
ಬೆಂಗಳೂರು: ಶಾಲೆ–ಕಾಲೇಜುಗಳಲ್ಲಿ ವಾರ್ಷಿಕ ಪರೀಕ್ಷೆಗಳ ಸಿದ್ಧತೆ ಆರಂಭವಾಗಿರುವ ಹಿನ್ನೆಲೆಯಲ್ಲಿ, ಶಿಕ್ಷಣ ಇಲಾಖೆ 2025–26ನೇ ಸಾಲಿನ ಪ್ರಥಮ ಪಿಯುಸಿ ವಾರ್ಷಿಕ ಪರೀಕ್ಷೆ ಕುರಿತು ಮಹತ್ವದ ಸುತ್ತೋಲೆ ಹೊರಡಿಸಿದೆ. ಫೆಬ್ರವರಿ 10ರಿಂದ 25ರವರೆಗೆ ಪ್ರತಿ ಕಾಲೇಜಿಗೆ ಅನ್ವಯವಾಗುವಂತೆ ಪರೀಕ್ಷೆಗಳನ್ನು ನಡೆಸಲು ವೇಳಾಪಟ್ಟಿಯನ್ನು ರೂಪಿಸಿಕೊಳ್ಳಲು ಸೂಚಿಸಲಾಗಿದೆ.
ಪರೀಕ್ಷೆ ಸಂಬಂಧ ಯಾವುದೇ ಕಾರಣಕ್ಕೂ ವಿದ್ಯಾರ್ಥಿಗಳಿಂದ ಹಣ ವಸೂಲಿ ಮಾಡಬಾರದು ಎಂದು ಇಲಾಖೆ ಕಟ್ಟುನಿಟ್ಟಿನ ನಿರ್ದೇಶನ ನೀಡಿದ್ದು, ಎಲ್ಲಾ ಪರೀಕ್ಷಾ ನಿಯಮಾವಳಿಗಳನ್ನು ಕಡ್ಡಾಯವಾಗಿ ಪಾಲಿಸಿ ಪರೀಕ್ಷೆ ನಡೆಸುವಂತೆ ಸೂಚಿಸಿದೆ.
ಇದಲ್ಲದೆ, ಪ್ರಥಮ ಪಿಯುಸಿ ಫಲಿತಾಂಶವನ್ನು ಮಾರ್ಚ್ 30ರಂದು ಘೋಷಿಸಬೇಕು ಎಂದು ಸುತ್ತೋಲೆಯಲ್ಲಿ ಸ್ಪಷ್ಟಪಡಿಸಲಾಗಿದ್ದು ಮೌಲ್ಯಮಾಪನ ಪೂರ್ಣಗೊಂಡ ಬಳಿಕ ಅಂಕಗಳನ್ನು SATS ತಂತ್ರಾಂಶದಲ್ಲಿ ದಾಖಲಿಸುವಂತೆ ತಿಳಿಸಲಾಗಿದೆ.
ಕರ್ನಾಟಕ ಶಾಲಾ ಪರೀಕ್ಷೆ ಮತ್ತು ಮೌಲ್ಯ ನಿರ್ಣಯ ಮಂಡಳಿಯ ವೆಬ್‌ಸೈಟ್‌ನಲ್ಲಿ ಲಭ್ಯವಿರುವ ದ್ವಿತೀಯ ಪಿಯುಸಿ ಮಾದರಿ ಪ್ರಶ್ನೆ ಪತ್ರಿಕೆಗಳನ್ನು ಆಧರಿಸಿ ಪ್ರಥಮ ಪಿಯುಸಿಗೆ ಪ್ರಶ್ನೆ ಪತ್ರಿಕೆ ಸಿದ್ಧಪಡಿಸಲು ಸೂಚಿಸಲಾಗಿದೆ.
ಫೆಬ್ರವರಿ 25ರೊಳಗೆ ಪರೀಕ್ಷಾ ಪ್ರಕ್ರಿಯೆ ಪೂರ್ಣಗೊಳಿಸಿ, ಮಾರ್ಚ್ 13ರೊಳಗೆ ಜಿಲ್ಲಾ ಉಪನಿರ್ದೇಶಕರ ಅನುಮೋದನೆ ಪಡೆದು ಮಾರ್ಚ್ 30ರಂದು ಫಲಿತಾಂಶ ಪ್ರಕಟಿಸುವಂತೆ ಎಲ್ಲಾ ಪದವಿ ಪೂರ್ವ ಕಾಲೇಜುಗಳ ಪ್ರಾಂಶುಪಾಲರಿಗೆ ನಿರ್ದೇಶನ ನೀಡಲಾಗಿದೆ.








