
ಮಂಗಳೂರು: ತೆಂಕುತಿನ ಯಕ್ಷಗಾನ ಕಲಾವಿದ ಸೂರಿಕುಮೇರು ಕೆ ಗೋವಿಂದ ಭಟ್ (88) ಶುಕ್ರವಾರ ರಾತ್ರಿ ನಿಧನರಾಗಿದ್ದಾರೆ.
ಯಕ್ಷಗಾನ ಹೆಜ್ಜೆಗಾರಿಕೆ ,ಮಾತುಗಾರಿಕೆ ಮತ್ತು ಅಭಿನಯದಲ್ಲಿ ಖ್ಯಾತಿಯೊಂದಿಗೆ, ಗೋವಿಂದ ಭಟ್ಟರು, ಯಕ್ಷಗಾನ ಕ್ಷೇತ್ರದ ನಡೆದಾಡುವ ವಿಶ್ವಕೋಶ, ದಶಾವತಾರಿ ಎಂದೇ ಪರಿಚಿತರು. ವಯೋಸಹಜ ಕಾಯಿಲೆಯಿಂದ ಬಳಲುತ್ತಿದ್ದ ಇವರು ತೀರ್ಥಹಳ್ಳಿಯ ತಮ್ಮ ಹಿರಿಯ ಪುತ್ರನ ನಿವಾಸದಲ್ಲಿ ಇಹಲೋಕ ತ್ಯಜಿಸಿದ್ದಾರೆ.
1938 ರಂದು ಬಂಟ್ವಾಳ ತಾಲೂಕಿನಲ್ಲಿ ಜನಿಸಿದ ಇವರು, 1951 ರಲ್ಲಿ ಯಕ್ಷಗಾನ ಮೇಳಕ್ಕೆ ಸೇರ್ಪಡೆಯಾಗಿದ್ದರು. ಇವರಿಗೆ ಕೇಂದ್ರ ಸಂಗೀತ ನಾಟಕ ಅಕಾಡೆಮಿ ಪುರಸ್ಕಾರ, ಕರ್ನಾಟಕ ರಾಜ್ಯೋತ್ಸವ ಪುರಸ್ಕಾರ, ಕನ್ನಡ ಸಾಹಿತ್ಯ ಪರಿಷತ್ತು ಪುರಸ್ಕಾರ, ಕರ್ನಾಟಕ ಜಾನಪದ ಅಕಾಡೆಮಿ ಸಾಧನ ಪ್ರಶಸ್ತಿ ದೊರಕಿದೆ.






















































