
ಹಾಸನ: ಶುಕ್ರವಾರ ಅಧಿಕಾರಿಗಳೊಂದಿಗೆ ಪ್ರಗತಿ ಪರಿಶೀಲನಾ ಸಭೆ ನಡೆಸಿದ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಆಹಾರ, ನಾಗರಿಕ ಸರಬರಾಜು ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಕೆ.ಎಚ್.ಮುನಿಯಪ್ಪ ರಾಜ್ಯ ಸರ್ಕಾರ ಜಾರಿಗೊಳಿಸಿರುವ ‘ಇಂದಿರಾ ಕಿಟ್’ ಯೋಜನೆಯಡಿ ಬೇಳೆ, ಸಕ್ಕರೆ, ಅಡುಗೆ ಎಣ್ಣೆ ಹಾಗೂ ಉಪ್ಪು ಒಳಗೊಂಡ ಕಿಟ್ಗಳನ್ನು ಫೆಬ್ರವರಿ ಅಂತ್ಯ ಅಥವಾ ಮಾರ್ಚ್ನಲ್ಲಿ ವಿತರಿಸಲಾಗುತ್ತದೆ ಎಂದು ತಿಳಿಸಿದ್ದಾರೆ.
ಟೆಂಡರ್ ಪ್ರಕ್ರಿಯೆ ಮುಂದುವರಿದಿದ್ದು, ಯೋಜನೆ ಪೌಷ್ಟಿಕ ಆಹಾರ ಒದಗಿಸುವ ಉದ್ದೇಶ ಹೊಂದಿದೆ. ತೂಕ-ಅಳತೆಯಲ್ಲಿ ಗ್ರಾಹಕರಿಗೆ ನಷ್ಟವಾಗದಂತೆ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಬೇಕು ಹಾಗೂ ಮಾರ್ಚ್ ಅಂತ್ಯದೊಳಗೆ ನಿಗದಿತ ಗುರಿ ಸಾಧಿಸಬೇಕು. ಇನ್ನೊಂದೆಡೆ, ಆದಾಯ ತೆರಿಗೆ ಪಾವತಿಸುವ ಕಾರಣದಿಂದ ಬಿಪಿಎಲ್ ಕಾರ್ಡ್ನಿಂದ ಹೊರಗಿಟ್ಟಿರುವವರು ಮನೆ ಅಥವಾ ಬೈಕ್ ಸಾಲ ತೀರಿಸುತ್ತಿದ್ದರೆ, ಮರುಪರಿಶೀಲನೆ ಮಾಡಿ ಬಿಪಿಎಲ್ ಕಾರ್ಡ್ ನೀಡಲು ಅವಕಾಶವಿದೆ ಎಂದು ಹೇಳಿದರು. ದೀರ್ಘಕಾಲ ತೆರಿಗೆ ಪಾವತಿಸುತ್ತಿರುವವರ ಕಾರ್ಡ್ಗಳನ್ನು ಎಪಿಎಲ್ಗೆ ಪರಿವರ್ತಿಸಬೇಕು ಎಂದೂ ಸೂಚಿಸಿದರು.
ಕುಟುಂಬದ ಮಕ್ಕಳಿಗೆ ಬೇರೆಡೆ ಉದ್ಯೋಗವಿದ್ದು ಅವರು ತೆರಿಗೆ ಪಾವತಿಸುತ್ತಿದ್ದರೂ, ಪೋಷಕರಿಗೆ ಬಿಪಿಎಲ್ ಕಾರ್ಡ್ ನೀಡಲು ಪರಿಶೀಲನೆ ನಡೆಸಬಹುದು. ಹಾಗೆಯೇ, 75 ವರ್ಷ ಮೇಲ್ಪಟ್ಟ ಒಂಟಿ ಹಿರಿಯ ನಾಗರಿಕರ ಮನೆಗಳಿಗೆ ‘ಅನ್ನಸುವಿಧಾ’ ಯೋಜನೆಯಡಿ ನ್ಯಾಯಬೆಲೆ ಅಂಗಡಿಗಳಿಂದ ಮನೆ ಬಾಗಿಲಿಗೆ ಪಡಿತರ ತಲುಪಿಸುವ ವ್ಯವಸ್ಥೆ ಜಾರಿಗೊಳಿಸಲು ಅಧಿಕಾರಿಗಳಿಗೆ ನಿರ್ದೇಶನ ನೀಡಿದರು.




