
ಕಲ್ಲಿಕೋಟೆ: ಸಮಕಾಲೀನ ಚಿತ್ರರಂಗದ ಸ್ಥಿತಿಗತಿಗಳ ಬಗ್ಗೆ ಬಹುಭಾಷಾ ನಟ ಪ್ರಕಾಶ್ ರಾಜ್ ಅವರು ಶನಿವಾರ ಕೇರಳ ಸಾಹಿತ್ಯೋತ್ಸವದಲ್ಲಿ ಮಾತನಾಡಿ ಪ್ರಸ್ತುತ ಮಲಯಾಳಂ ಮತ್ತು ತಮಿಳು ಚಿತ್ರರಂಗಗಳು ಗುಣಮಟ್ಟದ ಹಾಗೂ ಶಕ್ತಿಶಾಲಿ ಚಿತ್ರಗಳನ್ನು ನೀಡುತ್ತಿವೆ, ಹಿಂದಿ ಚಿತ್ರರಂಗ ಕಾಣಲು ಆಕರ್ಷಕವಾಗಿದ್ದರೂ ತನ್ನ ಮೂಲ ಸತ್ವವನ್ನು ಕಳೆದುಕೊಂಡಿದೆ ಎಂದು ಟೀಕಿಸಿದರು.
ಬಾಲಿವುಡ್ ಸಿನಿಮಾಗಳು ಮೇಲ್ಮೈಯಲ್ಲಿ ಅತಿ ಸುಂದರವಾಗಿ ಕಾಣುತ್ತಿವೆ, ಆದರೆ ಅವುಗಳಲ್ಲಿ ಆಳ ಮತ್ತು ಭಾವನಾತ್ಮಕ ಶಕ್ತಿ ಕೊರತೆಯಾಗಿದೆ ಎಂದು ಹೇಳಿದ ಪ್ರಕಾಶ್ ರಾಜ್ ಹಿಂದಿ ಚಿತ್ರರಂಗವು ಹಣಕಾಸು, ಗ್ಲಾಮರ್ ಮತ್ತು ಸ್ವಯಂ ಪ್ರಚಾರದತ್ತ ಹೆಚ್ಚು ಒಲವು ತೋರಿದ್ದು, ತನ್ನ ಸಾಂಸ್ಕೃತಿಕ ಬೇರುಗಳಿಂದ ದೂರ ಸರಿದಂತಾಗಿದೆ ಎಂದು ಅವರು ಅಭಿಪ್ರಾಯಪಟ್ಟರು. ಮೇಡಮ್ ಟುಸ್ಸಾಡ್ಸ್ ವಸ್ತುಸಂಗ್ರಹಾಲಯದಂತೆಯೇ ಎಲ್ಲವೂ ಪ್ಲಾಸ್ಟಿಕ್ನಂತೆ ಕಾಣುತ್ತಿದೆ ಎಂಬ ಹೋಲಿಕೆಯನ್ನು ಅವರು ಬಳಸಿದರು.
ಇದೇ ವೇಳೆ ದಕ್ಷಿಣ ಭಾರತದಲ್ಲಿ ಹೇಳಲು ಇನ್ನೂ ಅನೇಕ ಗಟ್ಟಿ ಕಥೆಗಳಿವೆ. ತಮಿಳಿನ ಯುವ ನಿರ್ದೇಶಕರು ದಲಿತ ಸಮುದಾಯದ ಸಮಸ್ಯೆಗಳಂತಹ ಗಂಭೀರ ವಿಷಯಗಳನ್ನು ಕೈಗೆತ್ತಿಕೊಳ್ಳುತ್ತಿರುವುದು ಭರವಸೆಯನ್ನು ನೀಡುತ್ತದೆ. ಬಾಲಿವುಡ್ ಮಾತ್ರ ಗ್ಲಾಮರ್ ಮತ್ತು ಬಾಹ್ಯ ಆಕರ್ಷಣೆಗೆ ಸೀಮಿತವಾಗಿರುವುದರಿಂದ ಪ್ರೇಕ್ಷಕರೊಂದಿಗೆ ಅದರ ಭಾವನಾತ್ಮಕ ಸಂಪರ್ಕ ದುರ್ಬಲವಾಗಿದೆ ಎಂದರು.



















