
ಹೆಬ್ರಿ :ಪೋಷಕರು ಮತ್ತು ಹಳೆ ವಿದ್ಯಾರ್ಥಿಗಳು ಶಾಲೆಯ ಎಲ್ಲ ಕಾರ್ಯಕ್ರಮಗಳಲ್ಲೂ ಸಕ್ರಿಯವಾಗಿ ಭಾಗವಹಿಸಿ ಶಾಲೆಯ ಅಭಿವೃದ್ಧಿಗೆ ಕೈಜೋಡಿಸಿ. ಕ್ರೀಡೆಯಲ್ಲಿ ಸೋಲು, ಗೆಲುವು ಸಾಮಾನ್ಯ. ಕ್ರೀಡಾಸ್ಫೂರ್ತಿಯಿಂದ ಪಾಲ್ಗೊಂಡು ಸ್ಪರ್ಧೆಯಲ್ಲಿ ಭಾಗವಹಿಸಿ ಎಂದು ತುಂಡುಗುಡ್ಡೆ ಶಾಲೆಯ ಎಸ್ ಡಿ. ಎಂ. ಸಿ. ಅಧ್ಯಕ್ಷ ಶಂಕರ ಕುಲಾಲ್ ಹೇಳಿದರು.
ಅವರು ಮುದ್ರಾಡಿ ಗ್ರಾಮದ ತುಂಡುಗುಡ್ಡೆ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ಹಳೇವಿದ್ಯಾರ್ಥಿಗಳ ಮತ್ತು ಪೋಷಕರ ಕ್ರೀಡಾಕೂಟ ಉದ್ಘಾಟಿಸಿ ಅಧ್ಯಕ್ಷತೆಯನ್ನು ವಹಿಸಿ ಮಾತನಾಡಿದರು. ವರಂಗ ಬೈದಶ್ರೀ ಕ್ರಿಕೆಟರ್ಸ್ ಸಂಘದ ಸದಸ್ಯರಾಗಿರುವ ವಕೀಲ ಸುರೇಶ್ ಪೂಜಾರಿ ಮಾತನಾಡಿ ನಾವು ಮಕ್ಕಳಿಗೆ ನೆರವಾಗುವ ನಿಟ್ಟಿನಲ್ಲಿ ಸದಾ ಸಹಕಾರವನ್ನು ನೀಡುತ್ತಾ ಬರುತ್ತೇವೆ ಎಂದು ತಿಳಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ಎಸ್. ಡಿ. ಎಂ. ಸಿ. ಗೌರವಾಧ್ಯಕ್ಷ ಮಧುಸೂದನ್ ಭಟ್ ಬಲ್ಲಾಡಿ, ಎಸ್ ಡಿ ಎಂ ಸಿ ಉಪಾಧ್ಯಕ್ಷೆ ಅಖಿಲಾ ಶೆಟ್ಟಿ, ಮಾಜಿ ಅಧ್ಯಕ್ಷ ರಮೇಶ್ ಕುಲಾಲ್, ಹಳೆ ವಿದ್ಯಾರ್ಥಿ ಸಂಘದ ಸದಸ್ಯ ಪ್ರಕಾಶ್ ಕುಲಾಲ್, ಅಡ್ಕ ಚತುರ್ಮುಖ ಬ್ರಹ್ಮಲಿಂಗೇಶ್ವರ ಭಜನಾ ಮಂಡಳಿ ಅಧ್ಯಕ್ಷ ಸುಧೀರ್ ಕುಲಾಲ್, ವಿದ್ಯಾರ್ಥಿ ನಾಯಕಿ ರಶ್ವಿತಾ ಉಪಸ್ಥಿತರಿದ್ದರು. ಶಾಲಾ ಮುಖ್ಯ ಶಿಕ್ಷಕಿ ಚಿತ್ರಾ ಸ್ವಾಗತಿಸಿದರು. ಅತಿಥಿ ಶಿಕ್ಷಕಿ ಬಾಬಿ ವಂದಿಸಿದರು. ಬಲ್ಲಾಡಿ ಚಂದ್ರಶೇಖರ ಭಟ್ ಕಾರ್ಯಕ್ರಮ ನಿರೂಪಿಸಿದರು.





