
ನವದೆಹಲಿ: ರೈಲ್ವೆ ಇಲಾಖೆಯು ದೇಶಾದ್ಯಂತ ಇಂದಿನಿಂದ ಅನ್ವಯವಾಗುವಂತೆ ಪ್ರಯಾಣ ದರ ಏರಿಕೆ ಮಾಡಿದ್ದು ಈ ಮೂಲಕ ರೈಲು ಪ್ರಯಾಣ ಮಾಡುವ ಜನಸಾಮಾನ್ಯರ ಜೇಬಿಗೆ ಕತ್ತರಿ ಬೀಳುವಂತಾಗಿದೆ.
ಉಪನಗರ ರೈಲು ಪ್ರಯಾಣದ ದರವನ್ನು ಹೆಚ್ಚಿಸಿಲ್ಲವಾದರೂ, ದೀರ್ಘ ಪ್ರಯಾಣದ ದರವನ್ನು ರೈಲ್ವೆ ಸಚಿವಾಲಯ ಹೆಚ್ಚಳ ಮಾಡಿ ಪ್ರತಿ 500 ಕಿ.ಮೀ.ಗೆ 10 ರೂ. ಏರಿಕೆ ಮಾಡಿದೆ. 215 ಕಿ.ಮೀ.ಗಿಂತ ಹೆಚ್ಚಿನ ಪ್ರಯಾಣಕ್ಕಾಗಿ, ಸಾಮಾನ್ಯ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಒಂದು ಪೈಸೆ, ಮೇಲ್, ಎಕ್ಸ್‌ಪ್ರೆಸ್ ರೈಲುಗಳ ಎಸಿ ಅಲ್ಲದ ವರ್ಗದಲ್ಲಿ ಪ್ರತಿ ಕಿಲೋಮೀಟರಿಗೆ ಎರಡು ಪೈಸೆ ಮತ್ತು ಎಲ್ಲಾ ರೈಲುಗಳ ಎಸಿ ವರ್ಗದ ದರವನ್ನು ಹೆಚ್ಚಿಸಲಾಗಿದೆ. ಮುಂದಿನ ಪ್ರಯಾಣಕ್ಕಾಗಿ ಡಿಸೆಂಬರ್ 26 ರ ಮೊದಲು ಬುಕ್ ಮಾಡಿದ ಟಿಕೆಟ್‌ಗಳಿಗೆ ಈ ಬದಲಾವಣೆ ಅನ್ವಯ ಆಗುವುದಿಲ್ಲ.
ಹೊಸ ದರಗಳು ಜಾರಿಗೆ ಬಂದ ನಂತರ ಹವಾನಿಯಂತ್ರಿತವಲ್ಲದ ಬೋಗಿಗಳಲ್ಲಿ 500 ಕಿ.ಮೀ ಪ್ರಯಾಣಕ್ಕೆ 10 ರೂ. ಹೆಚ್ಚಾಗಲಿದ್ದು ಇದರಿಂದ ಪ್ರಯಾಣಿಕರಿಗೆ ಹೊರಯಾಗಲಿದೆ.
ತೇಜಸ್ ರಾಜಧಾನಿ, ರಾಜಧಾನಿ, ಶತಾಬ್ದಿ, ದುರಂತೋ, ವಂದೇ ಭಾರತ್, ಹಮ್ಸಾಫರ್, ಅಮೃತ್ ಭಾರತ್, ತೇಜಸ್, ಮಹಾಮಾನ, ಗತಿಮಾನ್, ಅಂತ್ಯೋದಯ, ಗರೀಬ್ ರಥ, ಜನ ಶತಾಬ್ದಿ, ಯುವ ಎಕ್ಸ್‌ಪ್ರೆಸ್, ನಮೋ ಭಾರತ್ ರಾಪಿಡ್ ರೈಲ್ ಸೇರಿದಂತೆ ಪ್ರಮುಖ ರೈಲುಗಳ ದರ ಬದಲಾಗಲಿದೆ.





