
ಪುತ್ತೂರು: ಶಾಸಕ ಅಶೋಕ್ ಕುಮಾರ್ ರೈ ಸೋಮವಾರ ಸುದ್ಧಿಗೋಷ್ಠಿಯಲ್ಲಿ ಮಾತನಾಡಿ ಪುತ್ತೂರಿನಲ್ಲಿ 300 ಹಾಸಿಗೆಗಳ ಆಸ್ಪತ್ರೆಯನ್ನು ವೈದ್ಯಕೀಯ ಶಿಕ್ಷಣ ಇಲಾಖೆಯ ಮುಖಾಂತರ ಹೊಸ ಸ್ಥಳದಲ್ಲಿ ನಿರ್ಮಿಸಲು ಆರ್ಥಿಕ ಇಲಾಖೆ ಸಮ್ಮತಿಸಿದೆ. 2025-26ನೇ ಸಾಲಿನ ಆಯುವ್ಯಯ ಭಾಷಣದ ಕಂಡಿಕೆ-130ನ್ನು ಆರೋಗ್ಯ ಇಲಾಖೆ ಮತ್ತು ಕುಟುಂಬ ಕಲ್ಯಾಣ ಇಲಾಖೆಯಿಂದ ವೈದ್ಯಕೀಯ ಶಿಕ್ಷಣ ಇಲಾಖೆಗೆ ವರ್ಗಾಯಿಸುವಂತೆಯೂ ತಿಳಿಸಿದೆ ಎಂದು ಮಾಹಿತಿ ನೀಡಿದ್ದಾರೆ.
ಮೆಡಿಕಲ್ ಕಾಲೇಜು ನಿರ್ಮಾಣಕ್ಕೆ 1 ಸಾವಿರ ಕೋಟಿ ರು. ಬಜೆಟ್ ಅಂದಾಜಿಸಲಾಗಿದ್ದು, ಕಡತ ಆರ್ಥಿಕ ಇಲಾಖೆಯಲ್ಲಿ ಇದೆ. ಒಂದೂವರೆ ತಿಂಗಳ ಒಳಗಾಗಿ ಡಿಪಿಆರ್ ಆಗಿ 2 ತಿಂಗಳಲ್ಲಿ ಟೆಂಡರ್ ಪ್ರಕ್ರಿಯೆ ನಡೆಯಲಿದೆ, ಮುಂದಿನ ದಿನಗಳಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಶಿಲಾನ್ಯಾಸ ನೆರವೇರಿಸಲಿದ್ದಾರೆ.
ಮೊದಲನೆಯದಾಗಿ ಬನ್ನೂರಿನಲ್ಲಿ 40 ಎಕ್ರೆ ಜಾಗದಲ್ಲಿ ಮೆಡಿಕಲ್ ಕಾಲೇಜು ನಿರ್ಮಿಸಬೇಕು, 2ನೆಯದಾಗಿ ಆರೋಗ್ಯ ಇಲಾಖೆಯ ಕಡತವನ್ನು ತೆಗೆದು ಮೆಡಿಕಲ್ ಶಿಕ್ಷಣ ಇಲಾಖೆಗೆ ವರ್ಗಾವಣೆ ಮಾಡಬೇಕು, 3ನೆಯದಾಗಿ 300 ಬೆಡ್ ಆಸ್ಪತ್ರೆ ನಿರ್ಮಾಣ ಆಗಲೇಬೇಕು ಎಂದು ಬೇಡಿಕೆ ಮುಂದಿಟ್ಟಿದ್ದು, ಈ ಎಲ್ಲ ಬೇಡಿಕೆಗಳನ್ನು ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಈಡೇರಿಸಿದ್ದಾರೆ ಎಂದು ಹೇಳಿದರು.
ಪುತ್ತೂರು ಮೆಡಿಕಲ್ ಕಾಲೇಜು ಮಂಜೂರಾತಿಗೆ ಸರಕಾರದಿಂದ ಅಧಿಕೃತ ಆದೇಶ ಪ್ರಕಟವಾದ ಸುದ್ದಿ ಸಿಗುತ್ತಿದ್ದಂತೆಯೇ ಶಾಸಕ ಅಶೋಕ್ ರೈ ಕೋಡಿಂಬಾಡಿಯ ಶ್ರೀ ಮಹಿಷಮರ್ದಿನಿ ದೇವಸ್ಥಾನ, ಪುತ್ತೂರಿನ ಶ್ರೀ ಮಹಾಲಿಮಗೇಶ್ವರ ದೇವಸ್ಥಾನ , ಪುತ್ತೂರು ಕೇಂದ್ರ ಜುಮಾ ಮಸೀದಿ ಹಾಗೂ ಪುತ್ತೂರು ಮಾಯಿದೆದೇವುಸ್ ಚರ್ಚ್‌ಗೆ ತೆರಳಿ ಪ್ರಾರ್ಥನೆ ಸಲ್ಲಿಸಿದರು.





