
ಕಲಬುರಗಿ: ಸೆಪ್ಟೆಂಬರ್ 11 ರಂದು ಮಳಖೇಡ ಗ್ರಾಮದ ಸುಲಹಳ್ಳಿ ನಿವಾಸಿಯಾಗಿದ್ದ ಭಾಗ್ಯಶ್ರೀ (21) ಎಂಬ ಯುವತಿ ಕಾಣೆಯಾಗಿದ್ದು, ನಾಪತ್ತೆಯಾಗಿ 7 ದಿನಗಳ ಬಳಿಕ ಕೊಳೆತ ಸ್ಥಿತಿಯಲ್ಲಿ ಯುವತಿಯ ಮೃತದೇಹ ಪತ್ತೆಯಾಗಿದೆ. ತಂದೆ ಮೇಲಿನ ಸೇಡಿಗಾಗಿ ಭಾಗ್ಯಶ್ರೀಯನ್ನು ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದು ಕೊಲೆ ಮಾಡಿರುವ ಅನುಮಾನ ವ್ಯಕ್ತವಾಗಿದ್ದು ಪ್ರಕರಣಕ್ಕೆ ಸಂಬಂಧಿಸಿದಂತೆ, ಮಂಜುನಾಥ್ ಎಂಬ ಶಂಕಿತ ಆರೋಪಿಯನ್ನ ಬಂಧಿಸಲಾಗಿದೆ.
ಈ ಹಿಂದೆ ಮಂಜುನಾಥ್ ಸಹೋದರ ವಿನೋದ್ ಆತ್ಮಹತ್ಯೆ ಮಾಡಿಕೊಂಡಿದ್ದ. ಸಹೋದರ ದುಡುಕಿನ ನಿರ್ಧಾರಕ್ಕೆ ಭಾಗ್ಯಶ್ರೀ ಅಪ್ಪ ಕಾರಣ ಎಂಬ ಆರೋಪವಿದ್ದು ಆರೋಪಿಯ ಸಹೋದರ ವಿನೋದ್ ಮಳಖೇಡ ಗ್ರಾಮದ ಅಲ್ಟ್ರಾಟೇಕ್ ಸಿಮೆಂಟ್ ಕಂಪನಿಯಲ್ಲಿ ಕೆಲಸ ಮಾಡುತ್ತಿದ್ದ. ಖಾಯಂ ಉದ್ಯೋಗದ ಆಕಾಂಕ್ಷಿಯಾಗಿದ್ದ ಈತನಿಗೆ ಖಾಯಂ ಉದ್ಯೋಗ ಸಿಗದಿರಲು ಭಾಗ್ಯಶ್ರೀ ತಂದೆ ಚೆನ್ನವೀರಪ್ಪ ಕಾರಣ ಎಂದು ಆರೋಪಿಸಲಾಗಿದೆ. ವಿನೋದ್ ಉದ್ಯೋಗ ಖಾಯಂ ಆಗದ ಹಿನ್ನೆಲೆಯಲ್ಲಿ ಮನನೊಂದು ಜೀವ ತೆಗೆದುಕೊಂಡಿದ್ದ. ಸಹೋದರ ನಿಧನದಿಂದ ರೊಚ್ಚಿಗೆದ್ದಿದ್ದ ಮಂಜುನಾಥ್ ಸೇಡು ತೀರಿಸಿಕೊಳ್ಳೋದಾಗಿ ವಾರ್ನ್ ಮಾಡಿದ್ದ ಎಂದು ಹೇಳಲಾಗುತ್ತಿದೆ. ಅಂತೆಯೇ ಸೆಪ್ಟೆಂಬರ್ 11 ರಂದು ಚೆನ್ನವೀರಪ್ಪ ಪುತ್ರಿಯರು ವಾಕಿಂಗ್ ತೆರಳಿದ್ದ ವೇಳೆ ಮಂಜುನಾಥನೇ ಭಾಗ್ಯಶ್ರೀಯನ್ನ ಕಿಡ್ನಾಪ್ ಮಾಡಿ ಕೃತ್ಯ ನಡೆಸಿದ್ದಾನೆ ಎಂಬ ಅನುಮಾನವಿದ್ದು ಪೊಲೀಸರು ವಿಚಾರಣೆ ಮುಂದುವರೆಸಿದ್ದಾರೆ.








