ಮಹಾರಾಷ್ಟ್ರ ತೊರೆಯುವಂತೆ, ಬೆದರಿಕೆ ಹಾಕಿದವರನ್ನು ಇಂದು ಮಹಾರಾಷ್ಟ್ರ ತೊರೆದಿದೆ

ಮುಂಬೈ: ದೇಶದ ಶ್ರೀಮಂತ ಮಹಾನಗರ ಪಾಲಿಕೆಯಾಗಿರುವ ಬೃಹನ್ಮುಂಬಯಿ ಮಹಾನಗರ ಪಾಲಿಕೆ (ಬಿಎಂಸಿ) ಚುನಾವಣೆಯಲ್ಲಿ ಬಿಜೆಪಿ ಐತಿಹಾಸಿಕ ಜಯ ದಾಖಲಿಸಿದೆ. ಇದರೊಂದಿಗೆ ಹಲವು ವರ್ಷಗಳಿಂದ ಬಿಎಂಸಿಯಲ್ಲಿ ಅಧಿಕಾರದಲ್ಲಿದ್ದ ಠಾಕ್ರೆ ಕುಟುಂಬದ ಆಡಳಿತಕ್ಕೆ ತೆರೆ ಬಿದ್ದಿದೆ.
ಈ ಗೆಲುವಿನ ಹಿನ್ನೆಲೆ ನಟಿ ಹಾಗೂ ಬಿಜೆಪಿ ಸಂಸದೆಯಾದ ಕಂಗನಾ ರಣಾವತ್ ಅವರು ಪಕ್ಷದ ನಾಯಕರನ್ನು ಅಭಿನಂದಿಸಿದ್ದಾರೆ. ಪ್ರಧಾನಿ ನರೇಂದ್ರ ಮೋದಿ, ಮಹಾರಾಷ್ಟ್ರ ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಸೇರಿದಂತೆ ಬಿಜೆಪಿ ನಾಯಕರಿಗೆ ಹಾಗೂ ಕಾರ್ಯಕರ್ತರಿಗೆ ಅವರು ಶುಭಾಶಯಗಳನ್ನು ಸಲ್ಲಿಸಿದ್ದಾರೆ.
2020ರಲ್ಲಿ ಅವಿಭಜಿತ ಶಿವಸೇನೆ ಬಿಎಂಸಿಯನ್ನು ಆಡಳಿತ ನಡೆಸುತ್ತಿದ್ದ ಸಂದರ್ಭದಲ್ಲಿ, ಮುಂಬೈಯಲ್ಲಿರುವ ಕಂಗನಾ ರಣಾವತ್ ಅವರ ಬಂಗಲೆಗೆ ಹೊಂದಿಕೊಂಡ ಕಚೇರಿಯನ್ನು ಬಿಎಂಸಿ ಅಧಿಕಾರಿಗಳು ಕೆಡವಿದ್ದರು. ಈ ಘಟನೆ ಆ ವೇಳೆಗೆ ಭಾರೀ ಚರ್ಚೆಗೆ ಕಾರಣವಾಗಿದ್ದು ಇದೀಗ ಬಿಎಂಸಿಯಿಂದ ಶಿವಸೇನೆ ಅಧಿಕಾರ ಕಳೆದುಕೊಂಡಿದೆ.
ಬಿಜೆಪಿಯ ಭರ್ಜರಿ ಗೆಲುವಿನ ಬಗ್ಗೆ ಪ್ರತಿಕ್ರಿಯಿಸಿದ ಕಂಗನಾ, “ಮಹಾರಾಷ್ಟ್ರದಲ್ಲಿ ನಡೆದ ಬಿಎಂಸಿ ಚುನಾವಣೆಯ ಫಲಿತಾಂಶ ನನ್ನಲ್ಲಿ ಅಪಾರ ಉತ್ಸಾಹ ತಂದಿದೆ. ಈ ಐತಿಹಾಸಿಕ ಜಯಕ್ಕೆ ಪ್ರಧಾನಿ ನರೇಂದ್ರ ಮೋದಿ, ಮುಖ್ಯಮಂತ್ರಿ ದೇವೇಂದ್ರ ಫಡ್ನವೀಸ್ ಹಾಗೂ ರಾಜ್ಯದ ಎಲ್ಲ ಬಿಜೆಪಿ ಕಾರ್ಯಕರ್ತರನ್ನು ಅಭಿನಂದಿಸುತ್ತೇನೆ. ಇದು ನಮ್ಮೆಲ್ಲರಿಗೂ ದೊಡ್ಡ ಸಾಧನೆ” ಎಂದು ಹೇಳಿದ್ದಾರೆ.
ಇನ್ನು ತಮ್ಮ ಆಸ್ತಿಯ ವಿರುದ್ಧ ಬಿಎಂಸಿ ಕೈಗೊಂಡ ಕ್ರಮವನ್ನು ನೆನಪಿಸಿಕೊಂಡ ಅವರು, ಆ ಕ್ರಮವನ್ನು ಬಾಂಬೆ ಹೈಕೋರ್ಟ್ “ದುರುದ್ದೇಶಪೂರಿತ ಎಂದು ಹೇಳಿತ್ತು. ನನ್ನನ್ನು ನಿಂದಿಸಿದವರು, ನನ್ನ ಮನೆ ಕೆಡವಿದವರು ಮತ್ತು ಮಹಾರಾಷ್ಟ್ರ ತೊರೆಯುವಂತೆ ಬೆದರಿಕೆ ಹಾಕಿದವರನ್ನು ಇಂದು ಮಹಾರಾಷ್ಟ್ರ ತೊರೆದಿದೆ” ಎಂದು ಕಂಗನಾ ಹೇಳಿದರು.



















