
ಚೆನ್ನೈ: ಸೆ.27ರಂದು ತಮಿಳುನಾಡಿನ ಕರೂರಿನಲ್ಲಿ ಕಾಲ್ತುಳಿತ ದುರಂತ ಸಂಭವಿಸಿದ ಮೂರು ದಿನಗಳ ಬಳಿಕ ನಟ, ಟಿವಿಕೆ ಮುಖ್ಯಸ್ಥ ವಿಜಯ್ ತಮ್ಮ ಎಕ್ಸ್ ಖಾತೆಯಲ್ಲಿ ವಿಡಿಯೋವೊಂದನ್ನು ಹಂಚಿಕೊಂಡಿದ್ದು, ಈ ವೇಳೆ ತಮಿಳುನಾಡು ಸಿಎಂ ಎಂ.ಕೆ. ಸ್ಟಾಲಿನ್ ಅವರಿಗೆ ನನ್ನ ವಿರುದ್ಧ ಬೇಕಾದ್ರೆ ಸೇಡು ತೀರಿಸಿಕೊಳ್ಳಿ. ಆದರೆ ನನ್ನ ಬೆಂಬಲಿಗರಿಗೆ ಏನು ಮಾಡಬೇಡಿ. ನಾನು ಮನೆಯಲ್ಲಿ ಅಥವಾ ಕಚೇರಿಯಲ್ಲಿ ಇರುತ್ತೇನೆ. ನೀವು ನನ್ನ ಮೇಲೆ ಯಾವ ರೀತಿ ಬೇಕಾದರೂ ಕ್ರಮ ಕೈಗೊಳ್ಳಬಹುದು ಎಂದು ಮನವಿ ಮಾಡಿಕೊಂಡಿದ್ದಾರೆ.
ನನ್ನ ಜೀವನದಲ್ಲೇ ಇಂತಹ ನೋವಿನ ದಿನಗಳನ್ನು ನಾನು ಅನುಭವಿಸಿಲ್ಲ. ನಿಜಕ್ಕೂ ಈ ಸಂಗತಿಯಿಂದ ನನ್ನ ಮನಸ್ಸಿಗೆ ತುಂಬಾ ನೋವಾಗಿದೆ, ಬರೀ ನೋವೇ ತುಂಬಿಕೊಂಡಂತಾಗಿದೆ. ಜನರು ನನ್ನ ಮೇಲಿನ ಪ್ರೀತಿಯಿಂದಾಗಿ ನನ್ನನ್ನು ನೋಡಲು ಬರುತ್ತಾರೆ. ಅವರ ಪ್ರೀತಿ, ವಿಶ್ವಾಸಕ್ಕೆ ನಾನು ಯಾವಾಗಲೂ ಚಿರಋಣಿ. ಆದರೆ ಆ ಎಲ್ಲದಕ್ಕೂ ಮಿಗಿಲಾಗಿ ಜನರ ರಕ್ಷಣೆಯೇ ನನ್ನ ಮೊದಲ ಆದ್ಯತೆ. ನಾನು ಸಾರ್ವಜನಿಕರ ಸುರಕ್ಷತೆಗೆ ಆದ್ಯತೆ ಕೊಡುತ್ತೇನೆ.
ಇದಕ್ಕೂ ಮುನ್ನ ನಾವು ಐದು ಜಿಲ್ಲೆಗಳಲ್ಲಿ ಪ್ರಚಾರ ಮಾಡಿದ್ದೇವೆ, ಆದರೆ ಕರೂರಿನಲ್ಲಿ ಯಾಕೆ ಹೀಗಾಯ್ತು? ಹೇಗಾಯ್ತು? ಜನರಿಗೆ ಎಲ್ಲ ಗೊತ್ತಿದೆ. ಅವರೆಲ್ಲವನ್ನೂ ನೋಡುತ್ತಿದ್ದಾರೆ. ಶೀಘ್ರದಲ್ಲಿಯೇ ಈ ಘಟನೆ ಹಿಂದಿನ ಸತ್ಯ ಬಹಿರಂಗಗೊಳ್ಳುತ್ತದೆ ಎಂದು ಪ್ರತಿಜ್ಞೆ ಮಾಡಿದ್ದಾರೆ.



















