ಭಾಗ 122
ಭರತೇಶ್ ಶೆಟ್ಟಿ,ಎಕ್ಕಾರ್

“ನಾವೆಲ್ಲವರೂ ಪಾಂಡವರ ಹಿತ ಚಿಂತಕರೇ ಆಗಿದ್ದೇವೆ. ಅವರ ಶ್ರೇಯಸ್ಸಿಗೆ ಪೂರಕವಾಗಿ ನಾವು ವ್ಯವಹರಿಸಬೇಕಾದದ್ದು ಯುಕ್ತವು. ಹಿರಿಯನೂ, ಮಹಾರಾಜನೂ ಆದ ಧೃತರಾಷ್ಟ್ರನ ಕರೆಯನ್ನು ಪುರಸ್ಕರಿಸುವುದೇ ನ್ಯಾಯಮಾರ್ಗ. ಧರ್ಮರಾಯ ಮತ್ತು ಆತನ ಸಹೋದರರು ಧರ್ಮನಿಷ್ಠರೇ ಆಗಿದ್ದಾರೆ. ಹಿರಿಯರ ಮಾತನ್ನು ಅನುಸರಿಸುವ ಸತ್ಸ್ವಭಾವ ಅವರದ್ದಾಗಿದೆ. ಚಂದ್ರವಂಶೀಯರಾದ ಪಾಂಡವರು ಅವರ ಸಾಮ್ರಾಜ್ಯದಲ್ಲೇ ವಾಸಿಸಬೇಕಾದವರು. ಮಗಳನ್ನು ಮದುವೆ ಮಾಡಿಸಿಕೊಟ್ಟು ಅಳಿಯಂದಿರನ್ನು ಅವರ ರಾಜ್ಯಕ್ಕೆ ಕಳುಹಿಸಿಕೊಡುವುದು ಮಾವನಾಗಿ ದ್ರುಪದ ರಾಜನಿಗೂ ಧರ್ಮವೇ ಆಗಿದೆ. ದೃಷ್ಟದ್ಯುಮ್ನನ ಅಭಿಪ್ರಾಯದಂತೆ ಪಾಂಡವರು ಸ್ವಂತ ಸಾಮ್ರಾಜ್ಯ ಸ್ವಶಕ್ತಿ ಸಾಮರ್ಥ್ಯ, ಪರಾಕ್ರಮದಿಂದ ಸ್ಥಾಪಿಸುವಲ್ಲಿ ಸಶಕ್ತರೇ ಹೌದಾದರೂ, ಆ ಪಥದಲ್ಲಿ ಸಾಗಿ ಕಲಹಕಾರಕರಾಗುವುದು ಕ್ಷೇಮಕರವಲ್ಲ. ಹಿರಿಯರ ತೀರ್ಮಾನವನ್ನು ಅಂಗೀಕರಿಸಿ ಅನುಸರಿಸಿ ನಡೆಯುವುದು ಒಳಿತು. ಇದರಿಂದ ಪಾಂಡವರಿಗೆ ಯಾವುದೇ ಹಾನಿಯಾಗದು. ಧರ್ಮ ಪಥದಲ್ಲಿ ನಡೆಯುವ ಇವರನ್ನು ಧರ್ಮವೇ ಸಂರಕ್ಷಿಸಲಿದೆ. ಆದರೆ ಪಾಂಡವರು ಬಹಳ ಎಚ್ಚರದಿಂದಿರಬೇಕು. ಪ್ರತಿಯೊಂದು ಹೆಜ್ಜೆ, ನಡೆ, ತೀರ್ಮಾನಗಳೂ ಯೋಚಿಸಿ ಜಾಗರೂಕತೆಯಿಂದ ಕೈಗೊಳ್ಳಬೇಕು. ಮೈಮರೆತು ಕುಳಿತವರನ್ನು ದೈವವೂ ಉಪೇಕ್ಷಿಸಿ ಬಿಡುತ್ತದೆ” ಹೀಗೆ ಶ್ರೀ ಕೃಷ್ಣ ತನ್ನ ಮನದಿಂಗಿತ ಹೇಳುತ್ತಿದ್ದಂತೆ ಎಲ್ಲರೂ ಆತನ ಅಭಿಪ್ರಾಯಕ್ಕೆ ತಮ್ಮ ಸಹಮತವಿದೆಯೆಂದು ಸಂತೋಷದಿಂದ ಜಯಕಾರ ಕೂಗಿದರು.
ಧೌಮ್ಯ ಮಹರ್ಷಿಗಳೂ, ದ್ರುಪದ ಮಹಾರಾಜನ ಪುರೋಹಿತರೂ ಸೇರಿ ಸುಮುಹೂರ್ತ ನಿಗದಿ ಪಡಿಸಿ ಪಾಂಡವರ ಬೀಳ್ಗೊಡುಗೆಗೆ ಸಿದ್ಧತೆ ಆರಂಭಿಸಿದರು. ದ್ರುಪದ ಮಹಾರಾಜನು ತನ್ನ ಮಗಳು ದ್ರೌಪದಿಗೂ, ಅಳಿಯಂದಿರಿಗೂ ರಾಜ ಯೋಗ್ಯ ಬಳುವಳಿಗಳನ್ನೂ, ಉಡುಗೊರೆಗಳನ್ನೂ ಯಥೇಚ್ಚವಾಗಿ ನೀಡಿದನು. ಮಹಾರಾಜ ಧೃತರಾಷ್ಟ್ರ, ಭೀಷ್ಮ, ದ್ರೋಣಾದಿಗಳಿಗೂ ಸ್ನೇಹಪೂರ್ವಕ ಉಡುಗೊರೆಗಳನ್ನು ನೀಡಿ ಪಾಂಡವರ ಜೊತೆ ಕಳುಹಿಸಿದನು. ಸ್ವತಃ ತಾನೂ, ದೃಷ್ಟದ್ಯುಮ್ನ ಹಾಗೂ ಶ್ರೀಕೃಷ್ಣನೊಂದಿಗೆ ತುಸುದೂರ ಮಗಳು ಮತ್ತು ಅಳಿಯಂದಿರನ್ನು ಬೀಳ್ಗೊಡಲು ಜೊತೆಯಾಗಿ ಬಂದರು. ಧೌಮ್ಯರು ಹಸ್ತಿನೆಯ ಪುರಪ್ರವೇಶಕ್ಕೆ ನಿಗದಿ ಪಡಿಸಿದ ಮುಹೂರ್ತ ಸಮಯವನ್ನು ಮತ್ತೊಮ್ಮೆ ನೆನಪಿಸಿ ಧರ್ಮರಾಯನಿಗೆ ವಿವರಿಸಿ ಹೇಳಿದರು. ಸ್ವಲ್ಪ ದೂರದವರೆಗೆ ಬಂದ ದ್ರುಪದಾದಿಗಳು ಶುಭ ಹಾರೈಸಿ ಹಿಂದಿರುಗಿ ಹೋದರು. ಶ್ರೀಕೃಷ್ಣ ಮಾತ್ರ ಮತ್ತೂ ಪಾಂಡವರ ಜೊತೆಯಿದ್ದು ಗಂಗಾ ತೀರದವರೆಗೂ ಬಂದನು. ಭವಿಷ್ಯದಲ್ಲಿ ಸಂಭವನೀಯ ರಾಜತಾಂತ್ರಿಕ ವಿಚಾರಗಳನ್ನು ತರ್ಕಿಸುತ್ತಾ ಜಾಗೃತೆಯಿಂದ ವ್ಯವಹರಿಸುವಂತೆ ಹಿತೈಷಿಯಾಗಿ ಹೇಳುತ್ತಾ ಎಚ್ಚರಿಸಿ ಜಾಗರೂಕತೆಯಿಂದಿರಲು ಹೇಳಿದನು. ಅತ್ತೆ ಕುಂತಿದೇವಿ, ದ್ರೌಪದಿ ಮತ್ತು ಪಾಂಡವರಿಗೆ ಶುಭ ಹಾರೈಸಿ ದ್ವಾರಕೆಯತ್ತ ನಿರ್ಗಮಿಸಿದನು.
ವಿದುರನ ಜೊತೆ ಹಸ್ತಿನಾವತಿಯ ನಗರದ ಹೊರಭಾಗ ತಲುಪಿದ ಪಾಂಡವರು ಧೌಮ್ಯರ ನಿರ್ದೇಶನದ ಸುಮುಹೂರ್ತದ ಶುಭಕಾಲಕ್ಕಾಗಿ ಕಾಯುತ್ತಿದ್ದರು. ಪಾಂಡವರ ಆಗಮನದ ವರ್ತಮಾನ ತಿಳಿದು ಭೀಷ್ಮಾಚಾರ್ಯರು ಭವ್ಯ ಸ್ವಾಗತಕ್ಕೆ ವ್ಯವಸ್ಥೆ ಮಾಡಿಸಿದರು. ಧೃತರಾಷ್ಟ್ರ, ಕೌರವರೂ, ದ್ರೋಣ- ಕೃಪಾಚಾರ್ಯ ಆದಿ ಪ್ರಮುಖರೂ ಸೇರಿ ಪುರದ ದ್ವಾರ ತಲುಪಿದರು. ಸುಮುಹೂರ್ತದಲ್ಲಿ ಪುರಪ್ರವೇಶ ಮಾಡಿದರು ಪಾಂಡವ ಸೋದರರು. ಪ್ರಜಾಜನರಿಗಂತೂ ಹಬ್ಬದ ಸಂಭ್ರಮ. ಹಸ್ತಿನಾವತಿಯ ಅರಮನೆಯಲ್ಲೂ ಸಂತೋಷವೇ ತುಂಬಿತು. ಕೌರವರು, ಶಕುನಿಯೂ ತೋರಿಕೆಗೆ ಬಹಳಷ್ಟು ಸಂಭ್ರಮಿಸಿ ಪಾಂಡವರನ್ನು ಸ್ವಾಗತಿಸಿ ಕರೆತಂದರು. ಪಾಂಡವರಿಗಾಗಿ ಅವರು ಮೊದಲು ವಾಸಿಸುತ್ತಿದ್ದ ಅರಮನೆಯನ್ನು ತೆರವುಮಾಡಿ ಸುವ್ಯವಸ್ಥೆಗೊಳಿಸಿ ನಿವಾಸವಾಗಿ ನೀಡಿದರು. ಹೀಗೆ ಪಾಂಡವರು ಗೌರವಯುತವಾಗಿ ಪುರಪ್ರವೇಶ ಮಾಡಿ ತಮ್ಮ ಅರಮನೆಯಲ್ಲಿ ವಿಶ್ರಾಂತರಾಗಿದ್ದರು. ಕುಂತಿ ಮಾತ್ರ “ಶ್ರೀ ಕೃಷ್ಣ ನಮ್ಮನ್ನು ನೀನೇ ಕಾಪಾಡಬೇಕು. ಸಂಬಂಧದಲ್ಲಿ ನನಗೆ ಅಳಿಯನಾದರೂ ಲೋಕವೇ ನಿನ್ನನ್ನು ದೇವರೆಂದು ಭಕ್ತಿಯಿಂದ ಪೂಜಿಸುತ್ತಿದೆ. ನಮ್ಮನ್ನು ಅಳಿಸುವ ಪ್ರಯತ್ನಗಳಾಗಬಹುದು, ಆದರೂ ಅಳಿಯದಂತೆ ಇಲ್ಲಿ ಉಳಿಯುವಂತೆ ಒಲಿದು ಬೆಳೆಸು ದೇವಾ” ಎಂದು ಬೇಡುತ್ತಿದ್ದಳು.
ಇತ್ತ ಎದುರಿಗೆ ಎಲ್ಲವೂ ಸರಿಯಾಗಿಯೇ ಇದೆ ಎಂಬಂತೆ ಕೌರವರೂ, ಶಕುನಿಯೂ ಪಾಂಡವರೊಂದಿಗೆ ವಿನಯಪೂರ್ವಕವಾಗಿ ವ್ಯವಹರಿಸುತ್ತಿದ್ದಾರೆ. ತಮ್ಮ ಮನದೊಳಗೆ ಪಾಂಡವರ ಏಳಿಗೆಯನ್ನು ಕಂಡು ಉರಿಯುತ್ತಿರುವ ಈ ಬಳಗ ಮಹತ್ತರವಾದ ಯೋಜನೆಯೊಂದನ್ನು ಸಿದ್ದಪಡಿಸುತ್ತಿದೆ. ಧೃತರಾಷ್ಟ್ರನ ಮೂಲಕ ಅನುಷ್ಠಾನಗೊಳಿಸುವ ಯೋಚನೆಯಿಂದ ಪ್ರತ್ಯೇಕವಾಗಿ ಮಹಾರಾಜನನ್ನು ಏಕಾಂತದಲ್ಲಿ ಸಂಧಿಸಿ ಸಭೆಸೇರಿದರು.
ಮುಂದುವರಿಯುವುದು…
✍🏻ಭರತೇಶ್ ಶೆಟ್ಟಿ ಎಕ್ಕಾರ್






















































