
ಕುಕನೂರು: ಮಂಗಳವಾರ ಸಿಎಂ ಆರ್ಥಿಕ ಸಲಹೆಗಾರ ಬಸವರಾಜ ರಾಯರಡ್ಡಿ ಕುಕನೂರು, ಯಲಬುರ್ಗಾ ತಾಲೂಕಿನ ಗ್ಯಾರಂಟಿ ಯೋಜನೆಯ ಪ್ರಗತಿ ಪರಿಶೀಲನಾ ಸಭೆಯಲ್ಲಿ ಮಾತನಾಡಿ ಗ್ಯಾರಂಟಿಗಳಲ್ಲಿ ಅನರ್ಹ ಫಲಾನುಭವಿಗಳಿಗೂ ಯೋಜನೆಯ ಲಾಭ ಹೋಗುತ್ತಿದೆ. ಈ ಕುರಿತು ರಾಜ್ಯಾದ್ಯಂತ ತನಿಖೆ ಮಾಡಿಸಿ ಜುಲೈನಿಂದ ಅನರ್ಹರಿಗೆ ಗ್ಯಾರಂಟಿ ಲಾಭ ತಲುಪದಂತೆ ಕಡಿವಾಣ ಹಾಕಲಾಗುವುದು ಎಂದು ತಿಳಿಸಿದ್ದಾರೆ.
ಒಂದು ವಿಧಾನಸಭಾ ಕ್ಷೇತ್ರಕ್ಕೆ ವರ್ಷಕ್ಕೆ ಗ್ಯಾರಂಟಿ ಯೋಜನೆಯಡಿ ಅಂದಾಜು ₹250 ಕೋಟಿ ಹಣ ನೀಡುತ್ತಿದ್ದು, ಯೋಜನೆಗಳು ಜನರ ಮನೆ ಬಾಗಿಲಿಗೆ ತಲುಪಿವೆ. ಅರ್ಹ ಅಲ್ಲದವರಿಗೂ ಸಹ ಯೋಜನೆ ಲಾಭ ಸಿಗುತ್ತಿದ್ದು ಮನೆ ಬಾಡಿಗೆ ನೀಡಿದ್ದರೂ ಅವರಿಗೆ ಉಚಿತ ಗೃಹಜ್ಯೋತಿ ಯೋಜನೆ ದೊರೆಯುತ್ತಿದೆ. ಟ್ಯಾಕ್ಸ್, ಜಿಎಸ್‌ಟಿ ಹೊಂದಿದ ಕುಟುಂಬದ ಸದಸ್ಯರಿಗೂ ಗೃಹಲಕ್ಷ್ಮಿ ಹಣ ನೀಡುತ್ತಿದ್ದು, ಅನ್ನಭಾಗ್ಯದಲ್ಲಿ ಪಡಿತರ ಕಾರ್ಡ್‌ಗಳ ವ್ಯತ್ಯಾಸ ಗೋಚರಿಸಿದೆ. ಈ ಬಗ್ಗೆ ರಾಜ್ಯಮಟ್ಟದಲ್ಲಿ ಅಧಿಕಾರಿಗಳ ತಂಡ ರಚಿಸಿ ತನಿಖೆ ಮಾಡಲು ಮುಖ್ಯಮಂತ್ರಿಗೆ ತಿಳಿಸಲಾಗುವುದು ಎಂದು ಹೇಳಿದ್ದಾರೆ.






















































