
ಕೋಲ್ಕತ್ತ : ಗುರುವಾರ ಸಂಜೆ ಪಶ್ಚಿಮ ಬಂಗಾಳದ ಮೇದಿನಿಪುರ ಜಿಲ್ಲೆಯಲ್ಲಿ 12 ವರ್ಷದ ಬಾಲಕನೊಬ್ಬ ನಾನು ಚಿಪ್ಸ್ ಕದ್ದಿಲ್ಲಮ್ಮಾ ಎಂದು ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಶರಣಾಗಿರುವ ಘಟನೆ ನಡೆದಿದೆ.
ಚಿಪ್ಸ್ ಪ್ಯಾಕೇಟ್ ಕದ್ದ ಆರೋಪದ ಮೇಲೆ ನಾಲ್ಕು ಜನರ ಎದುರು ಅಂಗಡಿಯವ ಬೈದಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಡೆತ್ ನೋಟ್ನಲ್ಲಿ “ಅಮ್ಮಾ ನಾನು ಚಿಪ್ಸ್ ಕದ್ದಿಲ್ಲ” ಎಂದು ಬರೆದಿದ್ದಾನೆ.
7 ನೇ ತರಗತಿಯ ವಿದ್ಯಾರ್ಥಿ ಕೃಷ್ಣೇಂದು ದಾಸ್ ಎಂಬ ಬಾಲಕ ಚಿಪ್ಸ್ ಖರೀದಿಸಲು ಅಂಗಡಿಯೊಂದಕ್ಕೆ ಹೋಗಿದ್ದ ಎಂದು ವರದಿಯಾಗಿದೆ. ಆತನ ಕುಟುಂಬದ ಪ್ರಕಾರ, ಶುಭಂಕರ್ ದೀಕ್ಷಿತ್ ಎಂದು ಗುರುತಿಸಲಾದ ಅಂಗಡಿಯವನಿಗೆ ಪದೇ ಪದೇ ಕರೆದರೂ ಆತ ಉತ್ತರಿಸಿರಲಿಲ್ಲ, ಅಂಕಲ್ ನಾನು ಚಿಪ್ಸ್ ತೆಗೆದುಕೊಳ್ಳುತ್ತಿದ್ದೇನೆ ಎಂದು ಹೇಳಿದರೂ ಆ ಕಡೆಯಿಂದ ಪ್ರತಿಕ್ರಿಯೆ ಬಂದಿರಲಿಲ್ಲ, ಅಂಗಡಿಯವರು ಇಲ್ಲ ಆಮೇಲೆ ಹಣ ಕೊಟ್ಟರಾಯ್ತು ಎಂದು ಹೇಳಿ ಪ್ಯಾಕೆಟ್ ತೆಗೆದುಕೊಂಡಿದ್ದಾನೆ. ಕೆಲವು ಕ್ಷಣಗಳ ಬಳಿಕ ಅಂಗಡಿಯವನು ಹಿಂತಿರುಗಿ ಬಂದು ಬಾಲಕನಿಗೆ ಕಪಾಳಮೋಕ್ಷ ಮಾಡಿ, ಬಸ್ಕಿ ಹೊಡೆಸಿದ್ದಾರೆ ಎಂದು ಕುಟುಂಬ ದೂರಿನಲ್ಲಿ ತಿಳಿಸಿದ್ದಾರೆ.
ದೀಕ್ಷಿತ್ ಅವರ ಒಪ್ಪಿಗೆಯಿಲ್ಲದೆ ಪ್ಯಾಕೆಟ್ ತೆಗೆದುಕೊಂಡಿದ್ದಕ್ಕಾಗಿ ಕ್ಷಮೆಯಾಚಿಸಿದ ತಕ್ಷಣವೇ ಹಣ ಕೊಡಲು ಮುಂದಾದರೂ ಆದರೆ ಅಂಗಡಿ ಮಾಲೀಕ ಅವನು ಸುಳ್ಳು ಹೇಳುತ್ತಿದ್ದಾನೆಂದು ಆರೋಪಿಸಿದ್ದಾನೆ. ಮನೆಗೆ ಹಿಂತಿರುಗಿದಾಗ ಹುಡುಗ ತನ್ನ ಕೋಣೆಗೆ ಹೋಗಿ ಬಾಗಿಲು ಹಾಕಿಕೊಂಡಿದ್ದು ನಂತರ ಅವನು ಬಾಗಿಲು ತೆರೆಯಲೇ ಇಲ್ಲ. ನಂತರ ಪ್ರಜ್ಞಾಹೀನ ಸ್ಥಿತಿಯಲ್ಲಿದ್ದ ಬಾಲಕನ ಬಳಿ ಅರ್ಧ ಖಾಲಿಯಾದ ಕೀಟನಾಶಕ ಬಾಟಲಿಯು ಬಿದ್ದಿದ್ದು, ಬಾಯಿಯಿಂದ ನೊರೆ ಬರುತ್ತಿತ್ತು. ಕೂಡಲೇ ಆಸ್ಪತ್ರೆಗೆ ದಾಖಲಿಸಿದರೂ ಯಾವುದೇ ಪ್ರಯೋಜನವಾಗಲಿಲ್ಲ ಎಂದು ವರದಿಯಾಗಿದೆ.






















































