ರಿಷಿಕಾ ಕುಂದೇಶ್ವರರಗೆ ಪತ್ರಕರ್ತ ಸಂಘದ ಗೌರವ ಸನ್ಮಾನ

ಮಂಗಳೂರು: ಮಕ್ಕಳಲ್ಲಿ ಪ್ರತಿಭೆ ಗುರುತಿಸಿ ಸಂಸ್ಕೃತಿ, ಕಲೆ ಪೋಷಿಸುವ ಹೊಣೆ ಪೋಷಕರದ್ದು ಎಂದು ಆಳ್ವಾಸ್ ಶಿಕ್ಷಣ ಪ್ರತಿಷ್ಠಾನ ಅಧ್ಯಕ್ಷ ಡಾ. ಎಂ.ಮೋಹನ ಆಳ್ವ ಹೇಳಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘ ವತಿಯಿಂದ ಪತ್ರಿಕಾಭವನದಲ್ಲಿ ಜೀ ಕನ್ನಡ ಡ್ರಾಮಾ ಜೂನಿಯರ್ಸ್ ಚಾಂಪಿಯನ್ ರಿಷಿಕಾ ಕುಂದೇಶ್ವರ ಅವರನ್ನು ಸನ್ಮಾನಿಸಿ ಮಾತನಾಡಿದರು.
ನಮ್ಮ ನಾಡಿನ ಶಾಸ್ತ್ರೀಯ, ಜನಪದೀಯ ಕಲೆ ಸಂಸ್ಕೃತಿಯನ್ನು ಮುಂದಿನ ಪೀಳಿಗೆಗೆ ಮುಂದುವರಿಸಲು ಪೋಷಕರು ಪ್ರಯತ್ನಿಸಬೇಕು. ಎಳವೆಯಲ್ಲಿ ಹೆತ್ತವರ ಕಲಾ ಪೋಷಣೆ ಬಳಿಕ ಮಕ್ಕಳು ಪ್ರೌಢಾವಸ್ಥೆಯಲ್ಲಿ ಕಲೆಯನ್ನು ತ್ಯಜಿಸದೆ ಮುಂದುವರಿಸಬೇಕು. ಶಿಕ್ಷಣ ಸಂಸ್ಥೆಗಳೂ ಇದಕ್ಕೆ ಪ್ರೋತ್ಸಾಹ ನೀಡಬೇಕು ಎಂದರು. ಪೌರಾಣಿಕ, ವ್ಯಕ್ತಿಚಿತ್ರ, ಐತಿಹಾಸಿಕ, ಜನಪದೀಯ ಮತ್ತು ಕಾಮಿಡಿ ವಿಭಾಗದಲ್ಲಿ ಭಾವಾಭಿನಯದ ಮೂಲಕ ರಿಷಿಕಾ ಕನ್ನಡನಾಡಿನ ಜನರ ಮನಗೆದ್ದಿದ್ದಾಳೆ. ಶಿಕ್ಷಣದ ಜತೆ ಕಲಾ ವ್ಯವಸಾಯ ಮುಂದುವರಿಸಿ ಸಾಧನೆ ಮಾಡಬೇಕು ಎಂದು ಸಲಹೆ ಮಾಡಿದರು.
ಚಲನಚಿತ್ರ ನಟ ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್ ಮಾತನಾಡಿ, ಎಳವೆಯಿಂದಲೂ ರಿಷಿಕಾ ಪ್ರತಿಭೆಯನ್ನು ಗಮನಿಸಿದ್ದೇನೆ. ಯಕ್ಷಗಾನ ಕುಣಿತ, ಭಾಗವತಿಕೆ, ಶಾಸ್ತ್ರೀಯ ಸಂಗೀತ, ಪಾಶ್ಚಿಮಾತ್ಯ ಸಂಗೀತ ಎಲ್ಲದರಲ್ಲಿಯೂ ಪರಿಪೂರ್ಣತೆ ಇದೆ. ಎಲ್ಲ ರೀತಿಯ ಪಾತ್ರಗಳನ್ನು ಪರಕಾಯ ಪ್ರವೇಶಮಾಡಿ ಲೀಲಾಜಾಲವಾಗಿ ನಿರ್ವಹಿಸುತ್ತಾಳೆ. ಈಕೆ ಮುಂದೆ ರಾಷ್ಟ್ರ ಮಟ್ಟದಲ್ಲಿ ಮಿಂಚಿ ನಮ್ಮ ಊರಿಗೆ ಹೆಮ್ಮೆ ತರುತ್ತಾಳೆ ಎಂದರು.
ಸಂಸದ ನಳಿನ್ ಕುಮಾರ್ ಕಟೀಲ್ ಮಾತನಾಡಿ, ಲೋಕಸಭಾ ಸದಸ್ಯನಾಗಿ ಕೊನೆಯ ದಿನ ನಾನು ಅದ್ಭುತ ಪ್ರತಿಭೆಯನ್ನು ಗೌರವಿಸುತ್ತಿರುವುದು ಅತ್ಯುತ್ತಮ ಕ್ಷಣ ಎಂದು ಬಣ್ಣಿಸಿದರು.
ಸನ್ಮಾನ ಸ್ವೀಕರಿಸಿದ ರಿಷಿಕಾ ಕುಂದೇಶ್ವರ ಮಾತನಾಡಿ, ನಮ್ಮದು ಪತ್ರಕರ್ತರ ಕುಟುಂಬ, ಎಲ್ಲ ಪತ್ರಕರ್ತರು ಮನೆ ಮಗಳಂತೆ ನನಗೆ ಪ್ರೋತ್ಸಾಹ ನೀಡಿದರು. ಮನೆ ಮಂದಿಯ ಪ್ರೀತಿ ಈ ಸನ್ಮಾನದಲ್ಲಿ ಕಂಡೆ ಎಂದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ಜಿತೇಂದ್ರ ಕುಂದೇಶ್ವರ ಮಾತನಾಡಿ, ಪತ್ರಕರ್ತರಿಗೆ ಜಾತಿ ಇಲ್ಲ. ಪತ್ರಕರ್ತರೇ ಒಂದು ಜಾತಿ, ಇಂದು ಪತ್ರಕರ್ತನ ಮಗಳಿಗೆ ಸನ್ಮಾನಿಸುವ ಮೂಲಕ ನಮ್ಮ ಸಮುದಾಯದ ಸನ್ಮಾನ ಎಂಬ ಭಾವ ಮೂಡುತ್ತಿದೆ ಎಂದರು.
ಪತ್ರಕರ್ತರ ಸಂಘದ ಅಧ್ಯಕ್ಷ ಶ್ರೀನಿವಾಸ ನಾಯಕ್ ಇಂದಾಜೆ ಅಧ್ಯಕ್ಷತೆ ವಹಿಸಿದ್ದರು. ಅಶೋಕನಗರ ಎಸ್. ಡಿ. ಎಮ್. ಸ್ಕೂಲ್ ಸಂಚಾಲಕರಾದ ಶೃತಾ ಜಿತೇಶ್, ಪ್ರೆಸ್ ಕ್ಲಬ್ ಅಧ್ಯಕ್ಷ ಪಿ.ಬಿ. ಹರೀಶ್ ರೈ, ನಿಕಟಪೂರ್ವ ಅಧ್ಯಕ್ಷ ಅನ್ನು ಮಂಗಳೂರು, ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ರಾಮಕೃಷ್ಣ. ಆರ್., ಪತ್ರಕರ್ತರ ಸಂಘದ ಉಪಾಧ್ಯಕ್ಷ ಭಾಸ್ಕರ ರೈ ಕಟ್ಟ,
ಅಂತಾರಾಷ್ಟ್ರೀಯ
ಜಾದೂಗಾರ ಗಣೇಶ್ ಕುದ್ರೋಳಿ, ಉಪಸ್ಥಿತರಿದ್ದರು. ನವೀನ್ ಶೆಟ್ಟಿ ಎಡ್ಮೆಮ್ಮಾರ್ ಕಾರ್ಯಕ್ರಮ ನಿರೂಪಿಸಿದರು. ಕೋಶಾಧಿಕಾರಿ ಪುಷ್ಪರಾಜ್ ಬಿ.ಎನ್. ವಂದಿಸಿದರು.
ದಕ್ಷಿಣ ಕನ್ನಡ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ವತಿಯಿಂದ ರಿಷಿಕಾ ಕುಂದೇಶ್ವರ ಮತ್ತು ಹೆತ್ತವರಾದ ಜಿತೇಂದ್ರ ಕುಂದೇಶ್ವರ, ಸಂಧ್ಯಾ ಕುಂದೇಶ್ವರ ಅವರನ್ನು ಗೌರವಿಸಲಾಯಿತು. ಡಾ.ಎಂ.ಮೋಹನ ಆಳ್ವ, ಸಂಸದ ನಳಿನ್ ಕುಮಾರ್ ಕಟೀಲ್, ತೆಲಿಕೆದ ಬೊಳ್ಳಿ ದೇವದಾಸ್ ಕಾಪಿಕಾಡ್, ಶೃತಾ ಜಿತೇಶ್, ಶ್ರೀನಿವಾಸ ನಾಯಕ್ ಇಂದಾಜೆ, ಹರೀಶ್ ರೈ, ಕುದ್ರೋಳಿ ಗಣೇಶ್, ರಾಮಕೃಷ್ಣ ಆರ್., ಅನ್ನು ಮಂಗಳೂರು, ಭಾಸ್ಕರ ರೈ ಕಟ್ಟ, ಪುಷ್ಪರಾಜ್ ಬಿ.ಎನ್., ಸೌತ್ ಕೆನರಾ ಫೋಟೊಗ್ರಾಫರ್ ಅಸೋಸಿಯೇಶನ್ ಅಧ್ಯಕ್ಷ ಪದ್ಮಪ್ರಸಾದ್ ಜೈನ್ ಉಪಸ್ಥಿತರಿದ್ದರು.