
ಪಣಜಿ: ಉತ್ತರ ಗೋವಾದ ಅರ್ಪೋರಾದಲ್ಲಿರುವ ರೋಮಿಯೋ ಲೇನ್ ನ ಪ್ರಸಿದ್ಧ ನೈಟ್ ಕ್ಲಬ್ ಬೀರ್ಚ್ ನಲ್ಲಿ ಸಂಭವಿಸಿದ ಭಾರಿ ಅಗ್ನಿ ದುರಂತದಲ್ಲಿ 25 ಜನರು ಸಜೀವದಹನಗೊಂಡಿದ್ದು ಈ ಕುರಿತು ಪಬ್ ಮಾಲಿಕ ಸೌರಭ್ ಲೂತ್ರಾ instagram ಪೋಸ್ಟ್ ಮೂಲಕ ಸಂತಾಪ ಸೂಚಿಸಿದ್ದಾರೆ.
ನೈಟ್ ಕ್ಲಬ್ ನ ಈ ದುರಂತದಲ್ಲಿ 20 ಸಿಬ್ಬಂದಿಗಳು ಹಾಗೂ ಬೆಂಗಳೂರು ಪ್ರವಾಸಿಗರು ಸೇರಿದಂತೆ ಐವರು ಪ್ರವಾಸಿಗರು ಸಜೀವ ದಹನಗೊಂಡಿದ್ದು ಈ ದುರ್ಘಟನೆಯಿಂದ ಆಡಳಿತ ಮಂಡಳಿಯು ಕಂಗೆಟ್ಟಿದೆ. ಈ ಘಟನೆ ಭರಿಸಲಾಗದ ದುಃಖ ಮತ್ತು ಅಗಾಧ ಯಾತನೆಯ ಕ್ಷಣ. ಮೃತರ ಕುಟುಂಬಗಳು ಮತ್ತು ಗಾಯಗೊಂಡವರ ಕುಟುಂಬಗಳೊಂದಿಗೆ ಒಗ್ಗಟ್ಟಿನಲ್ಲಿ ನಿಲ್ಲುತ್ತೇವೆ. ದುಃಖಿತ ಮತ್ತು ಸಂಕಷ್ಟದ ಈ ಸಮಯದಲ್ಲಿ ಆಡಳಿತ ಮಂಡಳಿಯು ಸಾಧ್ಯವಿರುವ ಎಲ್ಲಾ ರೀತಿಯ ಸಹಾಯ, ಬೆಂಬಲ ಮತ್ತು ಸಹಕಾರವನ್ನು ನೀಡುವುದಾಗಿ ಪೋಸ್ಟನಲ್ಲಿ ಉಲ್ಲೇಖಿಸಿ ತೀವ್ರ ಸಂತಾಪ ಸೂಚಿಸಿದ್ದಾರೆ.
ಪೊಲೀಸ್ ಅಧಿಕಾರಿಗಳ ಪ್ರಕಾರ ನೈಟ್ ಕ್ಲಬ್ ನಲ್ಲಿ ಅಗ್ನಿ ದುರಂತ ಸಂಭವಿಸಿದ ನಂತರ ಮಾಲೀಕರು ಗೋವಾದಿಂದ ನಾಪತ್ತೆಯಾಗಿದ್ದು ದೇಶ ಬಿಟ್ಟು ತೆರಳಲು ಪ್ರಯತ್ನಿಸುವ ಸಾಧ್ಯತೆ ಇರುವುದರಿಂದ ಮುಂಜಾಗ್ರತಾ ಕ್ರಮವಾಗಿ ದೇಶದ ಎಲ್ಲಾ ಪೊಲೀಸ್ ಠಾಣೆ ಮತ್ತು ವಿಮಾನ ನಿಲ್ದಾಣಗಳಲ್ಲಿ ಕಟ್ಟೆಚ್ಚರ ವಹಿಸಲು ಸೂಚನೆ ನೀಡಲಾಗಿದೆ ಎಂದು ತಿಳಿಸಿದ್ದು ಸೋಮವಾರ ಕ್ಲಬ್ ಮಾಲೀಕರಾದ ಸೌರಭ್ ಮತ್ತು ಗೌರವ್ ಲೂತ್ರಾ ವಿರುದ್ಧ ಲುಕ್ ಔಟ್ ನೋಟಿಸ್ ಜಾರಿಗೊಳಿಸಿದ್ದಾರೆ.



















