22.5 C
Udupi
Wednesday, December 31, 2025
spot_img
spot_img
HomeBlogನಿರ್ಮಲ ಮನದ ವಿಮಲ ಮೇಡಂ, ಇನ್ನೂ ನೆನಪು ಮಾತ್ರ

ನಿರ್ಮಲ ಮನದ ವಿಮಲ ಮೇಡಂ, ಇನ್ನೂ ನೆನಪು ಮಾತ್ರ

ಅಳಿಯುವುದು ಕಾಯ – ಉಳಿಯುವುದು ಕಾಯಕ

ಸಂತೋಷ್ ನೆಲ್ಲಿಕಾರು

ಬಾಲ್ಯದಲ್ಲಿ ಶಾಲೆಯ ಸಭಾಂಗಣವೇ ನಮ್ಮ ತರಗತಿಗಳು. ಕ್ಲಾಸಿನಿಂದ ಕೇಳಿಬರುತ್ತಿದ್ದ ವರ್ಣಮಾಲೆಗಳ ಅಕ್ಷರ ಓದುವಿಕೆಯ ಬೊಬ್ಬೆಯ ಸ್ಪರ್ಧೆಗಳು. ಕಾಗುಣಿತದ ಕೂಗಾಟಗಳು. ಹಾಡು-ಕುಣಿತದ ಕೇಕೆಗಳು. ಹುಡುಗಾಟದ ಗಲಾಟೆ ಘರ್ಷಣೆಯ ಚೀರಾಟಗಳು. ದಂಡ ಹಿಡಿದು ನಾಲ್ಕು ಬಾರಿಸಿ, ಏರು ದನಿಯಲ್ಲಿ ಜೋರುಮಾಡಿ ಎಲ್ಲರನ್ನು ನಿಶ್ಯಬ್ಧಗೊಳಿಸಿ, ಜೀವನದಲ್ಲಿ ಶಿಸ್ತಿನ ದಾರಿ ತೋರಿದಾಕೆ ಇವಳು. ನಮ್ಮ ಅಬ್ಬರಕ್ಕೆ ಬ್ರೇಕ್ ಹಾಕಿ ನಡವಳಿಕೆಯಲ್ಲಿ ಬದಲಾವಣೆ ತಂದ ಜಗನ್ಮಾತೆ ಇವಳು.

ಅಂದು ಬಿಸಿಯೂಟದ ಯೋಜನೆಯಿರಲಿಲ್ಲ. ಮನೆಯಲ್ಲಿ ಬುತ್ತಿ ಕಟ್ಟಿಕೊಟ್ಟಾಗ ಅದು ಮರೆತು ಶಾಲೆಗೆ ಬಂದಾಗ, ನಮಗೆ ತಾನು ತಂದ ಬುತ್ತಿಯಿಂದಲೇ ತುತ್ತನ್ನು ಹಂಚಿ ತಿನ್ನುತ್ತಿದ್ದ ಸರ್ವ ಪ್ರಿಯಮನಸು ಈಕೆಯದು. ಸ್ವಚ್ಛತೆಗೆ ಮೊದಲ ಆಧ್ಯತೆ ನೀಡುತ್ತಿದ್ದ ಇವರು ಪ್ರತಿಯೊಬ್ಬರ ಉಗುರು ನೋಡಿ ಸ್ವಚ್ಛವಿಲ್ಲದಿದ್ದರೆ ಅದನ್ನು ತೆಗೆದು ಸ್ವಚ್ಛ ಮಾಡಿ, ಹಲ್ಲು ಕಿತ್ತು ಹೊಸ ಹಲ್ಲಿಗೆ ದಾರಿ ಮಾಡಿಕೊಡುತ್ತಿದವಳು. ಇಂತ ಮಾತೃಹೃದಯದ ನಮ್ಮೆಲ್ಲರ ಎರಡನೇ ಅಮ್ಮನಂತಿದ್ದ ವಿಮಲಮ್ಮ ಇನ್ನು ನೆನಪೂ ಮಾತ್ರ ಎಂಬುದು ನಂಬಲಸಾಧ್ಯ!

ನಮ್ಮ ಊರಿನ ಪ್ರಾಥಮಿಕ ಶಾಲೆಯ ಇತಿಹಾಸದಲ್ಲಿ ಮನೆಮನಗಳಲ್ಲಿ 80ರ ದಶಕದಿಂದ ಇತ್ತೀಚೆಗಿನವರೆಗೂ ಸ್ಮರಿಸುತ್ತಿದ್ದ ಒಂದು ಹೆಸರೇ ವಿಮಲ ಮೇಡಂ. ಅವರು ಇನ್ನಿಲ್ಲವೆಂದಾಗ ಮನಸು ಭಾರವಾಗುತ್ತಿದೆ. ಮನೆಯ ಸದಸ್ಯನಂತೆ ಬಾವುಕರಾಗುತ್ತಿದ್ದೇವೆ. ನಮ್ಮ ನೆನಪಿನ ಬುತ್ತಿಯಲ್ಲಿ ಅವರ ಚಲನವಲಗಳು ಹಾಗೇ ಹಾದು ಹೋಗುತ್ತಿವೆ.

ಇವತ್ತಿಗೂ ನೆನಪಿರುವಂತೆ, ನಾನು ತರಗತಿಯಲ್ಲಿ ಯಾವುದೋ ಒಂದು ತಪ್ಪು ಮಾಡಿದಾಗ ಕೋಲು ಹಿಡಿದು ಬಾರಿಸಲು ಮೇಡಂ ಬಂದಾಗ ಸಭಾಂಗಣದಲ್ಲಿದ್ದ ಬಾಗಿಲಿನಿಂದ ಬಾಗಿಲಿಗೆ ತಪ್ಪಿಸಿಕೊಂಡು ಓಡಿ ಹೋಗಿದ್ದುದು ಇಂದಿಗೂ ಹಸಿಯಾಗಿ ಉಳಿದಿದೆ. ಮುಂದೇನಾಯಿತೋ ಎಂಬುದನ್ನು ಮರೆತಿರುವೆ.

ಶಾಲೆಯ ಟೀಚರ್ ಆಗಿ ಕೇವಲ ಶಾಲೆಗೆ ಸೀಮಿತರಾಗಿರದೆ, ಊರಿನ ಪ್ರತೀ ಕುಟುಂಬದ ಹಿನ್ನಲೆ, ಅವರ ಪರಿಸ್ಥಿತಿ ಅರ್ಥಮಾಡಿಕೊಂಡು ಆತ್ಮೀಯವಾದ ಅನುಬಂಧವನ್ನು ಇಂದಿಗೂ ಇಟ್ಟುಕೊಂಡಿದ್ದವರು ನಮ್ಮ ವಿಮಲ ಮೇಡಂ ಎಂಬುದು ಎಲ್ಲರಿಗೂ ತಿಳಿದಿದೆ. ಎಲ್ಲಿ ಸಿಕ್ಕಿದರೂ ಮನೆಯವರನ್ನು ಕೇಳಿ ಮಾತನಾಡುತ್ತಾ ತೃಪ್ತರಾಗುತ್ತಿದ್ದ ನಮ್ಮ ಪ್ರೀತಿಯ ಶಿಕ್ಷಕಿ ಇನ್ನು ನೆನಪು ಮಾತ್ರ.

ಸುಮಾರು ತಿಂಗಳ ಹಿಂದೆ ಅಣ್ಣ ಮತ್ತು ನಾನು ಬಜಗೋಳಿಯ ಅವರ ಮನೆಗೆ ಹೋದಾಗ ಅತ್ಯಂತ ಲವಲವಿಕೆಯಿಂದ ನಮ್ಮನ್ನು ಬರಮಾಡಿಕೊಂಡು ತಿಂಡಿ-ಪಾನಕ ಕೊಟ್ಟು ಉಪಚರಿಸಿದ್ದರು. ಅಂದು ನಮ್ಮೊಂದಿಗೆ ಲೋಕಾಭಿರಾಮ ಹರಟುತ್ತಾ ತಮ್ಮ ಜೀವನದ ಏರಿಳಿತಗಳನ್ನು ಹಂಚಿಕೊಂಡು ಸಮಾಧಾನ ಪಟ್ಟುಕೊಂಡಿದ್ದರು. ಕಿರಿಯರ ಮತ್ತು ಹಿರಿಯರ ನಡುವಿನ ವಿದ್ಯಾಭ್ಯಾಸ, ಜೀವನ ಕೌಶಲ್ಯಗಳ ಅಭಿಪ್ರಾಯ ವ್ಯಕ್ತಪಡಿಸಿದ್ದರು. ಕುಶಲೋಪಚಾರ ಮಾತನಾಡುತ್ತಾ “ನಾನೆಷ್ಟು ದಿನ ಉಳಿಯುತ್ತೇವೆ ಎನ್ನುತ್ತಲೇ, ಊಟಮಾಡಿ ಹೋಗಿ ಎಂದಿದ್ದರು” ಮತ್ತೊಮ್ಮೆ ಬರುತ್ತೇವೆ ಎಂದು ತಿಳಿಸಿ ನಾವು ಹೊರಟಿದ್ದೆವು. ಅಂದಿನ ಅದೇ ಮಾತು ಕೊನೆಯಾದದ್ದು ಇಂದು ವಿಧಿ. ನಾವೇ ಮನೆಗೆ ಕರೆಯುತ್ತೇವೆ ಬರಬೇಕು ಎಂದಿದ್ದೆವು. ಆಗ ಬರುತ್ತೇನೆ ಎಂದವರು, ಬಾರದ ಲೋಕಕೆ ಪಯಣಿಸಿ ನಮಗೆ ನಿರಾಸೆಗೊಳಿಸಿದರು.


ಶಾಲೆಯಲ್ಲಿದ್ದಷ್ಟು ವರ್ಷ ಶಿಕ್ಷಕ ವೃಂದದ, ಪೋಷಕ ಮಿತ್ರರ ಸಹಕಾರ ಮೆರಯುವಂತಿಲ್ಲ. ಎಲ್ಲರಿಗೂ ಮಕ್ಕಳ ಉನ್ನತಿ ಒಂದೇ ಧ್ಯೇಯವಾಗಿತ್ತು. ಊರಿನ ಹೆತ್ತವರು, ಪೋಷಕರ ಋಣತೀರಿಸಲು ನನ್ನಿಂದ ಸಾಧ್ಯವಿಲ್ಲ, ಅವರು ಅಭಿಮಾನ, ಆಹಾರ, ಪಾನೀಯಗಳನ್ನಿತ್ತು ನನ್ನನ್ನು ಮನೆ ಮನೆಗಳಲ್ಲಿ ಸತ್ಕರಿಸುತ್ತಿದ್ದ ನೆನಪು ಸದಾ ಸ್ಮರಣೀಯ – ವಿಮಲಾ ಸುದರ್ಶನ್

     ಪಡಂಗಡಿಯ ಮೇಘರಾಜೇಂದ್ರ ಮತ್ತು ಸುನಂದಾದೇವಿ ದಂಪತಿಯ ಸುಪುತ್ರಿಯಾಗಿ 06-01-1949ರಂದು ಜನಿಸಿದ ವಿಮಲಾ ಸುದರ್ಶನ್‌ರವರು, ಅದಮಾರು ಪ್ರೌಢಶಾಲೆ-ಉಡುಪಿ ಇಲ್ಲಿ ಪ್ರೌಢ ಶಿಕ್ಷಣವನ್ನು, ಟಿ.ಸಿ.ಹೆಚ್‌ನ್ನು ದಾವಣಗೆರೆಯಲ್ಲಿ ಪೂರೈಸಿ, 25-10-1982 ಇಸವಿಯಲ್ಲಿ ಪೂರ್ವ ಪ್ರಾಥಮಿಕ ತರಗತಿಗೆ ಶಾಲಾಮಾತೆಯಾಗಿ ನಿಯುಕ್ತಿಗೊಂಡು 1ವರ್ಷದ  ನಂತರ ಭಡ್ತಿಹೊಂದಿ 25 ವರ್ಷಗಳ ಕಾಲ ಶಾಲಾ ಶಿಕ್ಷಕಿಯಾಗಿ ಸೇವೆ ಸಲ್ಲಿಸಿದ್ದರು.  ಶಿಕ್ಷಕಿ ಎಂದರೆ “ಸರಳತೆ, ತಾಳ್ಮೆ, ಸಮಗ್ರತೆಯ ಪ್ರತಿರೂಪ” ಈ ಮಾತಿಗೆ ಅನುಗುಣವಾಗಿದ್ದರು. ಸುದರ್ಶನ್ ಕುಮಾರ್‌ರವರನ್ನು ವರಿಸಿ ಸುಕೀರ್ತಿಕುಮಾರ್ ಹಾಗೂ ಸುಜಯ ಕುಮಾರಿ ಇಬ್ಬರು ಮಕ್ಕಳ ವಾತ್ಸಲ್ಯಮಯಿ ತಾಯಿ.  “ಆದರ್ಶಗಳ ಬಗ್ಗೆ ಕೊರೆಯುವ ಶಿಕ್ಷಕರು ಬೇಡ. ಶಿಕ್ಷಕನೇ ಆದರ್ಶವಾಗಿರಬೇಕು” ಎಂಬಂತೆ, ಸೇವೆ ಸಲ್ಲಿಸಿದ ಶಾಲೆಯಲ್ಲಿ ಆದರ್ಶ ಶಿಕ್ಷಕಿಯಾದ ಹಿರಿಮೆ ಇವರದು. 05-09-1990ರ ಶಿಕ್ಷಕರ ದಿನಾಚರಣೆಯಂದು ಕೊಡಲ್ಪಡುವ “ಉತ್ತಮ ಜಿಲ್ಲಾ ಶಿಕ್ಷಕಿ ಪ್ರಶಸ್ತಿ” ಭಾಜನರಾಗಿದ್ದರು. “ಜಗತ್ತಿನಲ್ಲಿ ಅಮ್ಮನ ಹೊರತಾಗಿ ಎಲ್ಲಾ ಸಮಸ್ಯೆಗಳಿಗೂ ದಾರಿದೀಪವಾಗಿ ನಿಲ್ಲಬಲ್ಲ ಸೃಷ್ಠಿ ಎಂದರೆ ಅದು ಶಿಕ್ಷಕರು ಮಾತ್ರ” ಎಂದು ಹೇಳುವಂತೆ  ಸೇವೆ ಸಲ್ಲಿಸಿದ ಶಾಲೆಯಲ್ಲಿ ವಿದ್ಯಾರ್ಥಿಗಳಿಗೆ ಅಮ್ಮನಾಗಿಯೂ, ತಪ್ಪನ್ನು ತಿದ್ದಿ ಸರಿದಾರಿಗೆ ತರುವ ಶಿಕ್ಷಕಿಯಾಗಿಯೂ ಮೂಡಿಬಂದ ಇವರ ಸೇವಾಗುಣ ಪ್ರಶಂಸನೀಯ. ನಿವೃತ್ತರಾದ ನಂತರವೂ  ಸಧರ್ಮದ ಪಾಠಪ್ರವಚನದಲ್ಲಿ ತೊಡಗಿಸಿಕೊಂಡಿದ್ದ ಶ್ರೀಯುತರ ನಡೆಯು ನಮಗೆ ಮಾದರಿಯಾಗಲಿ.  

ತನ್ನ 76 ನೇ ವಯಸ್ಸಿನಲ್ಲಿ ಜಿನೈಕ್ಯರಾದ ಸಹಸ್ತ್ರ ಮಕ್ಕಳ ಬಾಳಿಗೆ ದಾರಿ ದೀಪವಾದ ನಮ್ಮ ಶಾಲಾಮಾತೆ ವಿಮಲಾ ಮೇಡಂರವರ ಆತ್ಮಕ್ಕೆ ಚಿರಶಾಂತಿ ಕೋರಿ ಈ ನುಡಿನಮನವನ್ನು ಅವರ ಪದತಲಗಳಿಗೆ ಅರ್ಪಿಸುತ್ತೇನೆ.
ಓಂ ಶಾಂತಿ: ಶಾಂತಿಃ

spot_imgspot_img
spot_imgspot_img
spot_imgspot_img
RELATED ARTICLES

LEAVE A REPLY

Please enter your comment!
Please enter your name here

- Advertisment -
Google search engine

Most Popular

Recent Comments

You cannot copy content of this page