
ಶ್ರೀನಗರ: ಮಂಗಳವಾರ ಮಧ್ಯಾಹ್ನ ಜಮ್ಮು ಕಾಶ್ಮೀರದ ಅನಂತ್ ನಾಗ್ ಜಿಲ್ಲೆಯ ಪಹಲ್ಗಾಮ್ ಪಟ್ಟಣದ ಬಳಿಯ ಜನಪ್ರಿಯ ಪ್ರವಾಸಿ ತಾಣದ ಮೇಲೆ ಭಯೋತ್ಪಾದಕರು ಗುಂಡು ಹಾರಿಸಿ 26 ಜನರನ್ನು ಹತ್ಯೆ ಮಾಡಿದ್ದು ಈ ಭೀಕರ ಭಯೋತ್ಪಾದಕ ದಾಳಿಯ ಕೆಲವೇ ಗಂಟೆಗಳಲ್ಲಿ, ಶಂಕಿತ ಭಯೋತ್ಪಾದಕನ ಮೊದಲ ಫೋಟೋ ಬಹಿರಂಗಗೊಂಡಿದೆ.
ವೀಡಿಯೊವೊಂದರಲ್ಲಿ ತೆಗೆದ ಸ್ಕ್ರೀನ್‌ಶಾಟ್‌ನಲ್ಲಿ, ಭಯೋತ್ಪಾದಕನೆಂದು ಶಂಕಿಸಲಾದ ವ್ಯಕ್ತಿಯೊಬ್ಬ ಕುರ್ತಾದಲ್ಲಿ ಎಕೆ ಸರಣಿಯ ಅಸಾಲ್ಟ್ ರೈಫಲ್‌ನೊಂದಿಗೆ ಕಾಣಿಸಿಕೊಂಡಿದ್ದು ಭದ್ರತಾ ಸಂಸ್ಥೆಗಳು ಪಹಲ್ಗಾಮ್ ಭಯೋತ್ಪಾದಕ ದಾಳಿಯಲ್ಲಿ ಭಾಗಿಯಾಗಿರುವ ಭಯೋತ್ಪಾದಕರಲ್ಲಿ ಇವನೂ ಒಬ್ಬ ಎಂದು ಹೇಳಿದ್ದಾರೆ.
ಬಲಿಯಾದ 26 ಮಂದಿಯಲ್ಲಿ ಯುಎಇ ಮತ್ತು ನೇಪಾಳದ ಇಬ್ಬರು ವಿದೇಶಿಯರು ಮತ್ತು ಇಬ್ಬರು ಸ್ಥಳೀಯರು ಸೇರಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಈ ದಾಳಿಯ ಬಳಿಕ ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಸೌದಿ ಅರೇಬಿಯಾ ಭೇಟಿಯನ್ನು ಅರ್ಧದಲ್ಲಿಯೇ ಕಡಿತಗೊಳಿಸಿ ಇಂದು ಬೆಳಗ್ಗೆ ನವದೆಹಲಿಗೆ ಆಗಮಿಸಿದ್ದಾರೆ. ಬಂದ ತಕ್ಷಣ, ಪ್ರಧಾನಿ ಮೋದಿ ಅವರು ದೆಹಲಿ ವಿಮಾನ ನಿಲ್ದಾಣದಲ್ಲಿ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್ ದೋವಲ್, ವಿದೇಶಾಂಗ ಸಚಿವ ಎಸ್ ಜೈಶಂಕರ್ ಮತ್ತು ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಶ್ರಿ ಅವರೊಂದಿಗೆ ಪರಿಸ್ಥಿತಿಯ ಕುರಿತು ಚರ್ಚಿಸಲು ಸಂಕ್ಷಿಪ್ತ ಸಭೆ ನಡೆಸಿದರು.
ಪುರುಷರ ಪ್ಯಾಂಟ್ ಬಿಚ್ಚಿಸಿ ಅವರು ಹಿಂದೂಗಳೋ ಇಲ್ಲವೋ ಎಂದು ಖಚಿತಪಡಿಸಿಕೊಂಡು ಕೇವಲ ಹಿಂದೂಗಳನ್ನು ಮಾತ್ರ ಟಾರ್ಗೆಟ್ ಮಾಡಲಾಗಿತ್ತು. ಶಸ್ತ್ರಾಸ್ತ್ರಗಳನ್ನು ಹಿಡಿದು ಪಠಾಣ್ ಸೂಟ್ ಧರಿಸಿರುವ ವ್ಯಕ್ತಿಯೊಬ್ಬ ವಿಡಿಯೋದಲ್ಲಿ ಸೆರೆಯಾಗಿದ್ದಾನೆ.