
ನವದೆಹಲಿ: ಮಂಗಳವಾರ ಮಧ್ಯಾಹ್ನ ಜಮ್ಮು ಮತ್ತು ಕಾಶ್ಮೀರದ ಪಹಲ್ಗಾಮ್‌ನ ಬೈಸರನ್ ಕಣಿವೆಯಲ್ಲಿ ಹಿಂದೂಗಳ ನರಮೇಧ ಮಾಡಿದ ಕೃತ್ಯದ ಮಾಸ್ಟರ್ ಮೈಂಡ್ ಸೈಫುಲ್ಲಾ ಖಾಲಿದ್ ಎನ್ನುವುದು ಖಚಿತವಾಗಿದೆ.
ಈ ದಾಳಿಯ ಹೊಣೆಯನ್ನು ಪಾಕಿಸ್ತಾನ ಮೂಲದ ಲಷ್ಕರ್-ಎ-ತೊಯ್ಬಾ (ಎಲ್‌ಇಟಿ) ಭಯೋತ್ಪಾದಕ ಸಂಘಟನೆಯ ಜೊತೆ ಗುರುತಿಸಿಕೊಂಡಿರುವ ದಿ ರೆಸಿಸ್ಟೆನ್ಸ್ ಫ್ರಂಟ್ (TRF) ಹೊತ್ತುಕೊಂಡಿದ್ದು ಲಷ್ಕರ್ ಸಂಘಟನೆಯ ಟಾಪ್ ಕಮಾಂಡರ್ ಆಗಿರುವ ಸೈಫುಲ್ಲಾ ಮತ್ತು ಪಾಕ್ ಆಕ್ರಮಿತ ಕಾಶ್ಮೀರದ ಇಬ್ಬರು ಈ ಕೃತ್ಯದ ಹಿಂದೆ ಇರುವುದಾಗಿ ಮೂಲಗಳು ತಿಳಿಸಿವೆ ಎಂದು ತಿಳಿದುಬಂದಿದೆ.
ಲಷ್ಕರ್-ಎ-ತೈಬಾ ಉಪ ಮುಖ್ಯಸ್ಥನಾಗಿರುವ ಸೈಫುಲ್ಲಾ ಖಾಲಿದ್ ಮುಂಬೈ ದಾಳಿ ಸೂತ್ರಧಾರ ಹಫೀಜ್ ಸಯೀದ್ ಆಪ್ತ ವ್ಯಕ್ತಿಯಾಗಿದ್ದು ಯಾವಾಗಲೂ ಐಷಾರಾಮಿ ಕಾರುಗಳಲ್ಲಿ ಪ್ರಯಾಣಿಸುವ ಈತನಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಹಿಡಿದಿರುವ ಲಷ್ಕರ್ ಉಗ್ರರು ಭದ್ರತೆ ನೀಡುತ್ತಾರೆ.
ಎರಡು ತಿಂಗಳ ಹಿಂದೆ ಸೈಫುಲ್ಲಾ ಖಾಲಿದ್ ಪಾಕಿಸ್ತಾನದ ಪಂಜಾಬ್‌ನ ಕಂಗನ್‌ಪುರಕ್ಕೆ ಭೇಟಿ ನೀಡಿದ್ದು ಪಾಕಿಸ್ತಾನ ಸೇನೆಯ ಕರ್ನಲ್ ಜಾಹಿದ್ ಜರೀನ್ ಭಾರತದ ವಿರುದ್ಧ ಜಿಹಾದಿ ಭಾಷಣ ಮಾಡಲು ಈತನನ್ನು ಕರೆಸಿದ್ದ. ಭಾಷಣದಲ್ಲಿ ಪಾಕಿಸ್ತಾನ ಸೇನೆಯನ್ನು ಭಾರತದ ವಿರುದ್ಧದ ಕೃತ್ಯಕ್ಕೆ ಪ್ರಚೋದಿಸಿದ್ದನು. ಈತನ ಭಾಷಣ ಕೇಳಲು ಹೆಚ್ಚಿನ ಸಂಖ್ಯೆಯಲ್ಲಿ ಶಸ್ತ್ರಾಸ್ತ್ರ ಹೊಂದಿದ್ದ ಭಯೋತ್ಪಾದಕರು ಸೇರಿದ್ದರು.
ಗುಪ್ತಚರ ವರದಿಯ ಪ್ರಕಾರ, ಕಳೆದ ವರ್ಷ ಅಬೋಟಾಬಾದ್ ಕಾಡುಗಳಲ್ಲಿ ಲಷ್ಕರ್-ಎ-ತೈಬಾದ ರಾಜಕೀಯ ವಿಭಾಗ ಪಿಎಂಎಂಎಲ್ ಮತ್ತು ಎಸ್‌ಎಂಎಲ್ ಆಯೋಜಿಸಿದ ಭಯೋತ್ಪಾದಕ ಶಿಬಿರದಲ್ಲಿ ನೂರಾರು ಪಾಕಿಸ್ತಾನಿ ಹುಡುಗರು ಭಾಗವಹಿಸಿದ್ದು ಈ ಕಾರ್ಯಕ್ರಮದಲ್ಲೂ ಸೈಫುಲ್ಲಾ ಖಾಲಿದ್ ಭಾಗವಹಿಸಿದ್ದ. ಈ ಶಿಬಿರದಿಂದ ಭಯೋತ್ಪಾದಕ ದಾಳಿಗಳಿಗೆ ಹುಡುಗರನ್ನು ಆಯ್ಕೆ ಮಾಡಲಾಗಿತ್ತು. ಈ ಹುಡುಗರಿಗೆ ಭಯೋತ್ಪಾದಕ ತರಬೇತಿ ನೀಡಿದ ನಂತರ ಅವರನ್ನು ಪಾಕಿಸ್ತಾನಿ ಸೇನೆಯ ಸಹಾಯದಿಂದ ಭಾರತದ ಒಳಗೆ ಕಳುಹಿಸಲಾಗಿದೆ ಎಂದು ವರದಿಯಾಗಿದೆ.
ಪಾಕಿಸ್ತಾನದ ಖೈಬರ್ ಪಖ್ತುನ್ಖ್ವಾದಲ್ಲಿ ನಡೆದ ಕಾರ್ಯಕ್ರಮದಲ್ಲಿ ಈತ ಭಾರತದ ವಿರುದ್ಧ ವಿಷಕಾರಿದ್ದ. ಇಂದು ಫೆಬ್ರವರಿ 2, 2025. ಕಾಶ್ಮೀರವನ್ನು ವಶಪಡಿಸಿಕೊಳ್ಳಲು ನಾವು ನಮ್ಮ ಕೈಲಾದಷ್ಟು ಪ್ರಯತ್ನಿಸುತ್ತೇವೆ. ಮುಂಬರುವ ದಿನಗಳಲ್ಲಿ ನಮ್ಮ ಮುಜಾಹಿದ್ದೀನ್ ದಾಳಿ ತೀವ್ರಗೊಳ್ಳಲಿದೆ. ಫೆಬ್ರವರಿ 2, 2026 ರೊಳಗೆ ಕಾಶ್ಮೀರ ಸ್ವತಂತ್ರವಾಗಲಿದೆ ಎಂದು ನಾವು ಭಾವಿಸುತ್ತೇವೆ ಎಂದು ಭರವಸೆ ವ್ಯಕ್ತಪಡಿಸಿದ್ದನು.




