ಭಾಗ 115
ಭರತೇಶ್ ಶೆಟ್ಟಿ,ಎಕ್ಕಾರ್

ಸಂಚಿಕೆ ೧೧೫ ಮಹಾಭಾರತ
ಧರ್ಮದ ಪ್ರತಿರೂಪದಂತಿರುವ ಧರ್ಮರಾಯ, ನಿಮಗೆ ಮಾತೃವಾಕ್ಯ ಪರಿಪಾಲನೆ ಧರ್ಮವೇ ಸರಿ. ಆದರೆ ವಧುವಿನ ಪಿತನಾಗಿ, ಧರ್ಮದ ಬಗ್ಗೆ ವಿವೇಚಿಸಿದರೆ ಆಕೆಗೆ ಪತಿವ್ರತಾ ಧರ್ಮ ಪಾಲನೆಯಿದೆ. ಪತಿಯಲ್ಲದ ಇನ್ನೋರ್ವ ಪುರುಷನ ಜೊತೆ ಸಂಬಂಧ, ಕಲ್ಪನೆ ಅಧರ್ಮವೆನಿಸುತ್ತದೆ. ಬಹು ಪುರುಷರ ಜೊತೆ ವಿವಾಹವೂ ಧರ್ಮ ಸಮ್ಮತವಲ್ಲ. ಹೀಗಿರಲು ನಿಮ್ಮ ನಿರ್ಣಯ ದ್ರೌಪದಿಯ ಪರವಾಗಿ ಯೋಚಿಸಿದರೆ ಧರ್ಮಬಾಹಿರವಾಗುವುದಿಲ್ಲವೇ?
ದ್ರುಪದನ ಧರ್ಮಾಧರ್ಮದ ಜಿಜ್ಞಾಸೆ ಕೇಳಿ ಅರ್ಜುನ ಅಣ್ಣ ಧರ್ಮಜನ ಮುಖ ನೋಡಿ ಉತ್ತರಿಸಲು ಅನುಮತಿ ಪಡೆದನು. ಅರ್ಜುನ ಉತ್ತರಿಸಲು ಸಮರ್ಥನೇ ಹೌದು ಯಾಕೆಂದರೆ ಪಣ ಗೆದ್ದವನು. ಮಾತ್ರವಲ್ಲ ಆತನ ಟಹುಟ್ಟಿನ ಜನ್ಮ ರಹಸ್ಯವೂ ಪೂರಕವಾಗಿಯೇ ಇದೆ. ಧರ್ಮರಾಯನ ಹುಟ್ಟು ಕುಂತಿಗೆ ಧರ್ಮಿಷ್ಠನಾದ ಮಗ ಬೇಕೆಂಬ ಬಯಕೆಯಂತೆ ಯಮಧರ್ಮನ ಅನುಗ್ರಹದಿಂದಾಗಿತ್ತು. ಧರ್ಮದ ರಕ್ಷಣೆಗೆ ಬಲ ಬೇಕೆಂದು ವಾಯುವಿನ ಮುಖೇನ ಭೀಮನ ಜನನಕ್ಕೆ ಕಾರಣವಾಗಿತ್ತು. ಧರ್ಮ ಒಬ್ಬನಲ್ಲಿ ಬಲ ಇನ್ನೊಬ್ಬನಲ್ಲಿ ಎಂದಾದರೆ ಸಮತೋಲನ ಕಷ್ಟ ಎಂಬ ಭಾವ ಮೂಡಿದಾಗ, ಸಮಪ್ರಮಾಣದಲ್ಲಿ ಧರ್ಮ ಜ್ಞಾನವೂ, ದೈಹಿಕ ಬಲಾಢ್ಯತೆಯೂ ಸಮ್ಮಿಳಿತವಾದ ಓರ್ವ ಪುತ್ರ ಬೇಕೆಂಬ ಮಾತೆ ಕುಂತಿಯ ಇಚ್ಚೆಯಂತೆ ದೇವೇಂದ್ರನ ಅನುಗ್ರಹದಿಂದ ಹುಟ್ಟು ಪಡೆದವನೇ ಅರ್ಜುನ. ಹಾಗಾಗಿ ಅರ್ಜುನ ಪರಾಕ್ರಮದಷ್ಟೇ ಪ್ರಮಾಣದಲ್ಲಿ ಧರ್ಮಪಾಲಕನೂ ಹೌದು. ದ್ರುಪದನ ಪ್ರಶ್ನೆಗೆ ಉತ್ತರಿಸತೊಡಗಿದ. “ಅಯ್ಯಾ ಮಹಾರಾಜ, ನಿನಗೆ ಮಗಳು ಬೇಕೆಂಬ ಬಯಕೆ ಮೂಡಿದ್ದು ನನ್ನನ್ನು ನೀನು ಸರ್ವ ವಿಧದಿಂದಲೂ ಮೆಚ್ಚಿ ಒಪ್ಪಿ ಅಭಿಮಾನಿಯಾದ ಕಾರಣದಿಂದ. ಹಾಗಿದ್ದ ಪಕ್ಷದಲ್ಲಿ ನನ್ನನ್ನು ಮೆಚ್ಚಿ ಮೂಡಿದ ಅಭಿಮಾನ, ವಿವಾಹ ವಿಚಾರದಲ್ಲಿ ನನ್ನ ತೀರ್ಮಾನವನ್ನು ಮೆಚ್ಚದಂತೆ ತಡೆದಿರುವುದು ವಿಪರ್ಯಾಸ. ಹಾಗಿದ್ದರೂ, ನಿಮ್ಮ ಜಿಜ್ಞಾಸೆಗೆ ಪರಿಹಾರವಾಗಿ ನಿದರ್ಶನಗಳನ್ನು ಆದರ್ಶವಾಗಿ ಹೇಳುವೆ. ಹಿಂದೆ ಪ್ರಚೇತಸರೆಂಬ ಹತ್ತು ಮಂದಿ ಮಹರ್ಷಿಗಳು ವೃಕ್ಷ ಕನ್ಯೆ ‘ಮಾರೀಷೆ’ ಎಂಬ ಓರ್ವಳನ್ನೇ ವರಿಸಿರಲಿಲ್ಲವೇ? ಆಕೆ ಪತಿವ್ರತೆಯಾಗಿ ಬದುಕಿ ದಕ್ಷ ಪ್ರಜಾಪತಿ, ಮಹರ್ಷಿ ವಾಲ್ಮೀಕಿಯವರನ್ನು ಮಗನಾಗಿ ಪಡೆದಿದ್ದಾರಲ್ಲವೇ? ನಿಮಗೆ ಸಂದೇಹ ಪರಿಹಾರವಾಗದಿದ್ದರೆ ಇನ್ನೂ ಒಂದು ಪ್ರಕರಣ ನೆನಪಿಸುವೆ. ‘ಜಟಿಲೆ’ ಎಂಬಾಕೆ ಓರ್ವಳೇ ಸಪ್ತ ಮಹರ್ಷಿಗಳಿಗೆ ಧರ್ಮ ಪತ್ನಿಯಾಗಿ ಕುಲ, ಶೀಲ, ಮಾನವಂತಳಾಗಿ ಬದುಕಿಲ್ಲವೇ? ಈ ವಿವಾಹಗಳು ಮಾನ್ಯತೆಯನ್ನು ಪಡೆದು ಧರ್ಮ ಸಮ್ಮತವಾಗಿ ಉಳಿದಿದೆ ಎಂದಾದ ಮೇಲೆ ನಮ್ಮ ಕೇಳಿಕೆಯೂ ಅಧರ್ಮವಾಗದು. ನೀವು ಯಾವುದೇ ರೀತಿಯ ಗೊಂದಲಕ್ಕೆ ಒಳಗಾಗದೆ ಮುಂದುವರಿಯಬಹುದು” ಹೀಗೆ ಅರ್ಜುನ ಸಮರ್ಥವಾದ ಸಮರ್ಥನೆಯನ್ನು ನೀಡಿದ.
ಪೂರ್ತಿ ಕೇಳಿಸಿಕೊಂಡ ದ್ರುಪದ, “ಅರ್ಜುನಾ, ನಿನ್ನ ಮಾತು ಸತ್ಯವೇ ಹೌದು. ಆದರೂ ಆ ಯುಗದಲ್ಲಿ ಧರ್ಮ, ಆಚಾರ ಈಗಿನಷ್ಟು ಕಟ್ಟು ನಿಟ್ಟು ಆಗಿರಲಿಲ್ಲ. ಈಗಿನ ಕಾಲಕ್ಕೆ ಈ ರೀತಿಯ ಸಂಬಂಧ ಶಾಸ್ತ್ರ ಸಮ್ಮತವಾಗದುಬ ಗೊಂದಲವಿದೆ” ಎಂದನು.
ದ್ರುಪದನ ಮಾತು ಕೇಳಿದ ಭೀಮಸೇನ ಸಮಸ್ಯೆಯ ಪರಿಹಾರಕ್ಕೆ ಮುಂದಾದನು ಶಾಸ್ತ್ರಕ್ಕಿಂತಲೂ ರೂಢಿಯೇ ಕೆಲವೊಮ್ಮೆ ಪ್ರಧಾನವಾಗುತ್ತದೆ. ವರ್ತಮಾನ ಕಾಲದ ಅನುಸರಣೆಯನ್ನೇ ಉದಾಹರಣೆಯಾಗಿ ಪ್ರಸ್ತಾಪಿಸತೊಡಗಿದನು. “ನಾವು ಜನ್ಮ ತಳೆದ ಪ್ರದೇಶ ಶತ ಶೃಂಗಾದ್ರಿ. ಅಲ್ಲಿ ವರ್ಣೋತ್ತಮರು ಆಶ್ರಮವಾಸಿಗಳಾಗಿದ್ದಾರೆ. ಅಗ್ನಿಹೋತ್ರ ಅವರಿಗೆ ಉಚಿತ ಧರ್ಮ. ಹಾಗೆಂದು ಅಗ್ನಿಹೋತ್ರಿಯಾಗಬೇಕಾದರೆ ವಿವಾಹವಾಗಿರಬೇಕಾದುದು ಅನಿವಾರ್ಯ. ಆಶ್ರಮ ಧರ್ಮದಂತೆ ಅಗ್ನಿಹೋತ್ರಿಯಾಗಬೇಕಾದ ಸಂಪ್ರದಾಯ ಪಾಲನೆ ಅನಿವಾರ್ಯವಾಗಿ ಅಣ್ಣತಮ್ಮಂದಿರು ಒಬ್ಬಳೇ ಸ್ತ್ರೀಯನ್ನು ಮದುವೆಯಾಗಿದ್ದಾರೆ. ನಾವು ಹುಟ್ಟಿದ ಪ್ರದೇಶದ ಆಚಾರ ನಮಗೆ ನಿಷಿದ್ಧವಾಗದೆ ಅನುಕರಣೀಯ ವೆಂದು ಪರಿಗಣಿಸಬಹುದು” ಎಂದನು.
ಈ ಉತ್ತರಕ್ಕೂ ತೃಪ್ತನಾಗದ ದ್ರುಪದ “ಭೀಮಸೇನ ನೀನು ಹೇಳಿರುವಂತಹ ಮದುವೆ ಆಗಿರುವುದು ಕಾಡಿನಲ್ಲಿ. ವಿವಾಹ ಯೋಗ್ಯ ಕನ್ಯೆ ಸಿಗುತ್ತಿಲ್ಲ ಎಂಬ ಕೊರತೆಯ ಕಾರಣದಿಂದ. ಅಗ್ನಿಹೋತ್ರಿಯಾಗುವ ಅರ್ಹತೆ ಪಡೆಯುವ ಉದ್ದೇಶದಿಂದ ಅವರು ಹಾಗೆ ಮಾಡಿರಬಹುದು. ಹಾಗೆಂದು ದ್ರೌಪದಿಯ ವಿವಾಹ ಬಹುಸಂಖ್ಯೆಯ ನಾಗರಿಕರ ಮುಂದೆ, ಸ್ಪಷ್ಟ ಉದ್ದೇಶದಿಂದ ನಡೆಯುತ್ತಿರುವುದರಿಂದ ಇನ್ನೂ ನನಗೆ ಸಂದೇಹ ಉಳಿದಿದೆ.”
ನಕುಲನೂ ಬಹುಹೊತ್ತಿನಿಂದ ಯೋಚಿಸಿ ತನ್ನ ಅಭಿಪ್ರಾಯ ಪ್ರಕಟಿಸತೊಡಗಿದ- “ಮಹಾರಾಜಾ, ನಿನ್ನ ಮನದಲ್ಲಿ ನಮ್ಮನ್ನು ನಿಮ್ಮ ಮಗಳು ವರಿಸಿದರೆ ಅಪಕೀರ್ತಿ ಬರುವುದೆಂಬ ಭಯವಿದ್ದಂತೆ ಕಾಣುತ್ತಿದೆ. ನಮಗೂ ಕುಲ, ಶೀಲ, ಗುಣ, ಮಾನಗಳೆಲ್ಲವೂ ಇದೆ. ಹಸ್ತಿನೆಯ ಚಂದ್ರವಂಶದ ಚಕ್ರವರ್ತಿಯ ಮಕ್ಕಳಾದ ನಮ್ಮನ್ನು ವರಿಸುವುದರಿಂದ ಮಾನ್ಯತೆಯ ವಂಶದ ಸಂಬಂಧವಾದಂತಾಗುತ್ತದೆ. ಇದರಿಂದ ಸತ್ಕೀರ್ತಿಯೇ ಪ್ರಾಪ್ತಿಯಾಗುತ್ತದೆ. ಯಾವುದೇ ರೀತಿಯ ಗೊಂದಲ ಬೇಡ ಎಂದನು.
ದ್ರುಪದನಿಗೆ ಸಮಂಜಸವಾದ ಪರಿಹಾರ ಸಿಗಲಿಲ್ಲ. ನಕುಲಾ ನಿಮ್ಮ ವಂಶ ಮಹತ್ತರವಾದದ್ದೇ ಹೌದು. ಆದರೆ ಈಗ ಉದ್ಭವಿಸಿರುವುದು ಅದರ ಕುರಿತಲ್ಲ, ಬದಲಾಗಿ ಸ್ತ್ರೀ ಗೆ ಬಹು ಪತಿತ್ವ ಧರ್ಮ ಸಮ್ಮತವೇ ಎಂಬ ಸಂದೇಹದ ಸಮಸ್ಯೆ. ಹಾಗೂ ಧರ್ಮ ಪಾಲನೆಗೆ ಈ ನಡೆ ಪೂರಕವೇ ಎಂಬ ಜಿಜ್ಞಾಸೆಗೆ ಉತ್ತರ ಬೇಕಾಗಿದೆ” ಎಂದನು.
ಸಹದೇವ ಆರಂಭಿಸಿದ. “ನಮ್ಮ ನಿರ್ಧಾರ ಧರ್ಮವೇ ಆಗಿದೆ ಎಂದನು. ಯೋಚಿಸಿ ನೋಡು ಮಹಾರಾಜ ನಿನ್ನ ಅಪೇಕ್ಷೆಯಂತೆ ಪಣ ಗೆದ್ದವರಿಗೆ ಮಗಳ ಜೊತೆ ವಿವಾಹ. ಒಂದೊಮ್ಮೆಗೆ ಯಾರೋ ಒಬ್ಬ ಲಕ್ಷ್ಯ ಭೇದಿಸಿದ್ದರೆ ನಿನ್ನ ಆಶಯ ಪೂರ್ಣವಾಗುತ್ತಿತ್ತೇ? ಆತನ ಜೊತೆ ದ್ರೌಪದಿ ಮದುವೆಯಾಗಬೇಕಿತ್ತು. ಅದೃಷ್ಟವಶಾತ್ ಅಣ್ಣ ಅರ್ಜುನ ಪಣಗೆದ್ದು ವರಣ ಮಾಲಿಕೆ ಧರಿಸಲ್ಪಟ್ಟು, ಕರಗ್ರಹಣ ಮಾಡಿ ದ್ರೌಪದಿಯನ್ನು ಕರೆದೊಯ್ಯುವಾಗ ನೀವು ಯಾರೂ ಆಕ್ಷೇಪಿಸಲಿಲ್ಲ. ಆ ಬಳಿಕ ನಮ್ಮ ಅಮ್ಮನ ಆದೇಶದಂತೆ ಗೆದ್ದು ಬಂದ ಅಣ್ಣ ಅರ್ಜುನ, ದ್ರೌಪದಿ ನಮಗೈವರಿಗೂ ಪತ್ನಿಯಾಗಲಿ ಎಂದಾಗ ದ್ರೌಪದಿ ನಮ್ಮೆಲ್ಲರನ್ನೂ ಶಿರವೆತ್ತಿ ನೋಡಿದಳು. ನಾವೂ ನೋಡಿದೆವು. ಆಕೆ ಆಕ್ಷೇಪಿಸದೇ ಉಳಿದ ಕಾರಣ ಮೌನವೇ ಸಮ್ಮತಿಯಾಗಿ ಅಂಗೀಕಾರಗೊಂಡಿದೆ. ಆಕೆ ನಾವೈವರಲ್ಲಿಯೂ, ನಾವು ಆಕೆಯಲ್ಲಿಯೂ ಅನುರಕ್ತರಾದ ಮೇಲೆ ಈ ಸಂಬಂಧ ವಿಹಿತವೇ. ಪ್ರೌಢ ಹೆಣ್ಣು ಮೆಚ್ಚಿ ಒಪ್ಪಿದ ಬಳಿಕ ಆಕೆಗೆ ಇಷ್ಟದಂತೆ ವಿವಾಹ ಮಾಡಿಸಿದರೆ ಪಿತನ ಪಾಲಿಗೆ ಅದು ಧರ್ಮವೇ ಆಗುತ್ತದೆ. ಒಪ್ಪಿದ ಕನ್ಯೆಯ ಕೈ ಹಿಡಿಯುವುದು ಕ್ಷತ್ರಿಯರಾದ ನಮಗೂ ಧರ್ಮವೇ ಆಗಿದೆ. ಹಾಗಾಗಿ ಅನ್ಯಥಾ ಭಾವಿಸದೇ ನಮಗೈವರಿಗೆ ಸಂತೋಷದಿಂದ ವಿವಾಹ ಮಾಡಿಸಬಹುದು” ಎಂದುತ್ತರಿಸಿದನು.
ದ್ರುಪದರಾಜ ಯೋಚನೆಯಲ್ಲಿ ತೊಡಗಿದ. “ದ್ರೌಪದಿ ಆಕ್ಷೇಪಿಸಲಿಲ್ಲ ಎಂಬ ಕಾರಣ ಮೌನವೇ ಸಮ್ಮತಿ ಎಂಬ ಉತ್ತರ ಸಾಧುವಲ್ಲ. ನೀವೆಲ್ಲಾ ಆ ಹೊತ್ತು ಅಪರಿಚಿತರಾಗಿದ್ದು, ಏನು ಮಾಡುವುದು? ಒಪ್ಪುವುದೇ ಬಿಡುವುದೇ? ಆಕ್ಷೇಪಿಸಲು ನನಗೆ ಅಧಿಕಾರ ಇದೆಯೇ? ಪಣ ಗೆದ್ದು ತಂದ ವಿಜೇತನ ತೀರ್ಮಾನಕ್ಕೆ ನಾನು ಬದ್ದಳಾಗಬೇಕೇ? ಎಂಬಿತ್ಯಾದಿ ಯೋಚನೆ ಆಕೆಯನ್ನು ಮೌನಿಯಾಗಿ ನಿಲ್ಲಿಸಿರಬಹುದು. ಹಾಗಾಗಿ ಆ ಮೌನವನ್ನು ಒಪ್ಪಿ ಆಕ್ಷೇಪಿಸಲಿಲ್ಲ, ನಿಮ್ಮ ಮುಖಾವಲೋಕನ ಮಾಡಿದ್ದಾಳೆ, ನೀವೂ ನೋಡಿದ್ದೀರಿ ಎಂಬಿತ್ಯಾದಿ ವಾದ ಸಕಾರಣವಾಗಿ ತೋರುತ್ತಿಲ್ಲ” ಎಂದನು.
ಹೀಗೆ ವಾದ ಪ್ರತಿವಾದಗಳು ಸಾಗುತ್ತಿರುವಾಗ ಎಲ್ಲವನ್ನೂ ಕೂಲಂಕುಷವಾಗಿ ವಿಮರ್ಶಿಸಿದ ಧರ್ಮರಾಯ ದ್ರುಪದನ ದುಗುಡ ನಿವಾರಣೆಗೆ ಮುಂದಾದನು. “ದ್ರುಪದ ಮಹಾರಾಜ ನಿಮ್ಮನ್ನು ವಯೋವೃದ್ದರೆಂದು ಹೇಳಿರುವಿರಿ. ನೀವು ಜ್ಞಾನವೃದ್ದರೂ ಹೌದು. ಸುಜ್ಞಾನಿಯಾದ ನಿಮಗೆ ಸ್ಫುಟವಾಗಿ ಧರ್ಮಪಾಲನೆಯನ್ನು ವಿವರಿಸುವೆ. ಕುಲಗೋತ್ರಗಳು ಹೆಣ್ಣಾದವಳಿಗೆ ಮದುವೆಯಾದ ಬಳಿಕ ಗಂಡನದ್ದೇ ಆಗಿ ಬದಲಾಗುತ್ತದೆ. ಇಲ್ಲಿ ಕುಲಗೋತ್ರದ ಜೊತೆಗೆ ಧರ್ಮವೂ ಗಂಡನದ್ದೇ ಅನುಸರಿಸುವ ಕರ್ತವ್ಯ ವಿಧಿತವಾಗುತ್ತದೆ. ಹೀಗೆ ಗಂಡನ ಧರ್ಮವನ್ನೂ ಅನುಸರಿಸುವ ಕಾರಣ ಪತ್ನಿಯಾದವಳು ಸಹಧರ್ಮಿಣಿಯಾಗುತ್ತಾಳೆ. ಹಾಗಾಗಿ ಸಹಧರ್ಮಚಾರಿಣಿಗೆ ಗಂಡನ ಧರ್ಮವೇ ಧರ್ಮವಾಗುತ್ತದೆಯೇ ಹೊರತು ತನ್ನ ವಿವಾಹ ಪೂರ್ವದ ಆಚಾರವಲ್ಲ. ನಿಮ್ಮ ಸಂಕಲ್ಪದಂತೆ ಅರ್ಜುನ ಪಣ ಗೆದ್ದು ದ್ರೌಪದಿಯ ಕರಗ್ರಹಣ ಮಾಡಿದಲ್ಲಿಗೆ ನಿಮ್ಮ ಸಂಕಲ್ಪ ಈಡೇರಿದೆ. ನಂತರದ ಬೆಳವಣಿಗೆಯಲ್ಲಿ ತಾಯಿಯ ಆಜ್ಞಾವಾಕ್ಯ ಪಾಲನೆಯನ್ನು ಧರ್ಮವಾಗಿ ಅರ್ಜುನ ಒಪ್ಪಿದಾಗ ಅದೇ ದ್ರೌಪದಿಗೆ ಸಹಧರ್ಮವಾಗುತ್ತದೆ. ಹೀಗೆ ಸಹಧರ್ಮಿಣಿಯಾಗಿ ಆಕೆ ನಮ್ಮೈವರಿಗೂ ಪತ್ನಿಯಾಗಲೇ ಬೇಕಾಗಿ ಬರುತ್ತದೆ. ಈ ರೀತಿಯ ಆಚಾರ ಅಧರ್ಮವಾಗದೇ ಧರ್ಮವೇ ಆಗುವ ಕಾರಣ ಸಂಶಯ ಬೇಡ” ಎಂದನು.
ದ್ರುಪದನಿಗೆ ಧರ್ಮರಾಯನ ಮಾತನ್ನು ಖಂಡಿಸುವ ದಾರಿ ಕಾಣದೆ ಸಮುದ್ರ ಮಧ್ಯೆ ದಡ ಕಾಣದೆ ಎತ್ತ ಹೋಗಬೇಕೆಂದು ಅರಿಯದಂತಾಯಿತು. ತೊಳಲಾಟಕ್ಕೆ ಸಿಲುಕಿ ಒದ್ದಾಟದ ಸುಳಿಗೆ ಸಿಕ್ಕಾಗ ಅಲ್ಲಿ ಭಗವಾನ್ ವೇದವ್ಯಾಸರ ಪ್ರತ್ಯಕ್ಷರಾದರು.
ಮುಂದುವರಿಯುವುದು…