
ಮಂಗಳೂರು: ಐಟಿ ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ನಗರದ ಟಿಎಂಎ ಪೈ ಕನ್ವೆನ್ಶನ್ ಸೆಂಟರ್ನಲ್ಲಿ ಕರ್ನಾಟಕ ಡಿಜಿಟಲ್ ಎಕಾನಮಿ ಮಿಷನ್ನ 5ನೇ ಆವೃತ್ತಿಯ ಟೆಕ್ನೋವಾಂಝಾ-2025 ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ್ದು ಈ ವೇಳೆ ಮಂಗಳೂರಿನಲ್ಲಿ ಅತಿದೊಡ್ಡ ಟೆಕ್ ಪಾರ್ಕ್ನ ಪ್ರಸ್ತಾವನೆಯು ಅನುಮೋದನೆಗಾಗಿ ರಾಜ್ಯ ಸಚಿವ ಸಂಪುಟದ ಮುಂದೆ ಬರಲಿದೆ. ಇನ್ನೊಂದು ವಾರದೊಳಗೆ ಇದಕ್ಕೆ ಅನುಮೋದನೆ ನೀಡುವ ಕೆಲಸ ಆಗಲಿದೆ ಎಂದು ಹೇಳಿದ್ದಾರೆ.
ಕಿಯೋನಿಕ್ಸ್ ಅಧೀನದಲ್ಲಿ ಈಗಾಗಲೇ ಗುರುತಿಸಲಾಗಿರುವ 3.25 ಎಕರೆ ಜಾಗದಲ್ಲಿ ಟೆಕ್ ಪಾರ್ಕ್ ಮಾಡಲು ಯೋಜಿಸಲಾಗಿದ್ದು ಇದರಲ್ಲಿ 3,500ರಷ್ಟು ಉದ್ಯೋಗ ಕಲ್ಪಿಸಲು ಸಾಧ್ಯವಾಗಲಿದೆ. ಈ ಕ್ಯಾಬಿನೆಟ್ ಅಥವಾ ಮುಂದಿನ ಕ್ಯಾಬಿನೆಟ್ ಒಳಗೆ ಟೆಕ್ ಪಾರ್ಕ್ಗೆ ಅನುಮೋದನೆ ನೀಡಲಾಗುವುದು ಎಂದು ಹೇಳಿದರು.
ಕರ್ನಾಟಕದ ಜಾಗತಿಕ ಸಾಮರ್ಥ್ಯ ಕೇಂದ್ರಗಳ (ಜಿಸಿಸಿ) ನೀತಿಯು ಮಹತ್ವಾಕಾಂಕ್ಷೆಯಿಂದ ಕೂಡಿದ್ದು, 2029ರ ವೇಳೆಗೆ ರಾಜ್ಯದಲ್ಲಿ 500 ಹೊಸ ಜಿಸಿಸಿಗಳನ್ನು ಆಕರ್ಷಿಸುವ ಗುರಿ ಹೊಂದಲಾಗಿದೆ. ಈ ಮೂಲಕ 3.5 ಲಕ್ಷ ಉದ್ಯೋಗ ಸೃಷ್ಟಿಯ ಗುರಿ ಹೊಂದಲಾಗಿದೆ. ಮುಂದಿನ ತಿಂಗಳೊಳಗೆ ಸರ್ಕಾರವು ಈ ಕುರಿತ ಆರ್ಥಿಕ ನೀತಿಯನ್ನು ರೂಪಿಸಲಿದೆ ಎಂದು ವಿವರಿಸಿದರು.
ಮಣಿಪಾಲ, ಉಡುಪಿ ಮತ್ತು ಮಂಗಳೂರು ಪ್ರದೇಶಗಳನ್ನೊಳಗೊಂಡ ಕ್ಲಸ್ಟರ್ನ ಆರ್ಥಿಕ ಅಭಿವೃದ್ಧಿಗೆ ವಿಫುಲ ಅವಕಾಶಗಳಿವೆ. ಈ ಪ್ರದೇಶದಲ್ಲಿ 310,000ಕ್ಕೂ ಅಧಿಕ ಪ್ರತಿಭಾನ್ವಿತ ಮಾನವ ಸಂಪನ್ಮೂಲವಿದೆ. ಪ್ರಸ್ತುತ ಜಿಡಿಪಿಯಲ್ಲಿ ಶೇ.40ರ ಪಾಲಿನೊಂದಿಗೆ ಬೆಂಗಳೂರು ರಾಜ್ಯದಲ್ಲಿ ನಂ.1 ಸ್ಥಾನದಲ್ಲಿದ್ದರೆ, ಶೇ.5 ಜಿಡಿಪಿ ಪಾಲಿನೊಂದಿಗೆ ಮಂಗಳೂರು 2ನೇ ಸ್ಥಾನದಲ್ಲಿದೆ. ಬೆಂಗಳೂರು ಹೊರತಾದ ನಗರಗಳಲ್ಲಿ ಆರ್ಥಿಕ ಅಭಿವೃದ್ಧಿ ಸಾಧಿಸಲು ಪೂರಕ ಯೋಜನೆ ರೂಪಿಸಲಾಗಿದೆ. ಮಂಗಳೂರನ್ನು ಮುಂದಿನ ಬೆಂಗಳೂರನ್ನಾಗಿ ಮಾಡಲು ಸರ್ಕಾರ ಬದ್ಧವಾಗಿದೆ ಎಂದು ಪ್ರಿಯಾಂಕ್ ಖರ್ಗೆ ತಿಳಿಸಿದರು.






















































