಯಿಂದ ಎಷ್ಟು ಗಾಳಿ ಬೀಸಿದರೂ ಅಗ್ನಿ ಪ್ರಜ್ವಲಿಸಲಿಲ್ಲ. ಬೀಸಿ ಬೀಸಿ ದಣಿದು ಸುಸ್ತಾಗಿ ಅಗ್ನಿದೇವನನ್ನು ಪ್ರಸನ್ನನಾಗು ಎಂದು ಪರಿಪರಿಯಾಗಿ ಬೇಡುತ್ತಾ, ಬಾಗಿ ಬಗ್ಗಿ ತುಟಿಗಳನ್ನು ಅಗ್ನಿಯ ಸಮೀಪಕ್ಕೆ ತಂದು ಬಾಯಿಯ ಮೂಲಕ ಊದಿದಳು. ಆಗ ಆರಿ ನಂದಿಹೋಗಿದ್ದ ಅಗ್ನಿಯು ಭುಗ್ಗೆಂದು ಪ್ರಜ್ವಲಿಸಿದನು. ಎಲ್ಲರಿಗೂ ಆಶ್ಚರ್ಯವಾಯಿತು. ಅರಸ ನೀಲನೂ, ಆತನ ಆಪ್ತರೂ ಅರೆ ಇದೇನು ಸೋಜಿಗ! ಇದರಲ್ಲೇನೋ ರಹಸ್ಯವಿದೆ ಎಂದು ತರ್ಕಿಸುತ್ತಿರುವಾಗ ಅಗ್ನಿಯು ಬ್ರಾಹ್ಮಣ ರೂಪದಲ್ಲಿ ಪ್ರತ್ಯಕ್ಷನಾಗಿ ಬಿಟ್ಟನು. ರಾಜನನ್ನು ಉದ್ದೇಶಿಸಿ “ಅಯ್ಯಾ ಮಹಾರಾಜ, ನಾನು ಅಷ್ಟ ದಿಕ್ಪಾಲಕರಲ್ಲಿ ಒಬ್ಬನಾದ ಅಗ್ನಿ. ರಾಜಕುಮಾರಿಯ ಬಗ್ಗೆ ನಾನು ಮೋಹಿತನಾಗಿದ್ದೇನೆ” ಎಂದನು. ಯಾಗ ದೀಕ್ಷಿತನಾದ ಅರಸ ನಿರುಪಾಯನಾಗಿ ತನ್ನ ಮಗಳನ್ನು ಅಗ್ನಿ ದೇವನ ಬೇಡಿಕೆಯಂತೆ ಧಾರೆಯೆರೆದು ಕೊಟ್ಟನು. ಸುಪ್ರೀತನಾದ ಅಗ್ನಿದೇವ, ರಾಜ ನಿನ್ನ ಅಭೀಷ್ಟವೇನೆಂದು ಹೇಳಿದರೆ ನೆರವೇರಿಸಿ ಕೊಡುವೆ ಎಂದು ಪ್ರಸನ್ನನಾಗಿ ಅಭಯ ನೀಡಿದನು. ಆಗ ಕನ್ಯಾಪಿತನೂ ಮಹಾರಾಜನೂ ಆದ ನೀಲಧ್ವಜ “ಕ್ಷತ್ರಿಯನಾಗಿ ನನ್ನ ಮಗಳನ್ನು ವಿವಾಹ ಮಾಡಿಸಿ ಕೊಡುವಲ್ಲಿ ಕನ್ಯಾಶುಲ್ಕವಾಗಿ ಏನಾದರು ಕೇಳಬಹುದಿತ್ತು. ಹಾಗೆ ಸ್ವೀಕರಿಸಲು ನೀನು ಕ್ಷತ್ರಿಯನಲ್ಲ, ಬದಲಾಗಿ ದೇವನೇ ಆಗಿರುವೆ. ನಮ್ಮ ರಾಜ್ಯಕ್ಕೆ ನಿನ್ನ ಅನುಗ್ರಹವಿದ್ದರೆ ನನಗದೇ ಸಾಕು” ಎಂದು ಹೇಳಿದನು. ಪ್ರಸನ್ನನಾದ ಅಗ್ನಿ ದೇವ ರಾಜನ ಧರ್ಮ ಬುದ್ಧಿಗೆ ಮೆಚ್ಚಿ ಅಂದಿನಿಂದ ರಾಜ್ಯದ ರಕ್ಷಣೆಯ ಹೊಣೆಗಾರಿಕೆ ವಹಿಸಿಕೊಂಡನು. ಮಾಹೀಷ್ಮತಿಗೆ ಯಾರೇ ಆಕ್ರಮಣ ಮಾಡಿದರೂ ಅಗ್ನಿಯ ಉರಿಜ್ವಾಲೆಗೆ ಸುಟ್ಟು ಹೋಗುತ್ತಿದರು.

ಈ ವೃತ್ತಾಂತ ಅರಿತ ಸಹದೇವ ಶಕ್ತಿ ಪ್ರಯೋಗಿಸುವ ಬದಲು ಭಕ್ತಿ ಪಥದಲ್ಲಿ ಸಾಗಿ ಅಗ್ನಿಯನ್ನು ಒಲಿಸಿಕೊಂಡನು. ಸಹದೇವನ ಭಕ್ತಿಗೆ ಪ್ರತ್ಯಕ್ಷನಾದ ಅಗ್ನಿ ನೀಲಧ್ವಜನನ್ನು ಕರೆದು ಸಂಧಾನ ಮಾಡಿ ಮಹಾ ಪುಣ್ಯಪ್ರದವಾದ ರಾಜಸೂಯ ಯಾಗಕ್ಕೆ ಕಪ್ಪ ಕಾಣಿಕೆ ನೀಡುವಂತೆ ಆದೇಶಿಸಿದನು. ಬಳಿಕ ನಾಲ್ಕೈದು ದಿನ ಸಹದೇವನಿಗೆ ಉಚಿತ ಆದರ ಸತ್ಕಾರದ ವ್ಯವಸ್ಥೆಯನ್ನೂ ಮಾಡಿ ವಿಶ್ರಾಂತಿಗೆ ಅವಕಾಶ ನೀಡಿ ಮುಂದೆ ಕಳುಹಿಸಿದನು.

ಅಲ್ಲಿಂದ ಮುಂದುವರಿದು ತ್ರೈಪುರ, ಪೌರವ, ಸೌರಾಷ್ಟ್ರ, ಶೂರ್ಪಾದಕ, ದಂಡಕಾವನ, ಸಮುದ್ರ ದ್ವೀಪ, ಪುರುಷಾದ, ಕರ್ಣಪ್ರಾವಣ, ಕಾಲಮುಖ, ಕೋಲಗಿರಿ, ಸುರಭಿನಗರ, ತಾಮ್ರದ್ವೀಪ, ರಾಮಕಪರ್ವತ, ಕೇರಳ, ಸಂಜಯಂತಿ, ಪಾಷಂಡ, ಕರಹಾಟಕ, ಪಾಂಡ್ಯ, ದ್ರಾವಿಡ, ಆಂದ್ರ, ಕಾಲವನ, ಕಳಿಂಗ, ಉಷ್ಟ್ರಕರ್ಣೀಕ, ತಾಮ್ರಪರ್ಣಿ, ಕನ್ಯಾತೀರ್ಥಗಳೆಲ್ಲವನ್ನೂ ಗೆದ್ದು ಅಮಿತ ಕಪ್ಪ ಕಾಣಿಕೆ ಸಂಗ್ರಹಿಸಿದನು. ಇನ್ನು ದಕ್ಷಿಣದಲ್ಲಿ ಯಾವ ರಾಜ್ಯವೂ ಉಳಿದಿಲ್ಲ ಎಂದು ಖಚಿತ ಪಡಿಸಿ ಹೊರಡಬೇಕೆನ್ನುವಷ್ಟರಲ್ಲಿ ಸಮುದ್ರದಾಚೆ ಲಂಕೆಯಿದೆ ಎಂಬ ನೆನಪಾಯಿತು. ತಕ್ಷಣ ಅಣ್ಣ ಭೀಮಸೇನನ ಮಗನಾದ ಘಟೋತ್ಕಚನನ್ನು ಸ್ಮರಿಸಿ ಕರೆಸಿಕೊಂಡನು. ಆತನನ್ನು ಲಂಕೆಯ ಮಹಾರಾಜ ವಿಭೀಷಣನನಲ್ಲಿಗೆ ಹೋಗಲು ಹೇಳಿ ಧರ್ಮರಾಯನ ರಾಜಸೂಯ ಯಾಗದ ವಿಚಾರ ತಿಳಿಸಿ, ಸಹದೇವನ ಅಪ್ಪಣೆಯಂತೆ ಇಲ್ಲಿ ಬಂದಿರುವೆ ಎಂದು ತಿಳಿಸಲು ಹೇಳಿದನು. ಅಂತೆಯೇ ಘಟೋತ್ಕಚ ವಿಭೀಷಣನನಲ್ಲಿಗೆ ಹೋದಾಗ ಬಹುವಿಧದಿಂದ ಸತ್ಕರಿಸಿ ವಿಪುಲವಾದ ದ್ರವ್ಯಗಳನ್ನು ಕಪ್ಪಕಾಣಿಕೆಯಾಗಿ ಯಾಗಕ್ಕೆ ಸಹಾಯವಾಗಿ ನೀಡಿ ಕಳುಹಿಸಿದನು. ಹೀಗೆ ಮಹತ್ತರವಾದ ದಿಗ್ವಿಜಯಗೈದು ಅಪಾರವಾದ ಧನಕನಕಾದಿ ಕಪ್ಪ ಕಾಣಿಕೆಗಳ ಸಂಗ್ರಹದೊಂದಿಗೆ ಸಹದೇವ ಇಂದ್ರಪ್ರಸ್ಥಕ್ಕೆ ಮರಳಿದನು.

ಪಶ್ಚಿಮ ದಿಕ್ಕಿಗೆ ನಕುಲ ಬಹು ದೊಡ್ಡ ಸೇನೆಯ ಜೊತೆ ಹೊರಟಿದ್ದಾನೆ.

ಮುಂದುವರಿಯುವುದು…

spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page