
ಬೆಂಗಳೂರು: ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಯಿಂದ ಹೊರ ಬಂದಿದ್ದು ಇದೀಗ ಇಂದು ಬೆಳಗ್ಗೆ ಬೆಂಗಳೂರಿನ ಡಿಸಿಎಂ ಡಿಕೆ ಶಿವಕುಮಾರ್ ನಿವಾಸಕ್ಕೆ ಆಗಮಿಸಿ ಚರ್ಚೆ ನಡೆಸಿ ಬಳಿಕ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಶೀರ್ವಾದ ಪಡೆದುಕೊಂಡು ನೇರವಾಗಿ ಕೆಪಿಸಿಸಿ ಕಚೇರಿಗೆ ತೆರಳಿ ಅಧಿಕೃತವಾಗಿ ಕಾಂಗ್ರೆಸ್ ಬಾವುಟ ಹಿಡಿದಿದ್ದಾರೆ.
ಕೇಂದ್ರ ಸಚಿವ ಹೆಚ್‌ಡಿ ಕುಮಾರಸ್ವಾಮಿ ರಾಜೀನಾಮೆಯಿಂದ ತೆರವಾಗಿರುವ ಚನ್ನಪಟ್ಟಣ ವಿಧಾನಸಭಾ ಕ್ಷೇತ್ರಕ್ಕೆ ಉಪ ಚುನಾವಣೆ ಘೋಷಣೆಯಾಗಿದೆ. ಮಾಜಿ ಸಚಿವ ಸಿ.ಪಿ.ಯೋಗೇಶ್ವರ್ ಬಿಜೆಪಿಯ ಟಿಕೆಟ್ ಆಕಾಂಕ್ಷಿಯಾಗಿದ್ದರು. ಆದರೆ ಜೆಡಿಎಸ್ ಜೊತೆ ಮೈತ್ರಿ ಮಾಡಿಕೊಂಡಿರುವ ಕಾರಣ ಚನ್ನಪಟ್ಟಣ ಕ್ಷೇತ್ರವನ್ನು ದಳಪತಿಗಳಿಗೆ ಬಿಟ್ಟು ಕೊಡಲಾಗಿತ್ತು. ಜೆಡಿಎಸ್ ಚಿಹ್ನೆಯಡಿಯಲ್ಲಿ ಸ್ಪರ್ಧೆ ಮಾಡುವಂತೆ ಯೋಗೇಶ್ವರ್ ಅವರಿಗೆ ದಳಪತಿಗಳು ಆಫರ್ ನೀಡಿದ್ದರು. ಜೆಡಿಎಸ್ ಆಫರ್ ತಿರಸ್ಕರಿಸಿದ್ದ ಯೋಗೇಶ್ವರ್, ಬಿಜೆಪಿಯಿಂದಲೇ ಬಿ ಫಾರಂ ಬೇಕೆಂದು ಹಠ ಹಿಡಿದಿದ್ದರು.
ಬಿಜೆಪಿ ಮೈತ್ರಿ ಧರ್ಮ ಪಾಲನೆಯಿಂದ ಹಿಂದೆ ಸರಿಯದ ಕಾರಣ, ಯೋಗೇಶ್ವರ್ ಕಾಂಗ್ರೆಸ್ ಸೇರಿದ್ದಾರೆ. ಕಾಂಗ್ರೆಸ್‌ನಿಂದ ಸಿ.ಪಿ.ಯೋಗೇಶ್ವರ್ ಸ್ಪರ್ಧೆ ಮಾಡೋದು ಖಾತ್ರಿಯಾಗಿದ್ದು, ಗುರುವಾರ ನಾಮಪತ್ರ ಸಲ್ಲಿಸುವ ಸಾಧ್ಯತೆಗಳಿವೆ.






















































