
ಬೆಂಗಳೂರು: ರಾಜ್ಯ ಹಿಂದುಳಿದ ವರ್ಗಗಳ ಆಯೋಗ ನಡೆಸುತ್ತಿರುವ ಸಮೀಕ್ಷೆಯು ಸೆಪ್ಟೆಂಬರ್ 22ರಂದು ಪ್ರಾರಂಭವಾಗಿದ್ದು ಅಕ್ಟೋಬರ್ 7ರವರೆಗೆ ನಡೆಯಲಿದೆ. ಹೀಗಾಗಿ ರಾಜ್ಯ ಸರ್ಕಾರವು ‘ಜಾತಿಗಣತಿ’ ಎಂದು ಜನಪ್ರಿಯವಾಗಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸದ ಸರ್ಕಾರಿ ಅಧಿಕಾರಿಗಳು ಮತ್ತು ಸಿಬ್ಬಂದಿಗಳ ವಿರುದ್ಧ ಶಿಸ್ತು ಕ್ರಮ ಕೈಗೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದೆ.
ಗುರುವಾರ ಕಲಬುರ್ಗಿಯಲ್ಲಿ ಸಮೀಕ್ಷೆಯನ್ನು ಗಣತಿದಾರರು ಬಹಿಷ್ಕರಿಸಿ ಆಕ್ರೋಶ ವ್ಯಕ್ತಪಡಿಸಿದ್ದು ಸರ್ಕಾರ ಒದಗಿಸಿರುವ ಆಪ್ ನಲ್ಲಿ ಮನೆಗಳ ಲೊಕೇಶನ್ ತಪ್ಪಾಗಿ ತೋರಿಸುತ್ತಿದೆ. ಪ್ರಮುಖವಾಗಿ ಮೊದಲು ಎಲ್ಲಾ ಗೊಂದಲ ಪರಿಹರಿಸಿ ಟ್ರಯಲ್ ಚೆಕ್ ಮಾಡಿ ನಮ್ಮನ್ನು ಕೆಲಸಕ್ಕೆ ಕಳುಹಿಸಬೇಕಿತ್ತು ಎಂದು ಗಣತಿದಾರರು ಸರ್ಕಾರದ ವಿರುದ್ಧ ಕಿಡಿಕಾರಿದ್ದಾರೆ.






















































