ಪತಿಯೂ ಆತ್ಮಹತ್ಯೆಗೆ ಶರಣು..!

ಬೆಂಗಳೂರು: ಶುಕ್ರವಾರ ಪತಿ ಹಾಗೂ ಆತನ ಕುಟುಂಬಸ್ಥರ ಕಿರುಕುಳದಿಂದ ಆತ್ಮಹತ್ಯೆಗೆ ಯತ್ನಿಸಿ ಚಿಕಿತ್ಸೆ ಪಡೆಯುತ್ತಿದ್ದ ನವ ವಿವಾಹಿತೆ ಗಾನವಿ ಎಂಬಾಕೆಯು ಚಿಕಿತ್ಸೆ ಫಲಿಸದೆ ಸಾವನ್ನಪ್ಪಿದ್ದಾರೆ. ಅಲ್ಲದೆ ಪತಿ ಸೂರಜ್ ಕೂಡ ಆತ್ಮಹತ್ಯೆ ಮಾಡಿಕೊಂಡಿದ್ದು ಆತನ ತಾಯಿಯು ಆತ್ಮಹತ್ಯೆಗೆ ಯತ್ನಿಸಿದ್ದಾರೆ ಎಂದು ವರದಿಯಾಗಿದೆ.
ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಯತ್ನಿಸಿದ ಗಾನವಿ ಅವರನ್ನು ಆಸ್ಪತ್ರೆಗೆ ದಾಖಲಿಸಲಾಗಿತ್ತು. ಮೆದುಳು ನಿಷ್ಕ್ರಿಯಗೊಂಡು ಸಾವು ಬದುಕಿನ ಹೋರಾಟ ನಡೆಸುತ್ತಿದ್ದ ಗಾನವಿ ಶುಕ್ರವಾರ ಕೊನೆಯುಸಿರೆಳೆದಿದ್ದಾರೆ. ಗಾನವಿ ಶವವನ್ನು ಅವರ ಕುಟುಂಬಸ್ಥರು ಪತಿ ಸೂರಜ್ ಅವರ ಮನೆಗೆ ತೆಗೆದುಕೊಂಡು ಹೋಗಿ ಪ್ರತಿಭಟನೆ ನಡೆಸಿದ್ದು ಕೂಡಲೇ ಆರೋಪಿಗಳನ್ನು ಬಂಧಿಸುವಂತೆ ಆಗ್ರಹಿಸಿದ್ದರು. ಪತಿ ಸೂರಜ್, ಅವರ ಸಹೋದರ ಸಂಜಯ್ ಹಾಗೂ ತಾಯಿ ಜಯಂತಿ ವಿರುದ್ಧ ಗಾನವಿ ಪೋಷಕರು ದೂರು ನೀಡಿದ್ದು ಈ ವಿಚಾರ ಬೆಳಕಿಗೆ ಬರುತ್ತಿದ್ದಂತೆ ಸೂರಜ್ ತಾಯಿ ಜಯಂತಿ ಹಾಗೂ ಸಹೋದರ ಸಂಜಯ್ ಜೊತೆ ನಾಗಪುರಕ್ಕೆ ತೆರಳಿದ್ದಾರೆ. ಅವಮಾನ ತಡೆಯಲಾಗದೆ ತಾಯಿ ಮಗ ಇಬ್ಬರು ಆತ್ಮಹತ್ಯೆ ಮಾಡಿಕೊಳ್ಳಲು ನಿರ್ಧರಿಸಿದ್ದಾರೆ ಎಂದು ಹೇಳಲಾಗುತ್ತಿದ್ದು ಪೊಲೀಸರು ಈ ಕುರಿತು ತನಿಖೆ ನಡೆಸುತ್ತಿದ್ದಾರೆ.
ಪ್ರಕರಣದ ಹಿನ್ನೆಲೆ:
ಖಾಸಗಿ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ ಸೂರಜ್ ಕಳೆದ ಅಕ್ಟೋಬರ್ 29ರಂದು ಗಾನವಿ ಅವರನ್ನು ವಿವಾಹವಾಗಿದ್ದರು. 40 ಲಕ್ಷ ಖರ್ಚು ಮಾಡಿ ಅರಮನೆ ಮೈದಾನದಲ್ಲಿ ಆರತಕ್ಷತೆ ಕಾರ್ಯಕ್ರಮ ಮಾಡಿದ ಬಳಿಕ ಶ್ರೀಲಂಕಾ ಗೆ ದಂಪತಿಗಳು ಹನಿಮೂನ್ ಗೆ ಹೋಗಿದ್ದರು. ಆದರೆ ಐದನೇ ದಿನಕ್ಕೆ ದಂಪತಿ ವಾಪಸ್ ಬಂದಿದ್ದು ಈ ಸಂಬಂಧ ಸೂರಜ್ ಹಾಗೂ ಅವರ ಕುಟುಂಬಸ್ಥರನ್ನು ಕೇಳಿದಾಗ ಯಾವುದೇ ಪ್ರತಿಕ್ರಿಯೆ ನೀಡಿದೆ ನಿಮ್ಮ ಮಗಳನ್ನು ಕರೆದುಕೊಂಡು ಹೋಗುವಂತೆ ತಿಳಿಸಿದ್ದಾರೆ. ಬಳಿಕ ತವರು ಮನೆಗೆ ಬಂದ ಗಾನವಿ ಬುಧವಾರ ಆತ್ಮಹತ್ಯೆಗೆ ಯತ್ನಿಸಿದ್ದು ಕೂಡಲೆ ಪೋಷಕರು ಆಸ್ಪತ್ರೆಗೆ ದಾಖಲಿಸಿದ್ದರು.





