ಅನುತ್ತೀರ್ಣರಿಗೆ ಪರೀಕ್ಷೆ-2 ಅವಕಾಶ,
ಪರೀಕ್ಷೆ -3 ರದ್ದು

ಬೆಂಗಳೂರು: 2026ನೇ ಸಾಲಿನ ದ್ವಿತೀಯ ಪಿಯುಸಿ ಪರೀಕ್ಷೆ–1ರ ಫಲಿತಾಂಶ ಪ್ರಕಟವಾದ ಬಳಿಕ, ಮುಂದಿನ ಪರೀಕ್ಷೆಗಳ ವೇಳಾಪಟ್ಟಿ ಹಾಗೂ ಮೌಲ್ಯಮಾಪನ ಪ್ರಕ್ರಿಯೆಗಳ ಕುರಿತು ಶಿಕ್ಷಣ ಇಲಾಖೆ ಪ್ರಮುಖ ಮಾಹಿತಿ ನೀಡಿದೆ. ಅನುತ್ತೀರ್ಣರಾದ ವಿದ್ಯಾರ್ಥಿಗಳಿಗೆ ಮತ್ತೆ ಪರೀಕ್ಷೆ ಬರೆಯುವ ಅವಕಾಶವಿದೆ ಎಂದು ತಿಳಿಸಿದೆ.
ದ್ವಿತೀಯ ಪಿಯುಸಿ ಪರೀಕ್ಷೆ–2 ಏಪ್ರಿಲ್ 30ರಿಂದ ಆರಂಭವಾಗಿ ಮೇ 13ರವರೆಗೆ ನಡೆಯಲಿದೆ. ಈ ಬಾರಿ ಮೂರನೇ ಪರೀಕ್ಷೆಯನ್ನು ನಡೆಸುವುದಿಲ್ಲ ಎಂದು ಇಲಾಖೆ ಸ್ಪಷ್ಟಪಡಿಸಿದೆ. ಮುಂದಿನ ವರ್ಷದಿಂದ ಕೇವಲ ಎರಡು ಪರೀಕ್ಷೆಗಳ ವ್ಯವಸ್ಥೆ ಜಾರಿಗೆ ತರಲು ಯೋಚನೆ ನಡೆಸಲಾಗುತ್ತಿದೆ.
ಉತ್ತರ ಪತ್ರಿಕೆಯ ಛಾಯ ಪ್ರತಿಗಾಗಿ ವಿದ್ಯಾರ್ಥಿಗಳು ಏಪ್ರಿಲ್ 10ರಿಂದ 15ರವರೆಗೆ ಆನ್‌ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಪ್ರತಿ ವಿಷಯಕ್ಕೆ ₹530 ಶುಲ್ಕ ನಿಗದಿಯಾಗಿದೆ. ಮರುಮೌಲ್ಯಮಾಪನ ಮತ್ತು ಮರುಎಣಿಕೆಗಾಗಿ ಏಪ್ರಿಲ್ 13ರಿಂದ 19ರವರೆಗೆ ಅರ್ಜಿ ಸಲ್ಲಿಸಲು ಅವಕಾಶವಿದ್ದು, ಮರುಮೌಲ್ಯಮಾಪನಕ್ಕೆ ₹1670 ಶುಲ್ಕ ವಿಧಿಸಲಾಗಿದೆ.
ವಿದ್ಯಾರ್ಥಿಗಳು ಈ ಅವಕಾಶಗಳನ್ನು ಸದುಪಯೋಗಪಡಿಸಿಕೊಂಡು ತಮ್ಮ ಅಂಕಗಳನ್ನು ಸುಧಾರಿಸಿಕೊಳ್ಳುವಂತೆ ಶಿಕ್ಷಣ ಇಲಾಖೆ ಮನವಿ ಮಾಡಿದೆ.








