
ಭಾರತೀಯ ರೈಲ್ವೆಯು ಪ್ರಯಾಣಿಕರ ರೈಲು ಟಿಕೆಟ್ ದರವನ್ನು ಹೇಗೆ ನಿಗದಿಪಡಿಸಲಾಗುತ್ತದೆ ಎಂಬ ವಿವರಗಳನ್ನು ಸಾರ್ವಜನಿಕವಾಗಿ ಬಹಿರಂಗಪಡಿಸಲು ಸಾಧ್ಯವಿಲ್ಲ. ಕಾರಣ, ಈ ದರ ನಿಗದಿ ಪ್ರಕ್ರಿಯೆ ವ್ಯಾಪಾರದ ರಹಸ್ಯವಾಗಿದ್ದು, ಮಾಹಿತಿ ಹಕ್ಕುಗಳ ಕಾಯ್ದೆಯಡಿ (ಆರ್‌ಟಿಐ) ರಕ್ಷಣೆಗೆ ಒಳಪಟ್ಟಿದೆ ಎಂದು ಕೇಂದ್ರ ಮಾಹಿತಿ ಆಯೋಗ (ಸಿಐಸಿ)ಕ್ಕೆ ತಿಳಿಸಿದೆ.
ತತ್ಕಾಲ್ ಬುಕ್ಕಿಂಗ್ ಸೇರಿದಂತೆ ಪ್ರಯಾಣಿಕರ ರೈಲು ಪ್ರಯಾಣದ ಮೂಲ ದರ ನಿಗದಿ ಕುರಿತ ಮಾಹಿತಿಯನ್ನು ನೀಡುವಂತೆ ಕೋರಿ ಆರ್‌ಟಿಐ ಅಡಿಯಲ್ಲಿ ಸಲ್ಲಿಕೆಯಾಗಿದ್ದ ಅರ್ಜಿಗೆ ಪ್ರತಿಕ್ರಿಯೆಯಾಗಿ ರೈಲ್ವೆ ಈ ಸ್ಪಷ್ಟನೆ ನೀಡಿದ್ದು ರೈಲ್ವೆ ಪ್ರಕಾರ, ಪ್ರಯಾಣಿಕರ ದರವನ್ನು ವಿವಿಧ ಪ್ರಯಾಣ ವರ್ಗಗಳು (ಎಸಿ, ನಾನ್ ಎಸಿ ಮುಂತಾದವು) ಹಾಗೂ ಒದಗಿಸಲಾಗುವ ಸೌಲಭ್ಯಗಳ ಆಧಾರದ ಮೇಲೆ ನಿರ್ಧರಿಸಲಾಗುತ್ತದೆ. ಆದರೆ, ದರ ನಿಗದಿಗೆ ಅನುಸರಿಸುವ ನಿಖರ ವಿಧಾನವು ವ್ಯಾಪಾರದ ರಹಸ್ಯವಾಗಿದ್ದು, ಅದನ್ನು ಬಹಿರಂಗಪಡಿಸಲಾಗುವುದಿಲ್ಲ.
ವ್ಯಾಪಾರ ರಹಸ್ಯಗಳು ಮತ್ತು ಬೌದ್ಧಿಕ ಆಸ್ತಿ ಹಕ್ಕುಗಳಿಗೆ ಸಂಬಂಧಿಸಿದ ಮಾಹಿತಿಯನ್ನು ಆರ್‌ಟಿಐ ಕಾಯ್ದೆಯ ಸೆಕ್ಷನ್ 8ರಡಿ ಬಹಿರಂಗಪಡಿಸುವುದರಿಂದ ವಿನಾಯಿತಿ ನೀಡಲಾಗಿದೆ. ಇಂತಹ ಮಾಹಿತಿಯನ್ನು ಸಾರ್ವಜನಿಕಗೊಳಿಸುವುದು ಕಾಯ್ದೆಯ ನಿಯಮಗಳಿಗೆ ವಿರುದ್ಧವಾಗುತ್ತದೆ ಎಂದು ಭಾರತೀಯ ರೈಲ್ವೆ ತಿಳಿಸಿದೆ.



















