
ಬೆಂಗಳೂರು: ಶಿಕ್ಷಣ ಸಚಿವ ಮಧು ಬಂಗಾರಪ್ಪ ಅವರು ಪ್ರೌಢಶಾಲೆ ಮತ್ತು ಪಿಯು ಕಾಲೇಜು ವಿದ್ಯಾರ್ಥಿಗಳ ಪಾಸಿಂಗ್ ಮಾರ್ಕ್ಸ್ ಅನ್ನು 33ಕ್ಕೆ ಇಳಿಸಿ ಆದೇಶ ಹೊರಡಿಸಿದ್ದು ಆದರೆ ಇದೀಗ ಅವರ ಪ್ರಯತ್ನಕ್ಕೆ ಸಭಾಪತಿ ಬಸವರಾಜ್ ಹೊರಟ್ಟಿ ತಡೆಯಾಗಿದ್ದಾರೆ.
ಶಿಕ್ಷಣ ಸಚಿವ ಮಧು ಬಂಗಾರಪ್ಪಗೆ ಪತ್ರ ಬರೆದ ಸಭಾಪತಿ ಬಸವರಾಜ್ ಹೊರಟ್ಟಿ, ಅವರ ನಿರ್ಧಾರಕ್ಕೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದು ಕನಿಷ್ಠ 33 ಅಂಕಗಳನ್ನು ತೆಗೆದುಕೊಂಡರೆ ಅವರನ್ನು ಉತ್ತೀರ್ಣಗೊಳಿಸುತ್ತೇವೆ ಎಂದು ಹೇಳಿಕೆ ನೀಡಿರುತ್ತೀರಿ. ಇದು ಬಹಳ ಖೇದಕರ ಸಂಗತಿ ಎಂದು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಸ್ಪರ್ಧಾತ್ಮಕ ಜಗತ್ತಿನಲ್ಲಿ ಲಿಖಿತ ಪರೀಕ್ಷೆ ವಿಶೇಷ ಘಟ್ಟ. ಅಂಕಗಳನ್ನು ಗಳಿಸುವುದು ಒಂದು ಮುಖ್ಯ ಉದ್ದೇಶವಾಗಿದ್ದರೂ ಸಹ, ವಿದ್ಯಾರ್ಥಿ ಜೀವನದಲ್ಲಿ ಏಕಾಗ್ರತೆ, ಧೈರ್ಯ, ಜ್ಞಾಪಕ ಶಕ್ತಿ, ಕಲಿಕೆಯ ನೈಪುಣ್ಯತೆ, ವಿಷಯಗಳ ಮನನ ಮಾಡುವುದು, ವಿದ್ಯಾರ್ಥಿಗಳ ಸರ್ವಾಂಗೀಣ ಅಭಿವೃದ್ಧಿ, ಅನೇಕ ವ್ಯಕ್ತಿತ್ವ ವಿಕಸನಕ್ಕೆ ಪೂರಕವಾಗಿದೆ. ಹಿಂದೆ ನಿಗದಿ ಮಾಡಿರುವಂತೆ ಶೇ. 35 ಅಂಕಗಳು ಸಮಂಜಸವಾಗಿತ್ತು. 35 ಅಂಕ ದೀರ್ಘಕಾಲದಿಂದ ಸಾಬೀತಾದ ಮಾನದಂಡವಾಗಿದೆ. ಇಂಥ ಮಾನದಂಡವನ್ನು ಎಕಾಏಕಿ 33 ಅಂಕಗಳಿಗೆ ಕಡಿತಗೊಳಿಸುವಂತಹ ನಿರ್ಧಾರವು ಯಾವ ಕೋನದಿಂದಲೂ ಸಹ ಸರಿಯಲ್ಲ. ಈ ರೀತಿ ನಿರ್ಧಾರಗಳು ವಿದ್ಯಾರ್ಥಿಗಳ ಸ್ಪರ್ಧಾತ್ಮಕ ಮನೋಭಾವಕ್ಕೆ ಪೆಟ್ಟು ಬೀಳುತ್ತದೆ. ನಿರ್ದಿಷ್ಟ ಬ್ಯಾಚಿನ ಅಭ್ಯರ್ಥಿಗಳು ಶೇ. 33 ರ ಬ್ಯಾಚಿಗೆ ಸೇರಿದವರು ಎಂದು ಗೇಲಿ ಮಾಡುವಂತಹ ಪ್ರಸಂಗ ಉಂಟಾಗುತ್ತದೆ. ಇದು ಕೀಳರಿಮೆಯ ಅನುಭವ ಉಂಟಾಗುವುದಕ್ಕೆ ಎಡೆ ಮಾಡಿದಂತಾಗುತ್ತದೆ. ಈ ನಿರ್ಧಾರ ಕೈಬಿಟ್ಟು ಈ ಮುಂಚೆ ಇದ್ದ ಹಾಗೆ ಕನಿಷ್ಠ 35 ಅಂಕ ನಿಗದಿ ಮಾಡಿ.
ಪಾಸಿಂಗ್ ಮಾರ್ಕ್ಸ್ ಅನ್ನು ಕಡಿಮೆ ಮಾಡುವ ಮೊದಲು ಎಲ್ಲಾ ಪ್ರಾಥಮಿಕ, ಪ್ರೌಢಶಾಲೆ ಮತ್ತು ಪದವಿಪೂರ್ವ ಕಾಲೇಜುಗಳಲ್ಲಿ ಖಾಲಿ ಇರುವ ಶಿಕ್ಷಕರ ಹುದ್ದೆಗಳನ್ನು ತುಂಬಿ. ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಅನುಕೂಲ ಮಾಡಿಕೊಡಿ. ಎಲ್ಲಾ ಶಾಲಾ ಹಾಗೂ ಕಾಲೇಜುಗಳಲ್ಲಿ ಅಗತ್ಯವಿರುವ ಮೂಲಭೂತ ಸೌಲಭ್ಯಗಳನ್ನು ಒದಗಿಸಿ ಕೊಡಿ. ಶಿಕ್ಷಕರಿಗೂ ಹಾಗೂ ವಿದ್ಯಾರ್ಥಿಗಳಿಗೂ ಅನುಕೂಲ ಮಾಡಿಕೊಡುವತ್ತ ಗಮನ ಹರಿಸಿ ಎಂದು ಪತ್ರದಲ್ಲಿ ಬರೆದಿದ್ದಾರೆ.



















































