
ಉಡುಪಿ: ಕರ್ನೂಲ್‌ನಲ್ಲಿ ಸಂಭವಿಸಿದ ಭೀಕರ ಖಾಸಗಿ ಬಸ್ಸಿನ ಬೆಂಕಿ ದುರಂತದ ನಂತರ ಎಚ್ಚೆತ್ತುಕೊಂಡ ರಾಜ್ಯ ಸರ್ಕಾರವು ರಾಜ್ಯದಲ್ಲಿಯೂ ಬಸ್ಸುಗಳಲ್ಲಿ ಪ್ರಯಾಣಿಕರ ಲಗೇಜ್, ವಸ್ತುಗಳನ್ನು ಹೊರತುಪಡಿಸಿ ಬೇರೆ ಯಾವುದೇ ಸಾಮಾನುಗಳ ಸಾಗಾಟಕ್ಕೆ ಅವಕಾಶವಿಲ್ಲ ಎಂದು ಆದೇಶ ಹೊರಡಿಸಿದೆ.
ರಾಜ್ಯ ಸಾರಿಗೆ ಮತ್ತು ಮುಜರಾಯಿ ಇಲಾಖೆ ಸಚಿವ ರಾಮಲಿಂಗಾರೆಡ್ಡಿ ಸುದ್ದಿಗಾರೊಂದಿಗೆ ಮಾತನಾಡಿ ಚಿತ್ರದುರ್ಗದಲ್ಲಿ ಬೆಂಕಿ ದುರಂತಕ್ಕೊಳಗಾದ ಬಸ್ಸಿನಲ್ಲಿ ಹೆಚ್ಚು ಲಗೇಜ್ ಹಾಕಿದ್ದ ಬಗ್ಗೆಯೂ ಅಧಿಕಾರಿಗಳು ತನಿಖೆ ನಡೆಸುತ್ತಿದ್ದಾರೆ. ಎಲ್ಲ ಸಮಸ್ಯೆಗಳಿಗೂ ಪರಿಹಾರವಿದೆ. 2013ರಲ್ಲಿ ನಾನು ಸಾರಿಗೆ ಸಚಿವನಾಗಿದ್ದಾಗ ಹಾವೇರಿಯಲ್ಲೂ ಇದೇ ರೀತಿ ಅಪಘಾತವಾಗಿತ್ತು. ಆಗ ಎಮರ್ಜೆನ್ಸಿ ಎಕ್ಸಿಟ್ ಇರಲಿಲ್ಲ, ಲಕ್ಷುರಿ ಬಸ್ಸುಗಳಲ್ಲೂ ಗ್ಲಾಸ್ ಒಡೆದು ಆಚೆಗೆ ಬರಬೇಕಾದ ಪರಿಸ್ಥಿತಿ ಇತ್ತು, ಈಗ ಸಾರಿಗೆ ಇಲಾಖೆಯ 25000 ಬಸ್ಸುಗಳು ಸೇರಿ ಎಲ್ಲಾ ಖಾಸಗಿ ಮತ್ತು ಶಾಲಾ ಬಸ್ಸುಗಳಿಗೆ ಎಮರ್ಜೆನ್ಸಿ ಎಕ್ಸಿಟ್ ಇದೆ ಎಂದು ಹೇಳಿದರು.





