
ನವದೆಹಲಿ: ದೆಹಲಿಯಲ್ಲಿ ದಿನೇದಿನೇ ಹೆಚ್ಚುತ್ತಿರುವ ಕಸದ ಸಮಸ್ಯೆ ನಿಯಂತ್ರಣಕ್ಕೆ ಕೇಂದ್ರ ಸರ್ಕಾರ ಹೊಸ ‘ಘನ ತ್ಯಾಜ್ಯ ನಿರ್ವಹಣ ನಿಯಮಗಳನ್ನು’ ಜಾರಿಗೆ ತಂದಿದೆ. ಏಪ್ರಿಲ್ 1ರಿಂದ ಜಾರಿಯಾಗುವ ಈ ನಿಯಮಗಳಂತೆ, ಕಸವನ್ನು ಮೂಲದಲ್ಲೇ ಹಸಿ, ಒಣ, ಸ್ಯಾನಿಟರಿ ಹಾಗೂ ವಿಶೇಷ ತ್ಯಾಜ್ಯ ಎಂದು ನಾಲ್ಕು ವಿಭಾಗಗಳಾಗಿ ವಿಂಗಡಿಸುವುದು ಕಡ್ಡಾಯವಾಗಿದೆ ಎಂದು ಕೇಂದ್ರ ಪರಿಸರ ಸಚಿವ ಭೂಪೇಂದ್ರ ಯಾದವ್ ತಿಳಿಸಿದ್ದಾರೆ.
ಈ ನಿಯಮಗಳಡಿ ದಿನಕ್ಕೆ 100 ಕೆ.ಜಿ.ಗಿಂತ ಹೆಚ್ಚು ಕಸ ಉತ್ಪಾದಿಸುವ ಸಂಸ್ಥೆಗಳು, 20,000 ಚದರ ಮೀಟರ್ಗಿಂತ ಹೆಚ್ಚಿನ ವಿಸ್ತೀರ್ಣದ ಕಟ್ಟಡಗಳು ಹಾಗೂ ಹೆಚ್ಚು ನೀರು ಬಳಕೆ ಮಾಡುವ ಘಟಕಗಳನ್ನು ‘ಬಹುಮಟ್ಟದ ತ್ಯಾಜ್ಯ ಉತ್ಪಾದಕರು’ ಎಂದು ಗುರುತಿಸಲಾಗಿದೆ. ಸರ್ಕಾರಿ ಕಚೇರಿಗಳು, ವಾಣಿಜ್ಯ ಮಳಿಗೆಗಳು, ದೊಡ್ಡ ರೆಸಿಡೆನ್ಶಿಯಲ್ ಕಾಂಪ್ಲೆಕ್ಸ್ಗಳು ಮತ್ತು ಶಿಕ್ಷಣ ಸಂಸ್ಥೆಗಳು ಈ ವ್ಯಾಪ್ತಿಗೆ ಬರುತ್ತವೆ.
‘ಮಾಲಿನ್ಯಕಾರನೇ ಹಣ ಪಾವತಿಸಲಿ’ ತತ್ತ್ವದಡಿ ನಿಯಮ ಉಲ್ಲಂಘನೆ ಮಾಡಿದರೆ ದಂಡ ವಿಧಿಸಲಾಗುತ್ತಿದ್ದು, ಬಳಕೆದಾರರ ಶುಲ್ಕ ವಸೂಲಿಗೂ ಅವಕಾಶ ನೀಡಲಾಗಿದೆ. ಹೊಸ ಮಾರ್ಗಸೂಚಿಗಳನ್ನು ಶೀಘ್ರದಲ್ಲೇ ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ ಪ್ರಕಟಿಸಲಿದೆ.



















