
ನವದೆಹಲಿ: ಚೀನಾದಲ್ಲಿ ಹ್ಯೂಮನ್ ಮೆಟಾನ್ಯೂಮೋ ಎಂಬ ವೈರಸ್ ಸ್ಫೋಟಗೊಂಡಿದ್ದು ಇದೀಗ ಮಲೇಷಿಯಾದಲ್ಲಿ HMPV ವೈರಸ್ ಭೀತಿ ಎದುರಾಗಿದೆ. ಹೀಗಾಗಿ ಮಲೆಷಿಯಾದಲ್ಲಿ ಆರೋಗ್ಯ ಮಾರ್ಗಸೂಚಿ ಪ್ರಕಟಿಸಿದ ಬೆನ್ನಲ್ಲೇ ದೆಹಲಿ ಆರೋಗ್ಯ ಇಲಾಖೆ ಮುನ್ನೆಚ್ಚರಿಕಾ ಕ್ರಮವಾಗಿ ಮಾರ್ಗಸೂಚಿ ಹೊರಡಿಸಿದೆ.
ಸರ್ಕಾರಿ ಅಧಿಕೃತ ಮಾಹಿತಿಗಳ ಪ್ರಕಾರ ಮಲೆಷಿಯಾದಲ್ಲಿ 2024 ಹಾಗೂ 2025ರ ಆರಂಭಿಕ ದಿನಗಳಲ್ಲಿ ಒಟ್ಟು 327 HMPV ವೈರಸ್ ಪ್ರಕರಣ ಪತ್ತೆಯಾಗಿದ್ದು 2023ರಲ್ಲಿ 225 ಪ್ರಕರಣ ವರದಿಯಾಗಿತ್ತು. ಚೀನಾ ಹಾಗೂ ಮಲೆಷಿಯಾದಲ್ಲಿ ವೈರಸ್ ಭೀತಿ ಹೆಚ್ಚಾಗುತ್ತಿರುವ ಹಿನ್ನಲೆಯಲ್ಲಿ ಭಾರತದಲ್ಲಿ ವೈರಸ್ ಮೆಲೆ ನಿಗಾ ಇಡಲು ಆರೋಗ್ಯ ಇಲಾಖೆ ಮುಂದಾಗಿದೆ.
- ಶೀತ, ಜ್ವರ, ಕೆಮ್ಮು, ಉಸಿರಾಟ ಸಮಸ್ಯೆ ಸೇರಿದಂತೆ HMPV ವೈರಸ್ ಗುಣಲಕ್ಷಣಗಳಾಗಿದ್ದು ಇಂತಹ ಲಕ್ಷಣಗಳು ಕಂಡುಬಂದರೆ ತಕ್ಷಣವೇ IHIP ಪೋರ್ಟಲ್‌ನಲ್ಲಿ ಮಾಹಿತಿ ನೀಡಲು ಸೂಚಿಸಲಾಗಿದೆ.
- ಜನರು ಕೋವಿಡ್ ಸಂದರ್ಭದಲ್ಲಿ ಪಾಲಿಸಿರುವ ಮಾರ್ಗಸೂಚಿ ಪಾಲಿಸಲು ಸೂಚಿಸಲಾಗಿದೆ.
- ಕೈಗಳನ್ನು ಶುಚಿಯಾಗಿಡುವುದು, ಹೆಚ್ಚು ಜನಸಂದಣಿಯಿಂದ ದೂರವಿರುವುದು, ಅನಗತ್ಯ ಓಡಾಡಕ್ಕೆ ಕಡಿವಾಣ ಹಾಕಲು ಸೂಚಿಸಲಾಗಿದೆ.
- ವೈರಸ್ ಹರಡದಂತೆ ಹಾಗೂ ಬರದಂತೆ ಎಚ್ಚರ ವಹಿಸಲು ಸೂಚಿಸಲಾಗಿದೆ.
- ಚಿಕ್ಕಮಕ್ಕಳು, ರೋಗ ನಿರೋಧಕ ಶಕ್ತಿ ಕಳೆದುಕೊಂಡವರು, ಹಿರಿಯರ ಮೇಲೆ ಬಹುಬೇಗ HMPV ವೈರಸ್ ದಾಳಿಯಾಗುವ ಸಾಧ್ಯತೆಯಿದ್ದು ಹೀಗಾಗಿ ಈ ವರ್ಗದವರು ಹೆಚ್ಚು ಕಾಳಜಿ ವಹಿಸಲು ಸೂಚಿಸಲಾಗಿದೆ.
ದೆಹಲಿ ಆರೋಗ್ಯ ಇಲಾಖೆ ಡೈರೆಕ್ಟರ್ ಡಾ.ವಂದನಾ ಬಗ್ಗಾ ಅಧಿಕಾರಿಗಳ ಜೊತೆ ಮಹತ್ವದ ಸಭೆ ನಡೆಸಿ ಸಂಪೂರ್ಣ ದೆಹಲಿಯಲ್ಲಿ ಸೂಕ್ಷ್ಮವಾಗಿ HMPV ವೈರಸ್ ಮೆಲೆ ನಿಗಾ ಇಡಲು ಸೂಚಿಸಿದ್ದಾರೆ. ಸದ್ಯ ದೆಹಲಿ ಸೇರಿದಂತೆ ಭಾರತದಲ್ಲಿ ಯಾವುದೇ HMPV ವೈರಸ್ ಪತ್ತೆಯಾಗಿಲ್ಲ. ಆದರೆ ಚೀನಾದಲ್ಲಿ ವೈರಸ್ ಸ್ಫೋಟಗೊಂಡಿರುವ ಕಾರಣ, ಭಾರತ ಮುಂಜಾಗ್ರತಾ ಕ್ರಮಗಳನ್ನು ಕೈಗೊಂಡಿದೆ.



