
ಮಂಗಳೂರು: ಪುತ್ತೂರಿನಲ್ಲಿ ಬಿಜೆಪಿ ನಾಯಕನ ಪುತ್ರ ಕೃಷ್ಣ ಜೆ. ರಾವ್ ಯುವತಿ ಒಬ್ಬಳನ್ನು ಪ್ರೀತಿಸಿ, ಮದುವೆಯಾಗುವುದಾಗಿ ನಂಬಿಸಿ ಗರ್ಭವತಿಯನ್ನಾಗಿಸಿ ಆಕೆಗೆ ಮಗು ಜನಿಸಿದ್ದ ಪ್ರಕರಣಕ್ಕೆ ಸಂಬಂಧಿಸಿದಂತೆ ಈಗ ರಾಜ್ಯ ಹಿಂದುಳಿದ ವರ್ಗಗಳ ಆಯೋಗವು ಕಾಲಿಟ್ಟಿದೆ.
ಡಿಎನ್ಎ ಪರೀಕ್ಷೆಯಲ್ಲಿ ಸಂತ್ರಸ್ತೆ ಪೂಜಾಳ ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಸಾಬೀತಾದರೂ ಅವರು ಈಕೆಯನ್ನು ಮದುವೆಯಾಗಲು ಒಪ್ಪುತ್ತಿಲ್ಲ. ಕೃಷ್ಣ ಜೆ. ರಾವ್ ಕುಟುಂಬದಿಂದ ಸಂತ್ರಸ್ತೆಗೆ 50 ಲಕ್ಷ ರೂ ಆಮಿಷ ಆರೋಪ ಕೇಳಿಬಂದಿದ್ದು ಆದ್ದರಿಂದ ಇನ್ನು ಮುಂದೆ ಸಂಧಾನದ ಬಾಗಿಲು ಮುಚ್ಚಿದ್ದು, ಮಂಗಳೂರು ಕೋರ್ಟ್ ಆತನಿಗೆ ನೀಡಿರುವ ಜಾಮೀನನ್ನು ರದ್ದುಗೊಳಿಸಲು ಅರ್ಜಿ ಸಲ್ಲಿಸಲಾಗುವುದು. ಅಲ್ಲದೆ ಸದ್ಯ ಅತಂತ್ರ ಸ್ಥಿತಿಯಲ್ಲಿ ಇರುವ ಮಗುವಿಗೆ ಕಲ್ಲಡ್ಕದಲ್ಲಿ ಜನವರಿ 24ರಂದು ನಾಮಕರಣ ಶಾಸ್ತ್ರ ಹಮ್ಮಿಕೊಂಡಿರುವುದಾಗಿ ರಾಜ್ಯ ಹಿಂದುಳಿದ ವರ್ಗಗಳ ಆಯೋಗ ಸದಸ್ಯೆ ಪ್ರತಿಭಾ ಕುಳಾಯಿ ತಿಳಿಸಿದ್ದಾರೆ.
ಶುಕ್ರವಾರ ಸಂತ್ರಸ್ತೆಯ ತಾಯಿ ಹಾಗೂ ಮಗು ಸಹಿತ ಸಂತ್ರಸ್ತೆ ಜೊತೆ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ಮಗುವಿನ ತಂದೆ ಕೃಷ್ಣ ಜೆ.ರಾವ್ ಎಂಬುದು ಡಿಎನ್ಎ ಪರೀಕ್ಷೆಯಲ್ಲಿ ಸಾಬೀತಾದರೂ ಆತನ ಕುಟುಂಬದವರು ಪೂಜಾ ಜೊತೆ ಮದುವೆಗೆ ಸುತಾರಾಂ ಒಪ್ಪುತ್ತಿಲ್ಲ. ಕೇವಲ ವಿಶ್ವಕರ್ಮ ಸಮುದಾಯದ ಮುಖಂಡ ಕೆ.ಪಿ.ನಂಜುಂಡಿ ಜೊತೆ ಮಾತ್ರ ಸಂಪರ್ಕದಲ್ಲಿ ಇದ್ದಾರೆ. ಮದುವೆ ವಿಚಾರದಲ್ಲಿ ಸಂಧಾನ ಮಾತುಕತೆ ವೇಳೆ ಆತನ ಪೋಷಕರು ಈಡೇರಿಸಲಾಗದ ಷರತ್ತು ಇಟ್ಟಿದ್ದಾರೆ. ಮಗುವನ್ನು ಸಾಂತ್ವನ ಕೇಂದ್ರಕ್ಕೆ ಸೇರಿಸಬೇಕು. ಹಾಗಾದರೆ ಮಾತ್ರ ಪೂಜಾಳನ್ನು ಆತ ವಿವಾಹವಾಗಿ ಬಳಿಕ ವಿಚ್ಛೇದನ ನೀಡುತ್ತಾನಂತೆ. ಅಲ್ಲದೆ ಈ ವೇಳೆ 50 ಲಕ್ಷ ರೂ. ಪರಿಹಾರ ನೀಡುತ್ತಾನಂತೆ, ಮೊದಲಿನ ಕೇಸ್ನ್ನೆಲ್ಲ ವಾಪಸ್ ಪಡೆಯಬೇಕು ಇತ್ಯಾದಿ ಷರತ್ತುಗಳನ್ನು ವಿಧಿಸಿದ್ದಾರೆ. ನಮಗೆ ಹಣ ಬೇಡ, ಸಾಮಾಜಿಕ ನ್ಯಾಯ ಬೇಕು. ಒಂದು ವೇಳೆ ಪೂಜಾಳನ್ನು ವಿವಾಹವಾದರೆ ನಾನೇ ಆತನಿಗೆ 50 ಲಕ್ಷ ರು. ಕೊಡುತ್ತೇನೆ, ಆತ ಮನೆ ಆಳಿಯನಾಗಿ ಬರಲಿ ಎಂದು ಸವಾಲು ಹಾಕಿದರು.
ಅಲ್ಲದೆ ಕರಾವಳಿಯಲ್ಲಿ ಹಿಂದೂ ಸಮಾಜದ ಒಗ್ಗಟ್ಟಿನ ಬಗ್ಗೆ ಮಾತನಾಡುವ ಮುಖಂಡರು ಇಂತಹ ಇಕ್ಕಟ್ಟಿನ ಸನ್ನಿವೇಶದಲ್ಲಿ ಸಿಲುಕಿರುವವರನ್ನು ಪಾರು ಮಾಡಲು ಬರದೇ ಇರುವುದು ಖೇದಕರ. ಪುತ್ತೂರಿನಲ್ಲಿ ಹಿಂದು ನಾಯಕ ಎನಿಸಿದ ಅರುಣ್ ಕುಮಾರ್ ಪುತ್ತಿಲ ಅವರು ಶ್ರೀನಿವಾಸ ದೇವರಿಗೆ ಕಲ್ಯಾಣ ಉತ್ಸವವನ್ನು ಅದ್ದೂರಿಯಾಗಿ ನೆರವೇರಿಸಿದ್ದಾರೆ. ಶ್ರೀನಿವಾಸ ದೇವರಿಗೆ ಯಾವಾಗಲೋ ಕಲ್ಯಾಣ ಆಗಿದೆ. ಈಗ ಆಗಬೇಕಾಗಿರುವುದು ಪೂಜಾಳಿಗೆ. ಅವಳಿಗೆ ಕೃಷ್ಣ ಜೆ.ರಾವ್ ಜೊತೆ ಕಲ್ಯಾಣ ಮಾಡಿಸುವ ಬಗ್ಗೆ ಪುತ್ತಿಲ ಮನಸ್ಸು ಮಾಡಲಿ ಎಂದು ಗೌರವಪೂರ್ವಕವಾಗಿ ಕೇಳಿಕೊಳ್ಳುತ್ತೇನೆ ಎಂದು ಪ್ರತಿಭಾ ಕುಳಾಯಿ ಹೇಳಿದ್ದಾರೆ.






