
ಪ್ಯಾರಿಸ್ ಡೈಮಂಡ್ ಲೀಗ್ನಲ್ಲಿ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಪ್ರಶಸ್ತಿ ಮುಡಿಗೇರಿಸಿಕೊಂಡಿದ್ದಾರೆ. 2023 ರಲ್ಲಿ ಲೌಸಾನ್ನೆ ನಂತರ ಡೈಮಂಡ್ ಲೀಗ್ನಲ್ಲಿ ಪ್ರಶಸ್ತಿ ಗೆದ್ದಿದ್ದ ನೀರಜ್ ಚೋಪ್ರಾ ಇದೀಗ ಮತ್ತೊಮ್ಮೆ ಡೈಮಂಡ್ ಲೀಗ್ನಲ್ಲಿ ಎಲ್ಲರನ್ನು ಹಿಂದಿಕ್ಕುವಲ್ಲಿ ಯಶಸ್ವಿಯಾಗಿದ್ದಾರೆ.
ಪ್ಯಾರಿಸ್ ಡೈಮಂಡ್ ಲೀಗ್‌ನಲ್ಲಿ ಎಂಟು ವರ್ಷಗಳ ಬಳಿಕ ಕಾಣಿಸಿಕೊಂಡ ನೀರಜ್ ಚೋಪ್ರಾ 2025ರ ಮೊದಲ ಪ್ರಶಸ್ತಿ ಗೆದ್ದುಕೊಂಡಿದ್ದಾರೆ. ಅಂದರೆ ಕೊನೆಯ ಬಾರಿ ಅವರು ಪ್ಯಾರಿಸ್ನಲ್ಲಿ ನಡೆದ ಜೂನಿಯರ್ ವಿಶ್ವ ಚಾಂಪಿಯನ್ಶಿಪ್ನಲ್ಲಿ ಸ್ಪರ್ಧಿಸಿದ್ದರು.
ಎಂಟು ವರ್ಷಗಳ ಬಳಿಕ ಪ್ಯಾರಿಸ್ ಡೈಮಂಡ್ ಲೀಗ್ಗೆ ಮರಳಿದ ನೀರಜ್ ಚೋಪ್ರಾ ಅವರು ತಮ್ಮ ಮೊದಲ ಪ್ರಯತ್ನದಲ್ಲೇ 88.16 ಮೀಟರ್ ಎಸೆತದೊಂದಿಗೆ ಶುಭಾರಂಭ ಮಾಡಿದ್ದರು. ಈ ಎಸೆತವೇ ಇತರ ಸ್ಪರ್ಧಿಗಳಿಗೆ ಗುರಿಯಾಗಿ ಮಾರ್ಪಟ್ಟಿತ್ತು.
ಎರಡನೇ ಪ್ರಯತ್ನದಲ್ಲಿ ನೀರಜ್ ಚೋಪ್ರಾ 85.10 ಮೀಟರ್ ದೂರ ಎಸೆದಿದ್ದು ಆದರೆ ಕಠಿಣ ಪ್ರತಿ ಸ್ಪರ್ಧಿ ವೆಬರ್ ಈ ವೇಳೆ 87.88 ಮೀಟರ್ ತಲುಪಿದ್ದರು. ಇದಾದ ಬಳಿಕ ಲಯ ತಪ್ಪಿದ ನೀರಜ್ ಸತತ ಮೂರು ಫೌಲ್ ಎಸೆತಗಳನ್ನು ಎಸೆದರು. ನೀರಜ್ ಚೋಪ್ರಾ ತನ್ನ ಅಂತಿಮ ಪ್ರಯತ್ನದಲ್ಲಿ 82.89 ಮೀಟರ್ ದೂರಕ್ಕೆ ಎಸೆಯಲಷ್ಟೇ ಶಕ್ತರಾಗಿದ್ದರು. ಇದರ ನಡುವೆ ಮೌರಿಸಿಯೊ ಲೂಯಿಜ್ ಡ ಸಿಲ್ವಾ 86.62 ಮೀಟರ್ ದೂರಕ್ಕೆ ಎಸೆದು ಪೈಪೋಟಿಗೆ ಇಳಿದರು. ಅತ್ತ ಜೂಲಿಯನ್ ವೆಬರ್ ಸತತ ಪ್ರಯತ್ನ ನಡೆಸಿದರೂ, ನೀರಜ್ ಚೋಪ್ರಾ ಅವರ 88.16 ಮೀಟರ್ ಗುರಿಯನ್ನು ದಾಟಲು ಸಾಧ್ಯವಾಗಲಿಲ್ಲ. ಅಂತಿಮವಾಗಿ ನೀರಜ್ ಚೋಪ್ರಾ ಮೊದಲ ಎಸೆತದಲ್ಲಿ ಕ್ರಮಿಸಿದ 88.16 ಮೀಟರ್ ಮೊದಲ ಸ್ಥಾನವನ್ನು ಪಡೆದುಕೊಂಡು ಪ್ರಶಸ್ತಿ ಮುಡಿಗೇರಿಸಿಕೊಂಡರು.






