
ಮಂಗಳೂರು: ಈ ವರ್ಷ ವೈದ್ಯಕೀಯ ಪ್ರವೇಶಕ್ಕಾಗಿ ನಡೆಯುವ ನೀಟ್ ಪರೀಕ್ಷೆಗೆ ಅರ್ಜಿ ಸಲ್ಲಿಸಲು ವಿದ್ಯಾರ್ಥಿಗಳು ತಮ್ಮ ಆಧಾರ್ ಕಾರ್ಡ್ ಅನ್ನು ಕಡ್ಡಾಯವಾಗಿ ಅಪ್ಡೇಟ್ ಮಾಡಿಕೊಂಡಿರಬೇಕೆಂದು ನ್ಯಾಷನಲ್ ಟೆಸ್ಟಿಂಗ್ ಏಜೆನ್ಸಿ (ಎನ್ಟಿಎ) ಸ್ಪಷ್ಟ ಸೂಚನೆ ನೀಡಿದೆ. ಇಲ್ಲವಾದಲ್ಲಿ ನೀಟ್ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ ಎಂದು ಎಚ್ಚರಿಸಲಾಗಿದೆ.
ಇತ್ತೀಚೆಗೆ ನಡೆದ ಜೆಇಇ ಮೇನ್ ಪರೀಕ್ಷೆಯ ಅರ್ಜಿಗಳಲ್ಲಿ ಹಲವು ತಿರಸ್ಕೃತವಾಗಿದ್ದು, ಅದರ ಪ್ರಮುಖ ಕಾರಣವಾಗಿ ಅಭ್ಯರ್ಥಿಗಳ ಆಧಾರ್ ವಿವರಗಳು ಅಪ್ಡೇಟ್ ಆಗಿಲ್ಲದಿರುವುದು ಕಂಡುಬಂದಿತ್ತು. ಕೆಲ ರಾಜ್ಯಗಳಲ್ಲಿ ಇದರಿಂದ ಅಕ್ರಮಗಳಿಗೂ ಅವಕಾಶ ದೊರೆತ ಹಿನ್ನೆಲೆಯಲ್ಲಿ ಎಚ್ಚೆತ್ತಿರುವ ಎನ್ಟಿಎ, ನೀಟ್ ಅರ್ಜಿ ಪ್ರಕ್ರಿಯೆ ಆರಂಭಕ್ಕೂ ಮುನ್ನವೇ ಪಿಯು ವಿದ್ಯಾರ್ಥಿಗಳು ಆಧಾರ್ ಅಪ್ಡೇಟ್ ಮಾಡಿಕೊಂಡು ಸಿದ್ಧರಾಗಿರಬೇಕೆಂದು ಸೂಚಿಸಿದೆ.
ನೀಟ್ ಪರೀಕ್ಷೆಗೆ ಹಾಜರಾಗುವ ವಿದ್ಯಾರ್ಥಿಗಳ ಆಧಾರ್ ಕಾರ್ಡ್ನಲ್ಲಿರುವ ಹೆಸರು, ಜನ್ಮ ದಿನಾಂಕ, ಲಿಂಗ, ಭಾವಚಿತ್ರ ಹಾಗೂ ವಿಳಾಸದ ವಿವರಗಳು ನಿಖರವಾಗಿದ್ದು, ಅಂಕಪಟ್ಟಿ ಹಾಗೂ ಇತರ ಅಧಿಕೃತ ದಾಖಲೆಗಳೊಂದಿಗೆ ಹೊಂದಿಕೆಯಾಗಿರಬೇಕು ಎಂದು ಎನ್ಟಿಎ ತಿಳಿಸಿದೆ. ಇದರ ಜೊತೆಗೆ ಯುಡಿಐಡಿಎಐ ಸಂಬಂಧಿತ ದಾಖಲೆಗಳು, ಎಸ್ಸಿ, ಎಸ್ಟಿ, ಒಬಿಸಿ ಸೇರಿದಂತೆ ಇತರೆ ಮೀಸಲಾತಿ ಪ್ರಮಾಣಪತ್ರಗಳನ್ನೂ ಅಪ್ಡೇಟ್ ಮಾಡಿಕೊಳ್ಳುವುದು ಅಗತ್ಯವಾಗಿದೆ. ಅರ್ಜಿ ಸಲ್ಲಿಸುವ ವೇಳೆ ಈ ದಾಖಲೆಗಳಲ್ಲಿ ಯಾವುದಾದರೂ ಅಪ್ಡೇಟ್ ಆಗಿಲ್ಲದಿದ್ದರೆ ಅರ್ಜಿ ತಿರಸ್ಕೃತವಾಗುವ ಸಾಧ್ಯತೆ ಇದೆ ಎಂಬ ಮಾಹಿತಿಯನ್ನು ಈಗಾಗಲೇ ಶಾಲೆಗಳ ಮೂಲಕ ವಿದ್ಯಾರ್ಥಿಗಳಿಗೆ ನೀಡಲಾಗಿದೆ.



















