
ಕೆಲ ದಿನಗಳ ಹಿಂದೆ ಸರ್ಕಾರಿ ಸ್ವಾಮ್ಯದ ಮೈಸೂರು ಸ್ಯಾಂಡಲ್ ಉತ್ಪನ್ನಗಳಿಗೆ ಪ್ಯಾನ್ ಇಂಡಿಯಾ ನಟಿ ತಮನ್ನಾ ಭಾಟಿಯಾ ಅವರನ್ನು ರಾಯಭಾರಿಯಾಗಿ ನೇಮಕ ಮಾಡಿದ್ದಕ್ಕೆ ವಿರೋಧ ವ್ಯಕ್ತವಾಗಿದ್ದ ಬೆನ್ನಲ್ಲೇ, ಇದೀಗ ಬಮೂಲ್ (ಬೆಂಗಳೂರು ಹಾಲು ಒಕ್ಕೂಟ) ತನ್ನ ನಂದಿನಿ ಉತ್ಪನ್ನಗಳಿಗೆ ಹಿರಿಯ ನಟಿ ಸುಧಾರಾಣಿಯನ್ನು ರಾಯಭಾರಿಯಾಗಿ ಘೋಷಿಸಿದೆ. ಆದರೆ ಈ ನಿರ್ಧಾರಕ್ಕೆ ಮಾತೃಸಂಸ್ಥೆಯಾದ ಕೆಎಂಎಫ್ (ಕರ್ನಾಟಕ ಹಾಲು ಮಹಾಮಂಡಳಿ) ಆಕ್ಷೇಪ ವ್ಯಕ್ತಪಡಿಸಿದೆ.
ಬಮೂಲ್ ಅಧ್ಯಕ್ಷ ಡಿ.ಕೆ. ಸುರೇಶ್ ಅವರು ಸುಧಾರಾಣಿಯನ್ನು ಭೇಟಿಯಾಗಿ ಹೂಗುಚ್ಛ ನೀಡಿ ರಾಯಭಾರಿಯಾಗಿ ಸ್ವಾಗತಿಸಿದ್ದು ಈ ಸಂದರ್ಭದಲ್ಲಿ ಮಾತನಾಡಿದ ಸುಧಾರಾಣಿ, ‘ತಲೆಮಾರುಗಳಿಂದ ಪ್ರತಿಯೊಬ್ಬ ಕನ್ನಡಿಗನ ನಂಬಿಕೆಯ ಪ್ರತೀಕ ನಂದಿನಿ. ರೈತರ ಸಹಕಾರಿ ಸಂಸ್ಥೆಯಾದ ಬಮುಲ್ ನಂದಿನಿ ಜೊತೆ ಒಡಗೂಡುವ ಅವಕಾಶ ನನಗೆ ಅತ್ಯಂತ ಗೌರವದ ವಿಷಯ. ಡಾ. ರಾಜ್ಕುಮಾರ್, ಶಿವರಾಜ್ಕುಮಾರ್ ಹಾಗೂ ಪುನೀತ್ ರಾಜ್ಕುಮಾರ್ ಅವರಂತಹ ಮೇರು ವ್ಯಕ್ತಿಗಳ ಹಾದಿಯನ್ನು ಅನುಸರಿಸಿ ಬ್ರ್ಯಾಂಡ್ ಅಂಬಾಸಿಡರ್ ಆಗಿರುವುದು ಕೇವಲ ಅನುಕರಣೆಯಲ್ಲ ಧನ್ಯತೆ ಮತ್ತು ಹೆಮ್ಮೆಯ ಜವಾಬ್ದಾರಿ’ ಎಂದಿದ್ದಾರೆ.
ಆದರೆ ಬಮೂಲ್ ಬೈಲಾವಿರುದ್ಧವಾಗಿ ಹಾಗೂ ಕೆಎಂಎಫ್ಗೆ ಮಾಹಿತಿ ನೀಡದೇ ರಾಯಭಾರಿ ನೇಮಕ ಮಾಡಿದೆ ಎಂದು ಕೆಎಂಎಫ್ ಆರೋಪಿಸಿದ್ದು ಈ ಕುರಿತು ಬಮೂಲ್ ಅಧಿಕಾರಿಗಳಿಂದ ಸ್ಪಷ್ಟನೆ ಪಡೆಯಲಾಗುವುದು ಎಂದು ಕೆಎಂಎಫ್ ತಿಳಿಸಿದೆ.
ಹಿಂದೆ ನಂದಿನಿಯ ಮೊದಲ ರಾಯಭಾರಿಯಾಗಿ ಡಾ. ರಾಜ್ಕುಮಾರ್ ಕಾರ್ಯನಿರ್ವಹಿಸಿದ್ದರು. ನಂತರ ಪುನೀತ್ ರಾಜ್ಕುಮಾರ್ ಉಚಿತವಾಗಿ ರಾಯಭಾರಿಯಾಗಿದ್ದರು. ಅವರ ನೇಮಕವನ್ನು ಕೆಎಂಎಫ್ ಮಾಡಿದ್ದರೆ, ಈಗ ಬಮೂಲ್ ಸ್ವತಂತ್ರವಾಗಿ ಸುಧಾರಾಣಿಯನ್ನು ನೇಮಕ ಮಾಡಿರುವುದೇ ವಿವಾದಕ್ಕೆ ಕಾರಣವಾಗಿದೆ.



















