
ಬೆಂಗಳೂರು: ಆರೋಗ್ಯ ಇಲಾಖೆಯು ಹೊಸ ಯೋಜನೆಯನ್ನು ರೂಪಿಸಿದ್ದು ಅದೇನೆಂದರೆ ಬಡ ವರ್ಗದ ಜನರಿಗೆ ಅದರಲ್ಲೂ ಕ್ಯಾನ್ಸರ್ ಪೀಡಿತರಿಗೆ, ವೃದ್ಧರಿಗೆ ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವ ಜನರಿಗೆ ಉತ್ತಮ ಆರೋಗ್ಯ ಸೇವೆ ಒದಗಿಸಲು ಮನೆ ಬಾಗಿಲಿಗೆ ಒಪಿಡಿ ಸೌಲಭ್ಯ ನೀಡಲು ನಿರ್ಧರಿಸಿದೆ.
ಹೀಗಾಗಿ ಸಿವಿ ರಾಮನ್ ನಗರದ ಸಾರ್ವಜನಿಕರ ಆಸ್ಪತ್ರೆಯಲ್ಲಿ ಸಕಲ ಸಿದ್ಧತೆಗಳನ್ನ ಮಾಡಿಕೊಂಡು ಆಯ್ದ ಏರಿಯಾಗಳಲ್ಲಿ ಚಿಕಿತ್ಸೆ ನೀಡಲು ಮುಂದಾಗಿದ್ದು ಮುಂದಿನ ದಿನಗಳಲ್ಲಿ ಸೇವೆಯನ್ನ ವಿಸ್ತರಿಸಲು ಪ್ಲಾನ್ ಮಾಡಲಾಗುತ್ತಿದೆ ಎಂದು ಸಿವಿ ರಾಮನ್ ನಗರ ಆಸ್ಪತ್ರೆ ವೈದ್ಯಕೀಯ ಅಧೀಕ್ಷಕ ರಾಜೇಶ್ ಹೇಳಿದ್ದಾರೆ. ಕರ್ನಾಟಕದಲ್ಲೇ ಮೊದಲ ಬಾರಿಗೆ ಕ್ಯಾನ್ಸರ್ ಪೀಡಿತರಿಗೆ, ಬ್ರೇನ್ ಹ್ಯಾಮರೇಜ್, ವೃದ್ಧರು ಹಾಗೂ ಗಂಭೀರ ಆರೋಗ್ಯದ ಸಮಸ್ಯೆಯಿಂದ ಬಳಲುತ್ತಿರುವವರಿಗೆ ಆರೋಗ್ಯ ಇಲಾಖೆ ಮನೆ ಮನೆಗೆ ತೆರಳಿ ಉಚಿತ ಒಪಿಡಿ ಚಿಕಿತ್ಸೆ ನೀಡಲು ಮುಂದಾಗಿದೆ.
ಕ್ಯಾನ್ಸರ್, ಹೃದಯ ಸಮಸ್ಯೆ ಬ್ರೈನ್ ಹ್ಯಾಮರೇಜ್ , ಸೇರಿದಂತೆ ಮಾರಣಾಂತಿಕ ರೋಗಗಳಿಂದ ಬಳಲುತ್ತಿರುವವರಿಗೆ ಈ ಸೇವೆ ಸಿಗಲಿದೆ. ಗಂಭೀರ ಆರೋಗ್ಯ ಸಮಸ್ಯೆಯಿಂದ ಬಳಲುವವರು ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆಯಲು ಸಾಧ್ಯವಾಗುವುದಿಲ್ಲ. ಆಸ್ಪತ್ರೆಗೆ ಬಂದಾಗ ಕ್ಯೂನಲ್ಲಿ ನಿಂತು ಕಾಯುವ ಪರಿಸ್ಥಿತಿ ಇರುತ್ತದೆ. ಈ ಹಿನ್ನೆಲೆ ಅಂತವರಿಗಾಗಿ ತುರ್ತಾಗಿ ಚಿಕಿತ್ಸೆ ನೀಡುವ ಸಲುವಾಗಿ ಈ ಸೇವೆ ನೀಡಲು ಇಲಾಖೆ ನಿರ್ಧಾರ ಕೈಗೊಂಡಿದೆ.






















































