
ಬೆಂಗಳೂರು: ಜನವರಿ 28ರಂದು ಪುಣೆಯ ಬಾರಾಮತಿ ವಿಮಾನ ನಿಲ್ದಾಣದ ಬಳಿ ಸಂಭವಿಸಿದ ವಿಮಾನ ಅಪಘಾತದಲ್ಲಿ ಮಹಾರಾಷ್ಟ್ರದ ಮಾಜಿ ಉಪ ಮುಖ್ಯಮಂತ್ರಿ ಅಜಿತ್ ಪವಾರ್ ಮೃತಪಟ್ಟ ಪ್ರಕರಣ ಇದೀಗ ಹೊಸ ಅನುಮಾನಗಳಿಗೆ ದಾರಿ ಮಾಡಿಕೊಟ್ಟಿದೆ. ಈ ಘಟನೆ ಆಕಸ್ಮಿಕವಲ್ಲ, ಸಂಚು ರೂಪದಲ್ಲಿ ನಡೆದಿದೆ ಎಂದು ಆರೋಪಿಸಿ ರೋಹಿತ್ ಪವಾರ್ ಅವರು ಬೆಂಗಳೂರಿನ ಹೈಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾರೆ.
ದೂರಿನಲ್ಲಿ, ಹಾರಾಟಕ್ಕೆ ಯೋಗ್ಯವಲ್ಲದ ವಿಮಾನವನ್ನು ವಿದೇಶದಿಂದ ಭಾರತಕ್ಕೆ ತರಿಸಿ ಬಳಸಲಾಗಿದೆ ಎಂದು ಹೇಳಲಾಗಿದೆ. ವಿಮಾನದ ಸುರಕ್ಷತಾ ಮಿತಿ 5,000 ಗಂಟೆಗಳಾಗಿದ್ದರೂ, ಅದನ್ನು ಸುಮಾರು 8,000 ಗಂಟೆಗಳವರೆಗೆ ಹಾರಿಸಿರುವ ದಾಖಲೆಗಳನ್ನು ತಿದ್ದುಪಡಿ ಮಾಡಿ ವಾಣಿಜ್ಯ ಬಳಕೆಗೆ ಬಳಸಲಾಗಿದೆ ಎಂಬ ಗಂಭೀರ ಆರೋಪವೂ ಮಾಡಲಾಗಿದೆ.
ಇದೇ ವೇಳೆ ಪೈಲಟ್ ಸುಮಿತ್ ಕಪೂರ್ ಅವರ ನೇಮಕಾತಿಯ ಮೇಲೂ ಪ್ರಶ್ನೆಗಳು ಕೇಳಿಬಂದಿವೆ. ಮದ್ಯಪಾನ ಪ್ರಕರಣಗಳಲ್ಲಿ ಹಿಂದೆ ಅಮಾನತುಗೊಂಡಿದ್ದ ವ್ಯಕ್ತಿಯನ್ನು ಮಹತ್ವದ ಹಾರಾಟಕ್ಕೆ ನೇಮಿಸಿರುವುದು ಸಂಶಯಕ್ಕೆ ಕಾರಣವಾಗಿದೆ. ಮೊದಲಿನಿಂದ ನಿಗದಿಯಾಗಿದ್ದ ಪೈಲಟ್ಗಳನ್ನು ಕೊನೆಯ ಕ್ಷಣದಲ್ಲಿ ಬದಲಿಸಿ, ಕಪೂರ್ ಮತ್ತು ಅವರ ತಂಡವನ್ನು ನೇಮಿಸಿರುವುದು ಉದ್ದೇಶಪೂರ್ವಕ ಕ್ರಮವಾಗಿರಬಹುದೆಂದು ಶಂಕಿಸಲಾಗಿದೆ.
ಅಜಿತ್ ಪವಾರ್ ಅವರು ರಸ್ತೆ ಮೂಲಕ ಪ್ರಯಾಣಿಸಬೇಕಿದ್ದರೂ ಕೊನೆಯ ಕ್ಷಣದಲ್ಲಿ ವಿಮಾನ ಪ್ರಯಾಣಕ್ಕೆ ಬದಲಾವಣೆ ಮಾಡಲಾಗಿದೆ. ಅಪಘಾತದ ವೇಳೆ ದಟ್ಟ ಮಂಜು ಇದ್ದರೂ ಲ್ಯಾಂಡಿಂಗ್ಗೆ ಅವಕಾಶ ನೀಡಿರುವುದು, ಟೇಬಲ್ಟಾಪ್ ರನ್ವೇ ಇದ್ದರೂ ಅಪಾಯಕಾರಿ ನಿರ್ಧಾರ ಕೈಗೊಂಡಿರುವುದು ಹಾಗೂ ನಿಯಮ ಉಲ್ಲಂಘನೆ ನಡೆದಿದೆ ಎಂಬ ಆರೋಪಗಳು ಕೇಳಿಬಂದಿದ್ದು, ಘಟನೆಯ ಸಂಪೂರ್ಣ ತನಿಖೆ ನಡೆಸುವಂತೆ ಆಗ್ರಹ ವ್ಯಕ್ತವಾಗಿದೆ.






















































