
ಕರ್ನೂಲ್: ಹೆದರಾಬಾದ್ ಪೊಲೀಸ್ ಆಯುಕ್ತ ವಿ.ಸಿ. ಸಜ್ಜನರ ಕರ್ನೂಲ್ ನಲ್ಲಿ ನಡೆದ ಬಸ್ ದುರಂತದ ಕುರಿತು ತಮ್ಮ ಎಕ್ಸ್ ಖಾತೆಯಲ್ಲಿ ಪೋಸ್ಟ್ ಹಂಚಿಕೊಂಡಿದ್ದು ಮದ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದಕರು. ಅಂಥವರ ಮೇಲೆ ಕರುಣೆ ತೋರುವುದಿಲ್ಲ ಎಂದು ಕಟುವಾಗಿ ಹೇಳಿದ್ದಾರೆ.
ಮಧ್ಯಪಾನ ಮಾಡಿ ವಾಹನ ಚಲಾಯಿಸುವವರು ಭಯೋತ್ಪಾದಕರು ಮತ್ತು ಅವರ ಕೃತ್ಯಗಳು ಭಯೋತ್ಪಾದನಾ ಕೃತ್ಯಗಳಿಗಿಂತ ಕಡಿಮೆ ಇಲ್ಲ. 20 ಅಮಾಯಕರ ಪ್ರಾಣ ಹಾನಿಯಾದ ಕರ್ನೂಲ್ ಬಸ್ ದುರಂತ ನಿಜವಾದ ಅರ್ಥದಲ್ಲಿ ಅಪಘಾತವಲ್ಲ, ಇದು ಕುಡಿದ ಮತ್ತಿನಲ್ಲಿ ಬೈಕ್ ಸವಾರನ ಅಜಾಗರೂಕ ಮತ್ತು ಬೇಜವಾಬ್ದಾರಿ ವರ್ತನೆಯಿಂದ ಉಂಟಾದ ತಡೆಗಟ್ಟಬಹುದಾದ ಹತ್ಯೆಯಾಗಿತ್ತು. ಇದು ರಸ್ತೆ ಅಪಘಾತವಲ್ಲ. ನಿರ್ಲಕ್ಷ್ಯದ ಕ್ರಿಮಿನಲ್ ಕೃತ್ಯವಾಗಿದೆ. ಸೆಕೆಂಡುಗಳಲ್ಲಿ ಇಡೀ ಕುಟುಂಬಗಳನ್ನು ನಾಶ ಮಾಡಿತು. ಬಿ. ಶಿವಶಂಕರ್ ಎಂದು ಗುರುತಿಸಲಾದ ಬೈಕ್ ಸವಾರ ಮಧ್ಯದ ಅಮಲಿನಲ್ಲಿದ್ದ. ಮಧ್ಯಪಾನ ಮಾಡಿ ಚಲಾಯಿಸುವ ಅವನ ನಿರ್ಧಾರವು ಊಹಿಸಲಾಗದ ಪ್ರಮಾಣದ ದುರಂತವಾಗಿ ಪರಿವರ್ತನೆಯಾಯಿತು ಎಂದು ಪೋಸ್ಟ್ ನಲ್ಲಿ ಬರೆದುಕೊಂಡಿದ್ದಾರೆ.



















































