
ಮುಲ್ಕಿ: ಮಂಗಳೂರಿನ ಪ್ರತಿಷ್ಠಿತ ತಿರುವೈಲ್ ಗುತ್ತು ಕುಟುಂಬದ ನವೀನ್ ಚಂದ್ರ ಆಳ್ವ ಅವರ ಪುತ್ರ ಯುವ ಉದ್ಯಮಿ ಅಭಿಷೇಕ್ ಆಳ್ವ (25) ಆತ್ಮಹತ್ಯೆ ಮಾಡಿಕೊಂಡಿರುವುದಾಗಿ ತಿಳಿದು ಬಂದಿದೆ.
ಗುರುವಾರ ರಾತ್ರಿಯಿಂದ ನಾಪತ್ತೆಯಾಗಿದ್ದ ಅಭಿಷೇಕ್ ಆಳ್ವ ಅವರ ಮೃತ ದೇಹವು ಶುಕ್ರವಾರ ಬೆಳಗ್ಗೆ ಮುಲ್ಕಿ ಸಮೀಪದ ಬಪ್ಪನಾಡು ಸೇತುವೆ ಬಳಿ ಶಾಂಭವಿ ನದಿಯಲ್ಲಿ ಪತ್ತೆಯಾಗಿದೆ. ಗುರುವಾರ ಮುಂಜಾನೆ 03:30ರ ಸುಮಾರಿಗೆ ಅಭಿಷೇಕ್ ಆಳ್ವ ತಮ್ಮ ಕಾರಿನಲ್ಲಿ ಹೊರಟಿದ್ದು ದಕ್ಷಿಣ ಕನ್ನಡ ಹಾಗೂ ಉಡುಪಿ ಜಿಲ್ಲೆಯ ಗಡಿ ಭಾಗದಲ್ಲಿರುವ ಬಪ್ಪನಾಡು ಸೇತುವೆ ಬಳಿ ಕಾರನ್ನು ನಿಲ್ಲಿಸಿ ಶಾಂಭವಿ ನದಿಗೆ ಹಾರಿದ್ದಾರೆ ಎನ್ನಲಾಗಿದೆ.
ಮುಂಜಾನೆ ಹೊರಟ ಮಗ ರಾತ್ರಿವರೆಗೂ ಮನೆಗೆ ಬಾರದಿದ್ದಾಗ ತಂದೆ ನವೀನ್ ಚಂದ್ರ ಆಳ್ವ ಪಡುಬಿದ್ರೆ ಪೊಲೀಸ್ ಠಾಣೆಗೆ ದೂರು ನೀಡಿದ್ದು ಈ ದೂರಿನ ಹಿನ್ನೆಲೆ ಪೊಲೀಸರು ಶೋಧಕಾರ್ಯ ಆರಂಭಿಸಿದಾಗ ಮುಲ್ಕಿಯ ಬಪ್ಪನಾಡು ಸೇತುವೆ ಬಳಿ ಅಭಿಷೇಕ್ ಅವರ ಕಾರು ಪತ್ತೆಯಾಗಿದೆ. ಕೂಡಲೇ ಮಾಹಿತಿ ಪಡೆದ ಈಶ್ವರ್ ಮಲ್ಪೆ ಅವರ ತಂಡ ಶಾಂಭವಿ ನದಿಯಲ್ಲಿ ಮಧ್ಯರಾತ್ರಿವರೆಗೂ ಶೋಧಕಾರ್ಯ ನಡೆಸಿದರು ಅಭಿಷೇಕ್ ಪತ್ತೆಯಾಗಿರಲಿಲ್ಲ.
ಶುಕ್ರವಾರ ಬೆಳಗ್ಗೆ ಸ್ಥಳೀಯರಾದ ಸಚಿನ್ ನಾಯಕ್ ಅವರು ಬೋಟ್ ಮೂಲಕ ಶೋಧ ಕಾರ್ಯ ನಡೆಸುತ್ತಿದ್ದಾಗ ಮುಲ್ಕಿ ಪೊಲೀಸ್ ಠಾಣಾ ವ್ಯಾಪ್ತಿಯ ಚಂದ್ರ ಶಾನುಭಾಗರ ಕುದ್ರು ಬಳಿ ಅಭಿಷೇಕ್ ಅವರ ಮೃತ ದೇಹ ಪತ್ತೆಯಾಗಿದೆ. ತಕ್ಷಣ ಸ್ಥಳೀಯ ಮುಳುಗುತಜ್ಞರು, ಈಜುಗಾರರು ಮತ್ತು NDRF ಸಿಬ್ಬಂದಿ ಸಹಕಾರದೊಂದಿಗೆ ಅಭಿಷೇಕ್ ಮೃತದೇಹವನ್ನು ನದಿಯಿಂದ ಮೇಲೆತ್ತಿ ಆಂಬುಲೆನ್ಸ್ ಮೂಲಕ ಮಂಗಳೂರಿನ ಆಸ್ಪತ್ರೆಗೆ ಕಳುಹಿಸಲಾಗಿದೆ.






