
ಬೆಂಗಳೂರು: ಹೈಕೋರ್ಟ್ ಮಹತ್ವದ ಆದೇಶವೊಂದನ್ನು ಹೊರಡಿಸಿದ್ದು ಅದೇನೆಂದರೆ ಪರವಾನಗಿ ಹೊಂದಿರದ ಚಾಲಕನಿಂದ ಅಪಘಾತವಾದರೆ ವಾಹನ ಮಾಲೀಕರೇ ಸಂತ್ರಸ್ತರಿಗೆ ಪರಿಹಾರ ನೀಡಬೇಕಾಗುತ್ತದೆ ಎಂದು ಅಭಿಪ್ರಾಯ ವ್ಯಕ್ತಪಡಿಸಿದೆ.
ಶಾಲಾ ವಾಹನವೊಂದು ನಿಯಂತ್ರಣ ಕಳೆದುಕೊಂಡು ನದಿಗೆ ಬಿದ್ದ ಪ್ರಕರಣದಲ್ಲಿ ಚಾಲಕ ಪರವಾನಗಿ ಹೊಂದಿರದ ಕಾರಣ ಮೃತ ಚಾಲಕನ ಕುಟುಂಬದವರಿಗೆ ಪರಿಹಾರ ಪಾವತಿಸುವಂತೆ ವಾಹನ ಮಾಲೀಕರೂ ಆದ ಶಾಲಾ ಮುಖ್ಯಶಿಕ್ಷಕನಿಗೆ ಕೋರ್ಟ್ ನಿರ್ದೇಶನ ನೀಡಿದೆ.
ಈ ಪ್ರಕರಣದ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಮನ್ಮಥರಾವ್ ಅವರ ಪೀಠವು ವಾಹನಗಳ ಮಾಲೀಕರು ಚಾಲಕರನ್ನು ನೇಮಿಸಿಕೊಳ್ಳುವಾಗ, ಅವರು ಮಾನ್ಯತೆ ಹೊಂದಿರುವ ಚಾಲನಾ ಪರವಾನಗಿ ಹೊಂದಿದ್ದಾರೆಯೇ ಎಂಬುದನ್ನು ಖಾತರಿಪಡಿಸಿಕೊಂಡು ಉದ್ಯೋಗ ನೀಡಬೇಕು. ಪರವಾನಗಿ ಹೊಂದಿರದ ಚಾಲಕನನ್ನು ಉದ್ಯೋಗಕ್ಕೆ ಸೇರಿಸಿಕೊಂಡರೆ ಅದು ವಿಮಾ ಪಾಲಿಸಿಯ ಷರತ್ತಿನ ಉಲ್ಲಂಘನೆ ಆಗಲಿದೆ. ಒಂದು ವೇಳೆ ಆ ವಾಹನ ಅಪಘಾತಕ್ಕೊಳಗಾದರೆ ಸಂತ್ರಸ್ತರಿಗೆ ವಾಹನ ಮಾಲೀಕರೇ ಪರಿಹಾರ ಕೊಡಬೇಕಾಗುತ್ತದೆ ಎಂದು ತಿಳಿಸಿದೆ.
ಪ್ರಕರಣದ ಹಿನ್ನೆಲೆ:
ಬುದ್ರುದ್ದೀನ್ ಎಂಬುವರು ಬಲ್ಮಿ ಪ್ರಾಥಮಿಕ ಶಾಲೆಯ ಬಸ್ ಚಾಲಕನಾಗಿದ್ದು ಶಾಲೆ ಮುಖ್ಯ ಶಿಕ್ಷಕರೇ ಬಸ್ ಮಾಲೀಕರಾಗಿದ್ದರು. 2008ರ ಆ.14ರಂದು ಬದ್ರುದ್ದೀನ್ ಶಾಲಾ ಮಕ್ಕಳನ್ನು ಕರೆತರಲು ಬಸ್‌ನಲ್ಲಿ ತೆರಳುತ್ತಿದ್ದರು. ಭಾರೀ ಮಳೆಯಿಂದ ಉಂಟಾದ ಪ್ರವಾಹ ಸಂಪೂರ್ಣ ರಸ್ತೆಯನ್ನು ಆವರಿಸಿದ್ದು ಈ ವೇಳೆ ನಿಯಂತ್ರಣ ಕಳೆದುಕೊಂಡು ಬಸ್ ಫಲ್ಗುಣಿ ನದಿಗೆ ಬಿದ್ದ ಪರಿಣಾಮ ನೀರಿನಲ್ಲಿ ಮುಳುಗಿ ಚಾಲಕ ಬದ್ರುದ್ದೀನ್ ಸಾವಿಗೀಡಾಗಿದ್ದರು. ಹೀಗಾಗಿ ಮೃತನ ಪೋಷಕರು, ಪತ್ನಿ-ಮಕ್ಕಳು ಉದ್ಯೋಗ ನಿರ್ವಹಣೆ ಸಮಯದಲ್ಲಿ ಸಾವು ಸಂಭವಿಸಿದ ಹಿನ್ನೆಲೆಯಲ್ಲಿ 13 ಲಕ್ಷ ರು. ಅನ್ನು ವಾರ್ಷಿಕ ಶೇ.12ರಷ್ಟು ಬಡ್ಡಿದರದಲ್ಲಿ ಪರಿಹಾರವಾಗಿ ಪಾವತಿಸಲು ಬಸ್ ಮಾಲೀಕರಾದ ಶಾಲೆ ಮುಖ್ಯಶಿಕ್ಷಕ ಮತ್ತು ಬಸ್‌ಗೆ ವಿಮಾ ಪಾಲಿಸಿ ಕಲ್ಪಿಸಿರುವ ಕಂಪನಿಗೆ ನಿರ್ದೇಶಿಸುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು. ಇದರ ವಿಚಾರಣೆ ನಡೆಸಿದ ಹೈಕೋರ್ಟ್ ಬದ್ರುದ್ದೀನ್ ಕುಟುಂಬದವರಿಗೆ ಪರಿಹಾರ ಪಾವತಿಸುವ ಹೊಣೆಯನ್ನು ಶಾಲಾ ಮುಖ್ಯೋಪಾಧ್ಯಾಯರ ಹೆಗಲಿಗೆ ಹೊರಿಸಿ ಆದೇಶ ಹೊರಡಿಸಿದೆ.



















