
ಪುತ್ತೂರು: ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನಲ್ಲಿ ಬಿಜೆಪಿ ಮುಖಂಡ ಜಗನ್ನಿವಾಸ್ ರಾವ್ ಅವರ ಪುತ್ರ ಕೃಷ್ಣ ಜೆ.ರಾವ್ ಎಂಬಾತ ಯುವತಿಯೊಬ್ಬಳಿಗೆ ಮದುವೆಯಾಗುವುದಾಗಿ ನಂಬಿಸಿ ಗರ್ಭಿಣಿಯಾದ ಬಳಿಕ ಮದುವೆಯಾಗಲು ನಿರಾಕರಿಸಿದ್ದು ಹೀಗಾಗಿ ಈತನ ವಿರುದ್ಧ ದಾಖಲಾಗಿದ್ದ ಪ್ರಕರಣದಲ್ಲಿ, ಡಿಎನ್ಎ ಪರೀಕ್ಷೆಯ ವರದಿ ಬಿಡುಗಡೆಯಾಗಿದೆ. ಮಗು ಆತನದ್ದೇ ಎಂಬುದು ಸ್ಪಷ್ಟವಾಗಿದೆ.
ಪುತ್ತೂರು ನ್ಯಾಯಾಧೀಶರ ಸಮ್ಮುಖದಲ್ಲಿ ಆರೋಪಿ ಕೃಷ್ಣ ಜೆ.ರಾವ್, ಸಂತ್ರಸ್ತೆ ಹಾಗೂ ಮಗುವಿನ ರಕ್ತ ಮಾದರಿಗಳನ್ನು ಸಂಗ್ರಹಿಸಿ ಬೆಂಗಳೂರಿನ ಪ್ರಯೋಗಾಲಯಕ್ಕೆ ಕಳುಹಿಸಲಾಗಿದ್ದು ಆರೋಪಿಯ ಕುಟುಂಬವೇ ಡಿಎನ್ಎ ಪರೀಕ್ಷೆ ನಡೆಸುವಂತೆ ಆಗ್ರಹಿಸಿತ್ತು. ಇದೀಗ ಬಂದಿರುವ ವರದಿ ಪಾಸಿಟಿವ್ ಆಗಿದ್ದು, ಕೃಷ್ಣ ಜೆ.ರಾವ್ನಿಂದಲೇ ಸಂತ್ರಸ್ತೆ ಗರ್ಭವತಿಯಾಗಿರುವುದು ದೃಢವಾಗಿದೆ.
ಆರೋಪಿಯನ್ನು ಕೂಡಲೇ ಸಂತ್ರಸ್ತೆಯೊಂದಿಗೆ ಮದುವೆ ಮಾಡಿಸಬೇಕು. ನಮಗೆ ಕಾನೂನು ಹೋರಾಟ ಬೇಡ, ಇಬ್ಬರು ಒಂದಾಗಿ ಬಾಳಬೇಕು ಎಂದು ಸಂತ್ರಸ್ತೆಯ ಕುಟುಂಬ ಬೇಡಿಕೆಯಿಟ್ಟಿದ್ದು ಈ ಹೋರಾಟದಲ್ಲಿ ವಿಶ್ವಕರ್ಮ ಮಹಾಸಭಾ ಅಧ್ಯಕ್ಷ ಕೆ.ಪಿ. ನಂಜುಂಡಿ ಬೆಂಬಲ ಸೂಚಿಸಿ, ಹಿಂದೂ ಮುಖಂಡರು ಮುಂದೆ ಬಂದು ಮದುವೆ ನೆರವೇರಿಸಬೇಕೆಂದು ಆಗ್ರಹಿಸಿದ್ದಾರೆ.






















































